Advertisement
ಮೂಲತಃ ಉತ್ತರ ಪ್ರದೇಶದ ತಾಂಡ ನಿವಾಸಿಯಾಗಿದ್ದು, ಪ್ರಸ್ತುತ ದಿಲ್ಲಿಯ ಸೌತ್‌ವೆಸ್ಟ್‌ನ ಜಗದಂಬಾ ವಿಹಾರ್ ಬಳಿ ವಾಸವಿದ್ದ ಯೂಸುಫ್ ಖಾನ್ (29) ಬಂಧಿತ. ಆತನ ಸಹಚರರಾದ ನೌಷಾದ್ ಮತ್ತು ಪ್ರಭಾಕರ ತಲೆಮರೆಸಿ ಕೊಂಡಿದ್ದು, ಅವರ ಪತ್ತೆಗೆ ಕಾರ್ಯಾ ಚರಣೆ ಮುಂದುವರಿದಿದೆ ಎಂದು ಆಯುಕ್ತ ಸಂದೀಪ್ ಪಾಟೀಲ್ ಅವರು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರದ ಪಂಜಿಮೊಗರಿನ ವಿವೇಕ ನಗರದ ಕಾರ್ತಿಕ್ ಪೂಜಾರಿ (24) ಅವರಿಗೆ ಕಳೆದ ಎ. 8ರಂದು ಭಾರತೀ ಫೈನಾನ್ಸ್‌ನ ನೇಹಾ ಹೆಸ ರಿನ ಮಹಿಳೆ ಎಂದು ಪರಿಚಯಿಸಿಕೊಂಡು ಕರೆ ಮಾಡಿ, “ನಾವು ಕಡಿಮೆ ಬಡ್ಡಿಗೆ ಸಾಲ ಕೊಡುತ್ತೇವೆ. 2 ಲ. ರೂ. ಸಾಲಕ್ಕೆ ಬಡ್ಡಿದರ ಕೇವಲ ಶೇ. 5 ಮಾತ್ರ’ ಎಂದು ತಿಳಿಸಿದ್ದಳು. ಇದನ್ನು ನಂಬಿದ ಕಾರ್ತಿಕ್ ಸಾಲ ಪಡೆಯಲು ಮುಂದಾಗಿದ್ದರು. ಬಳಿಕ ಸಾಲದ ಸೆಕ್ಯೂರಿಟಿ ಚಾರ್ಜ್ (3 ತಿಂಗಳ ಇ.ಎಂ.ಐ.), ಇನ್ಸೂರೆನ್ಸ್ ಇತ್ಯಾದಿ ಒಟ್ಟು 1.70 ಲ. ರೂ. ಗಳನ್ನು ಠೇವಣಿಯಾಗಿ ಇರಿಸಬೇಕೆಂದು ತಿಳಿಸಿದ್ದು, ಅದನ್ನು ಕಾರ್ತಿಕ್ ಆಕೆ ಹೇಳಿದ ವಿವಿಧ ಖಾತೆಗಳಿಗೆ ಜಮೆ ಮಾಡಿದ್ದರು. ಬಳಿಕ “ಭಾರತೀ ಫೈನಾನ್ಸ್’ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ನೇಹಾಳಿಗೆ ಕರೆ ಮಾಡಿದಾಗ ಅದು ಸ್ವೀಕೃತವಾಗುತ್ತಿರಲಿಲ್ಲ. ಬಳಿಕ ಕಾರ್ತಿಕ್ ಮಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡ ಸೈಬರ್ ಕ್ರೈಂ ಪೊಲೀಸರು ವಂಚನೆ ಎಸಗಿದ ಮೊಬೈಲ್ ನಂಬರ್‌ಗಳು ಹಾಗೂ ಬ್ಯಾಂಕ್ ಖಾತೆಗಳ ಮಾಹಿತಿ ಸಂಗ್ರಹಿಸಿ ದಿಲ್ಲಿ ಪೊಲೀಸರ ಸಹಕಾರದಲ್ಲಿ ದಿಲ್ಲಿಯ ಜನಕಪುರಿ ಪರಿಸರ ಹಾಗೂ ಇತರ ಕಡೆಗಳಲ್ಲಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು.
Related Articles
ಆರೋಪಿಯನ್ನು ಪತ್ತೆ ಮಾಡಿ ಆತನ ಕಚೇರಿಗೆ ದಾಳಿ ನಡೆಸಿದಾಗ ಅಲ್ಲಿ ವಂಚಿಸಲು ಬಳಸುತ್ತಿದ್ದ 31 ಮೊಬೈಲ್ ಫೋನ್, 2 ಲ್ಯಾಪ್‌ಟಾಪ್, ಸಾಲದ ಬಗ್ಗೆ ಮಾಹಿತಿ ಬರೆದಿರುವ 10 ಪುಸ್ತಕಗಳು, 70 ಸಾ. ರೂ. ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Advertisement
ಹೀಗೆತ್ತು ಕಾರ್ಯವೈಖರಿಯೂಸುಫ್ ಖಾನ್ ಹಲವು ಬ್ಯಾಂಕ್‌ಗಳ ಕ್ರೆಡಿಟ್ ಕಾರ್ಡ್ ಗಳನ್ನು ನೀಡುವ ಏಜೆಂಟ್ ಆಗಿ ವ್ಯವಹಾರ ಮಾಡಿಕೊಂಡಿದ್ದ. ಈತ ನಕಲಿಯಾಗಿ ಭಾರತೀ ಫೈನಾನ್ಸ್ ಕಂ. ಇನ್ ಹೆಸರಿನಲ್ಲಿ ವೆಬ್‌ಸೈಟ್ ಮಾಡಿದ್ದ. ಇದರ ಮೂಲಕ ತನ್ನನ್ನು ಸಂಪರ್ಕಿಸುವವರಿಗೆ ಶೇ.5 ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ನಂಬಿಸುತ್ತಿದ್ದ. ಸೈಬರ್ ಕ್ರೈಂ ಪಿಎಸ್‌ಐ ಚಂದ್ರಶೇಖರಯ್ಯ, ಸಿಸಿಆರ್‌ಬಿ ಘಟಕದ ಪಿಎಸ್‌ಐ ಶ್ಯಾಮ್ ಸುಂದರ್, ಸಿಬಂದಿ ರಾಜೇಂದ್ರ, ಕಂಪ್ಯೂಟರ್ ವಿಭಾಗದ ಮನೋಜ್ ಹಾಗೂ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಎಎಸ್‌ಐ ಓಂದಾಸ್, ಹೆಡ್ ಕಾನ್‌ಸ್ಟೆಬಲ್‌ಗಳಾದ ದಿನೇಶ್ ಬೇಕಲ್, ಕುಮಾರ್, ಮಾಯಾ ಪ್ರಭು, ಕಾನ್‌ಸ್ಟೆಬಲ್‌ಗಳಾದ ವಿಜಯ್ ಶೆಟ್ಟಿ, ಗೃಹರಕ್ಷಕ ವಿದೀಪ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ತಂಡಕ್ಕೆ ಸೂಕ್ತ ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡುವುದಾಗಿ ಆಯುಕ್ತರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಹನುಮಂತರಾಯ ಮತ್ತು ಲಕ್ಷಿ ಗಣೇಶ್, ಸಿಸಿಆರ್‌ಬಿ ಘಟಕದ ಪಿಎಸ್‌ಐ ಶ್ಯಾಮ್ ಸುಂದರ್ ಮತ್ತು ಸೈಬರ್ ಕ್ರೈಂ ಠಾಣೆಯ ಅಧಿಕಾರಿ ಹಾಗೂ ಸಿಬಂದಿ ಉಪಸ್ಥಿತರಿದ್ದರು. 400 ಮಂದಿಗೆ ಕರೆ; 60 ಮಂದಿಗೆ ಮೋಸ
ದಿಲ್ಲಿಯಲ್ಲಿ ಇದ್ದುಕೊಂಡೇ ದೇಶದ ಉದ್ದಗಲಕ್ಕೂ ಆರೋಪಿಗಳು ವಂಚನಾ ಜಾಲ ಬೀಸಿದ್ದರು. 6 ತಿಂಗಳಿನಿಂದ 400ಕ್ಕೂ ಅಧಿಕ ಮಂದಿಗೆ ಕರೆ ಮಾಡಿದ್ದು, 50- 60 ಮಂದಿ ಮೋಸ ಹೋಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದರು. ನಕಲಿ ಪ್ರಮಾಣಪತ್ರವಿತ್ತು
ಆರೋಪಿಯು ಪದೇಪದೆ ಫೋನ್ ಮಾಡಿ ನಂಬಿಕೆ ಬರುವಂತೆ ವರ್ತಿಸುತ್ತಿದ್ದ. “ನ್ಯಾಶನಲ್ ಇ- ಗವರ್ನೆನ್ಸ್’ ಎಂಬ ನಕಲಿ ಪ್ರಮಾಣ ಪತ್ರವನ್ನು ತೋರಿಸಿ ತನ್ನ ಸಂಸ್ಥೆಯ ಮೇಲೆ ವಿಶ್ವಾಸ ಬರುವಂತೆ ನೋಡಿಕೊಳ್ಳುತ್ತಿದ್ದ. ಸಾರ್ವಜನಿಕರ ಫೋನ್ ನಂಬ್ರಗಳನ್ನು ದೂರವಾಣಿ ಸೇವಾ ಸಂಸ್ಥೆಗಳಿಂದ ಪಡೆಯುತ್ತಿದ್ದ ಎಂಬ ಮಾಹಿತಿ ಲಭಿಸಿದೆ ಎಂದು ಆಯುಕ್ತರು ತಿಳಿಸಿದರು. ವಿಮಾನ ಯಾನ ಸಂಸ್ಥೆಯ ನಕಲಿ ವೆಬ್‌ಸೈಟ್
ಏರ್‌ಲೈನ್ ಕಂಪೆನಿಯ ನಕಲಿ ವೆಬ್‌ಸೈಟ್ ವಂಚಿಸುತ್ತಿರುವ ಬಗ್ಗೆ 2 ಪ್ರಕರಣಗಳು ಸೈಬರ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಆಯುಕ್ತರು ತಿಳಿಸಿದರು.