Advertisement

ತಾಮ್ರಕ್ಕೆ ಚಿನ್ನ ಲೇಪಿಸಿ ವಂಚನೆ

12:16 PM Nov 24, 2022 | Team Udayavani |

ಬೆಂಗಳೂರು: ಬ್ಯಾಂಕ್‌ಗಳಲ್ಲಿ ನಕಲಿ ಚಿನ್ನಾಭರಣ ಅಡಮಾನ ಇಟ್ಟು ಕೋಟ್ಯಂತರ ರೂ. ವಂಚಿಸಿದ್ದ ಗದಗ ಜಿಲ್ಲೆಯ ಬಿಜೆಪಿ ಕಾರ್ಪೋರೆಟರ್‌ ಪುತ್ರ ಸೇರಿ ಮೂವರು ಆರೋಪಿಗಳನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

Advertisement

ಗದಗ ಜಿಲ್ಲೆಯ ಬಿಜೆಪಿ ಕಾರ್ಪೋರೆಟರ್‌ ವೊಬ್ಬರ ಪುತ್ರ ದತ್ತಾತ್ರೇಯ ಬಾಕಳೆ ಅಲಿಯಾಸ್‌ ಯಶ್‌(28), ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಅರುಣ್‌ ರಾಜು ಕಾನಡೆ (30) ಮತ್ತು ಉಡುಪಿ ಜಿಲ್ಲೆಯ ಸತ್ಯಾನಂದ ಅಲಿಯಾಸ್‌ ಸತ್ಯ(28) ಬಂಧಿತರು.

ಆರೋಪಿಗಳಿಂದ 1475.640 ಗ್ರಾಂ ನಕಲಿ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಪೈಕಿ ಸತ್ಯಾನಂದ ಇತ್ತೀಚೆಗೆ ಠಾಣೆ ವ್ಯಾಪ್ತಿಯ ಬ್ಯಾಂಕ್‌ವೊಂದಕ್ಕೆ ಮಹಿಳೆ ಜಯಲಕ್ಷ್ಮೀ ಎಂಬಾಕೆ ಜತೆ ಹೋಗಿ, ಮಹಿಳೆ ಹೆಸರಿನಲ್ಲಿ 235 ಗ್ರಾಂ ಚಿನ್ನಾಭರಣ ಅಡಮಾನ ಇಟ್ಟು 7.15 ಲಕ್ಷ ರೂ. ಸಾಲ ಪಡೆದುಕೊಳ್ಳಲು ಮುಂದಾಗಿದ್ದನು. ಆಗ ಅನುಮಾನಗೊಂಡ ಬ್ಯಾಂಕ್‌ ಸಿಬ್ಬಂದಿ ಚಿನ್ನಾಭರಣಗಳನ್ನು ಪರಿಶೀಲಿಸಿ ನಕಲಿ ಚಿನ್ನಾಭರಣಗಳೆಂದು ದೃಢವಾಗುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಪಶ್ಚಿಮ ಬಂಗಾಳದಿಂದ ನಕಲಿ ಚಿನ್ನ:

ಆರೋಪಿಗಳು ಪಶ್ಚಿಮ ಬಂಗಾಳದಲ್ಲಿ ತಾಮ್ರದ ಮೇಲೆ ಚಿನ್ನದ ಲೇಪನ ಮಾಡಿ ಹಾಲ್‌ಮಾರ್ಕ್‌ ಗುರುತು ಮುದ್ರಿಸುತ್ತಿದ್ದರು. ನಂತರ ಅವುಗಳನ್ನು ಪಶ್ಚಿಮ ಬಂಗಾಳದಿಂದ ಕೋರಿಯರ್‌ ಮೂಲಕ ಬೆಂಗಳೂರಿಗೆ ತರಿಸಿಕೊಂಡು ರಾಷ್ಟ್ರೀಕೃತ ಬ್ಯಾಂಕ್‌ ಗಳಲ್ಲಿ ಅಡಮಾನ ಇಟ್ಟು ಸಾಲ ಪಡೆಯುತ್ತಿದ್ದರು. ಬಳಿಕ ಹಣ ಕಟ್ಟದೆ ವಂಚಿಸುತ್ತಿದ್ದರು. ಇದೇ ರೀತಿ ಗುಜರಾತ್‌, ಕರ್ನಾಟಕದ ಬೆಂಗಳೂರು, ಉಡುಪಿ, ಗದಗ, ಕೊಪ್ಪಳ, ಹುಬ್ಬಳ್ಳಿ ಜಿಲ್ಲೆಗಳಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸುಮಾರು 15 ಕೆ. ಜಿಗಳಷ್ಟು ನಕಲಿ ಚಿನ್ನಾಭರಣಗಳನ್ನು ಅಡಮಾನ ಇಟ್ಟು ಕೋಟ್ಯಂತರ ರೂ. ಸಾಲವಾಗಿ ಪಡೆದುಕೊಂಡಿದ್ದಾರೆ ಎಂಬುದು ಗೊತ್ತಾಗಿದೆ.

Advertisement

ತಾಮ್ರದಿಂದ ತಯಾರಿಸಿದ ಆಭರಣಕ್ಕೆ ಚಿನ್ನದ ಲೇಪನ ಮಾಡಿಸಿದ್ದರೂ ಅದರಲ್ಲಿ ಶೇ.30ರಷ್ಟು ಚಿನ್ನದ ಅಂಶ ಇರುವುದು ಪತ್ತೆಯಾಗಿದೆ. ಹೀಗಾಗಿ ಅದನ್ನು ಕಂಡ ಕೆಲವರು ಅಸಲಿ ಚಿನ್ನ ಎಂದು ಚಿನ್ನಾಭರಣ ಅಡಮಾನ ಇಟ್ಟುಕೊಳ್ಳುತ್ತಿದ್ದರು. ಕ್ಯಾಸಿನೋದಲ್ಲಿ ಮೋಜು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಚಿನ್ನಾಭರಣ ಅಡಮಾನ ಇಟ್ಟು ಬಂದ ಹಣದಲ್ಲಿ ಗೋವಾದ ಕ್ಯಾಸಿನೋದಲ್ಲಿ ಜೂಜಾಟ ಆಡಿ ಮೋಜು-ಮಸ್ತಿ ಮಾಡುತ್ತಿದ್ದರು. ನಂತರ ಇತರೆ ತಮ್ಮ ಚಟಗಳಿಗೆ ಹಣ ವ್ಯಯಿಸುತ್ತಿದ್ದರು ಎಂದು ಪೊಲೀಸರು ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next