ಬೆಂಗಳೂರು: ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್ಸ್ಟಾಗ್ರಾಂಗಳ ಮೂಲಕ ಪರಿಚಯವಾಗುವ ವಿವಾಹಿತ ಮಹಿಳೆಯರ ಜತೆ ದೈಹಿಕ ಸಂಪರ್ಕ ಬೆಳೆಸಿ, ವಿಡಿಯೋ ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಅಸ್ಸಾಂ ಮೂಲದ ಆರೋಪಿಯನ್ನು ಆಗ್ನೇಯ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂ ಮೂಲದ ಫೈಸಲ್ (26) ಬಂಧಿತ. 26 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಚೆನ್ನೈನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಕೆಲ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಆರೋಪಿ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಇನ್ಸ್ಟಾಗ್ರಾಂನಲ್ಲಿ ಹೆಚ್ಚು ಸಕ್ರಿಯವಾಗಿದ್ದ. ಈ ವೇಳೆ ಪರಿಚಯವಾದ ವಿವಾಹಿತ ಮಹಿಳೆಯ ಜತೆ ಆತ್ಮೀಯವಾಗಿ ನಡೆದುಕೊಂಡು ದೈಹಿಕ ಸಂಪರ್ಕ ಬೆಳೆಸಿ, ಆ ಖಾಸಗಿ ಕ್ಷಣಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದ.
ಕೆಲ ತಿಂಗಳ ಹಿಂದೆ ಆರೋಪಿ ಬೆಂಗಳೂರಿನ ಕಂಪನಿ ತೊರೆದು ಚೆನ್ನೈನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಬಳಿಕ ಸಂತ್ರಸ್ತೆಗೆ ಕರೆ ಮಾಡಿ ಚೆನ್ನೈಗೆ ಬಂದು, ತನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಬೇಕು ಎಂದು ಒತ್ತಾಯಿಸಿದ್ದಾನೆ. ಒಂದು ವೇಳೆ ಬರದಿದ್ದರೆ ಹಣ ಕೊಡಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ. ಅದಕ್ಕೆ ಆಕೆ ನಿರಾಕರಿಸಿದಾಗ, ಖಾಸಗಿ ಕ್ಷಣಗಳ ದೃಶ್ಯಗಳನ್ನು ಆಕೆಗೆ ಕಳುಹಿಸಿ ಬೆದರಿಕೆ ಹಾಕಿದ್ದಾನೆ. ಅದರಿಂದ ನೊಂದ ಸಂತ್ರಸ್ತೆ ದೂರು ಕೊಟ್ಟಿದ್ದರು.
ಈ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಸಂತ್ರಸ್ತೆ ಮೂಲಕವೇ ಆರೋಪಿಗೆ ಕರೆ ಮಾಡಿಸಿ, ಚೆನ್ನೈಗೆ ಬರುವುದಾಗಿ ಹೇಳಿದ್ದಾರೆ. ಬಳಿಕ ಆಕೆ ಜತೆ ಪೊಲೀಸರು ತೆರಳಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಹಲವು ಮಹಿಳೆಯರಿಗೆ ಬ್ಲಾಕ್‌ಮೇಲ್: ಆರೋಪಿಯ ವಿಚಾರಣೆ ನಡೆಸಿ, ಆತನ ಮೊಬೈಲ್ ಜಪ್ತಿ ಮಾಡಿದಾಗ, ಈ ಹಿಂದೆ ಹಲವು ಮಹಿಳೆಯರಿಗೆ ವಂಚಿಸಿರುವುದು ಪತ್ತೆಯಾಗಿದೆ. ಇನ್‌ಸ್ಟ್ರಾಗ್ರಾಂನಲ್ಲಿ 2-3 ನಕಲಿ ಖಾತೆ ತೆರೆದಿರುವ ಆರೋಪಿ, ಚೆಂದದ ಫೋಟೋಗಳನ್ನು ಹಾಗೂ ವಿಶೇಷ ದಿನದ ವಿಡಿಯೋ, ಫೋಟೋಗಳನ್ನು ಹಂಚಿಕೊಳ್ಳುವ ವಿವಾಹಿತ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡಿದ್ದ. ಅವರೊಂದಿಗೆ ಗುಡ್ ಮಾರ್ನಿಂಗ್, ಗುಡ್‌ನೈಟ್ ಎಂದೆಲ್ಲ ಹಾಕಿ ಪರಿಚಯಿಸಿಕೊಳ್ಳುತ್ತಿದ್ದ. ಬಳಿಕ ಮಹಿಳಾ ಸ್ವಾತಂತ್ರ್ಯ ಹಾಗೂ ಇತರೆ ದೌರ್ಜನ್ಯ ತಡೆಯಬೇಕೆಂದು ಹೇಳಿ, ಅವರೊಂದಿಗೆ ಆತ್ಮೀಯತೆ ಬೆಳೆಸುತ್ತಿದ್ದ. ಆ ನಂತರ ಪ್ರೀತಿಸುವುದಾಗಿ ನಂಬಿಸಿ ಅವರೊಂದಿಗೆ ದೈಹಿಕ ಸಂಪರ್ಕ ಬೆಳೆಸುತ್ತಿದ್ದ. ಮಹಿಳೆಯರ ಜತೆಗಿನ ಲೈಂಗಿಕ ಕ್ರಿಯೆಯ ವಿಡಿಯೋ ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ವೆುàಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಈ ಸಂಬಂಧ ಎಚ್‌ಎಸ್‌ಆರ್ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.