Advertisement

ಬಾದರ್ಲಿ-ನಾಡಗೌಡರಿಂದ ರೈತರಿಗೆ ವಂಚನೆ

02:43 PM Dec 17, 2018 | Team Udayavani |

ಸಿಂಧನೂರು: ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರವಿದ್ದರೂ ತುಂಗಭದ್ರಾ ಎಡದಂಡೆ ನಾಲೆ ರೈತರಿಗೆ ಎರಡನೇ ಬೆಳೆಗೆ ನೀರು ಕೊಡದೇ ಜಿಲ್ಲಾ ಉಸ್ತುವಾರಿ ಸಚಿವ ಜೆಡಿಎಸ್‌ನ ವೆಂಕಟರಾವ್‌ ನಾಡಗೌಡ ಮತ್ತು ಮಾಜಿ ಶಾಸಕ ಕಾಂಗ್ರೆಸ್‌ನ ಹಂಪನಗೌಡ ಬಾದರ್ಲಿ ನೀರಿನ ವಿಷಯದಲ್ಲಿ ಒಬ್ಬರ ವಿರುದ್ಧ ಒಬ್ಬರ ಹೇಳಿಕೆ ನೀಡಿ ರಾಜಕೀಯ ಮಾಡುತ್ತ ರೈತರನ್ನು ವಂಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಕೊಲ್ಲಾ ಶೇಷಗಿರಿರಾವ್‌ ಹೇಳಿದರು.

Advertisement

ನಗರದ ಬಿಜೆಪಿ ಕಾರ್ಯಾಲಯದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ವೆಂಕಟರಾವ್‌ ನಾಡಗೌಡರು ನೀರಿನ ವಿಷಯ ಹೇಳಿಕೊಂಡೇ ಗೆಲುವು ಸಾಧಿಸಿದ್ದಾರೆ. ಈಗ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಎರಡನೇ ಬೆಳೆಗೆ ನೀರು ಕೊಡದೇ ಮಾತು ತಪ್ಪಿದ್ದಾರೆ. ಸುಳ್ಳಿನ ಸರದಾರರಾಗಿದ್ದಾರೆ ಎಂದು ಟೀಕಿಸಿದರು.

ಇನ್ನು ಕಾಂಗ್ರೆಸ್‌ನ ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪನವರು ಸಹ ಶಾಶ್ವತ ಪರಿಹಾರಕ್ಕಾಗಿ ಹೋರಾಟ ಮಾಡುವುದಾಗಿ ಹೇಳಿಕೆ ನೀಡುತ್ತ ನೀರಿನ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಇವರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರರೇ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ನಗರದಲ್ಲಿ ಒಳಚರಂಡಿ ಮತ್ತು 24/7 ನೀರು ಹಾಗೂ ನಗರೋತ್ಥಾನ ಕಾಮಗಾರಿಗಳು ತೀರಾ ಕಳಪೆ ಮಟ್ಟದಲ್ಲಿ
ನಡೆಯುತ್ತಿವೆ. ಇದರ ಬಗ್ಗೆ ಹಿಂದೆ ಧ್ವನಿಯೆತ್ತಿದ್ದ ನಾಡಗೌಡರು ಸಚಿವರಾದ ನಂತರ ಮರೆತಿದ್ದಾರೆ. ಕಳಪೆ ಕಾಮಗಾರಿ ಮಾಡಿದವರ ವಿರುದ್ಧ ಕ್ರಮ ಜರುಗಿಸಲು ಅವರಿಂದ ಆಗುತ್ತಿಲ್ಲ. ತಮ್ಮ ಬೆಂಬಲಿಗರಿಗೆ ಮಾತ್ರ ಕಾಮಗಾರಿ ನೀಡುವ ಗುಣ ಜೆಡಿಎಸ್‌ ನಾಯಕರಲ್ಲಿದೆ ಎಂದು ಆರೋಪಿಸಿದರು. 

ಈಗಾಗಲೇ ಕೇಂದ್ರ ಸರ್ಕಾರ ಭತ್ತಕ್ಕೆ ಬೆಂಬಲ ಬೆಲೆ ಘೋಷಿಸಿದೆ. ರಾಜ್ಯ ಸರ್ಕಾರವು ಬೆಂಬಲ ಬೆಲೆ ಘೋಷಿಸಬೇಕು. ರೈತರೊಂದಿಗೆ ರಾಜ್ಯ ಸರ್ಕಾರ ಚೆಲ್ಲಾಟವಾಡುವುದನ್ನು ಬಿಡಬೇಕು. ಮೊದಲ ಬಾರಿಗೆ ಕ್ಷೇತ್ರದ ಶಾಸಕರು ಸಚಿವರಾಗಿದ್ದರೂ ಪ್ರಯೋಜನವಿಲ್ಲದಂತಾಗಿದೆ. ತಾಲೂಕಿನ ಜನತೆಗೆ ಅಥವಾ ಜಿಲ್ಲೆಯ ಜನತೆಗೆ ನಾಡಗೌಡರ
ಕೊಡುಗೆ ಏನು ಎಂದು ಪ್ರಶ್ನಿಸಿದರು. ಎಲ್ಲವನ್ನು ಮರೆಸಲು ನಾಡಗೌಡರು ಜನವರಿಯಲ್ಲಿ ಸಿಂಧನೂರಿನಲ್ಲಿ ರಾಜ್ಯಮಟ್ಟದ
ಪಶುಮೇಳ ನಡೆಸಲು ಮುಂದಾಗಿದ್ದಾರೆ. ಮೊದಲು ರೈತರಿಗೆ ಎರಡನೇ ಬೆಳೆಗೆ ನೀರು ಕೊಡಿಸಲು ಮುಂದಾಗಲಿ. ನಂತರ ರಾಜ್ಯ ಮಟ್ಟದ ಕಾರ್ಯಕ್ರಮ ಮಾಡುವುದು ಒಳ್ಳೆಯದು ಎಂದರು.

Advertisement

ಸಚಿವರ ಸಹೋದರರ ದೌರ್ಜನ್ಯ: ತಾಲೂಕಿನಾದ್ಯಂತ ಸಚಿವ ನಾಡಗೌಡರ ಸಹೋದರರ ದೌರ್ಜನ್ಯ ಹೆಚ್ಚಿದೆ. ಆರ್‌.
ಎಚ್‌.ನಂ. ಕ್ಯಾಂಪ್‌ಗ್ಳಲ್ಲಿ ಬಡವರ ಗುಡಿಸಲುಗಳನ್ನು ಕಿತ್ತಿಸುವ ಕೀಳುಮಟ್ಟದ ರಾಜಕೀಯವನ್ನು ಸಹೋದರರು
ಮಾಡುತ್ತಿದ್ದಾರೆ. ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ಮತ ಹಾಕಿಲ್ಲವೆಂಬ ಒಂದೇ ಕಾರಣಕ್ಕೆ ದೌರ್ಜನ್ಯ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಅಧಿಕಾರಿಗಳು ಗಪ್‌ಚುಪ್‌: ರಾಜ್ಯದಲ್ಲಿ ಮೈತ್ರಿ ಸರ್ಕಾರದ ಆಡಳಿತ ಇರುವುದರಿಂದ ತಾಲೂಕಿನಲ್ಲಿ ಕಾಮಗಾರಿಗಳು ಎರಡೂ ಪಕ್ಷದ ಮುಖಂಡರಿಗೆ ಹಂಚಿಕೆಯಾಗುತ್ತಿವೆ. ಕಳಪೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರ ಮೇಲೆ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದಂತೆ ಸ್ಥಳೀಯ ನಾಯಕರು ನೋಡಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಮಧ್ವರಾಜ್‌ ಆಚಾರ್‌, ನಗರ ಘಟಕದ ಅಡಿವೆಪ್ಪ, ಎಸ್‌ಟಿ ಮೋರ್ಚಾ ರಾಜ್ಯ ಸದಸ್ಯ ಹನುಮೇಶ ನಾಯಕ ಇತರರು ಇದ್ದರು.

ಸಿಂಧನೂರಿನಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಾಯಕರು ನೀ ಸತ್ತಂಗ ಮಾಡು, ನಾ ಅತ್ತಂಗ ಮಾಡ್ತಿನಿ ಎಂಬಂತೆ ನಡೆದುಕೊಳ್ಳುತ್ತ ರೈತರ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ.
 ಕೊಲ್ಲಾ ಶೇಷಗಿರಿರಾವ್‌, ಬಿಜೆಪಿ ಮುಖಂಡರು

Advertisement

Udayavani is now on Telegram. Click here to join our channel and stay updated with the latest news.

Next