ಬೆಂಗಳೂರು: ಸಿನಿಮಾಗಳ ಪ್ರೇರಣೆ ಹಾಗೂ ಐಷಾರಾಮಿ ಜೀವನಕ್ಕಾಗಿ ಪೊಲೀಸ್ ಅಧಿಕಾರಿ ಸೋಗಿನಲ್ಲಿ ಸಾರ್ವಜನಿಕರಿಗೆ ವಂಚಿಸಿದ ಪ್ರಕರಣ ದಲ್ಲಿ ಬಂಧನಕ್ಕೊಳಗಾಗಿದ್ದ ನಕಲಿ ಐಪಿಎಸ್ ಅಧಿ ಕಾರಿ ಶ್ರೀನಿವಾಸ್ ಎಂಬಾತ ಭಾರತೀಯ ರೈಲ್ವೆ ಅಧಿಕಾರಿ, ವೈದ್ಯ, ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿ, ಕೇಂದ್ರ ಗುಪ್ತಚರ ವಿಭಾಗದ ಅಧಿಕಾರಿ ಎಂದು ಸಾರ್ವಜನಿಕರಿಗೆ ವಂಚಿಸಿರುವುದು ತಲಘಟ್ಟ ಪುರ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸಾರ್ವಜನಿಕರಿಗೆ ವಂಚಿಸಿದ ಕೋಟ್ಯಂತರ ರೂ.ನಲ್ಲಿ 54 ಲಕ್ಷ ರೂ. ಮೌಲ್ಯದ 21 ಐಫೋನ್, ಇನೋವಾ ಕಾರು, ಬಿಎಂಡ್ಲ್ಯೂ ಬೈಕ್, ಟ್ರಯಂಫ್ ಟೈಗರ್ ಎಕ್ಸ್‌ಆರ್‌ಎಕ್ಸ್ ಬೈಕ್, ಎಕ್ಸ್-ಪಲ್ಸ್ ಬೈಕ್, ರಾಯಲ್ ಎನ್‌ಫೀಲ್ಡ್ ವಶಕ್ಕೆ ಪಡೆಯಲಾಗಿದೆ. ಹಾಗೆಯೇ 36.20 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ. ಜತೆಗೆ ಆ್ಯಪಲ್ ಕಂಪನಿಯ ಲ್ಯಾಪ್‌ಟಾಪ್, ಒಂದು ಡಮ್ಮಿ ಪಿಸ್ತೂಲ್, 2 ವಾಕಿಟಾಕಿಗಳು, ನಕಲಿ ಗುರುತಿನ ಚೀಟಿಗಳನ್ನು ಜಪ್ತಿ ಮಾಡಲಾಗಿದೆ.
ದತ್ತು ಮಗ: ಚಂದ್ರಲೇಔಟ್ ನಿವಾಸಿ ಎಂ.ರಾಜು ಎಂಬುವರು ಶ್ರೀನಿವಾಸ್‌ನನ್ನು ಆಸ್ಪತ್ರೆಯಿಂದ ತಂದು ದತ್ತು ಮಗನಾಗಿ ಸಾಕಿದ್ದಾರೆ. ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಕಾಲೇಜಿನಲ್ಲಿ ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್‌ಗೆ ಸೇರಿಸಿದ್ದಾಗ ಅರ್ಧಕ್ಕೆ ಓದು ನಿಲ್ಲಿಸಿದ್ದಾನೆ. ಇದೇ ವೇಳೆ ಐಷಾರಾಮಿ ಜೀವನಕ್ಕಾಗಿ 2010ರಲ್ಲಿ ವಿಜಯನಗರ ಠಾಣೆ ವ್ಯಾಪ್ತಿಯಲ್ಲಿ 2 ಕಾರು ಕದ್ದಿದ್ದನು. ಅದರಲ್ಲಿ ಜೈಲಿಗೂ ಹೋಗಿ ಬಂದಿದ್ದನು. ನಂತರ ಮುಕ್ತ ವಿವಿಯಲ್ಲಿ ಬಿಸಿಎ ವ್ಯಾಸಂಗ ಮಾಡಿ, ಬನ್ನೇರುಘಟ್ಟ, ಬೇಗೂರು ಕೊಪ್ಪ, ಹುಲ್ಲಹಳ್ಳಿಯಲ್ಲಿರುವ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಗ್ರಾಫಿಕ್ ಡಿಸೈನರ್ ಆಗಿದ್ದ. ಅದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ರಮ್ಯಾ ಎಂಬಾಕೆಯನ್ನು ಪರಿಚಯಿಸಿಕೊಂಡಿದ್ದಾನೆ. ಕೆಲ ದಿನಗಳ ಬಳಿಕ “ತಾನು ಐಪಿಎಸ್ ತೇರ್ಗಡೆ ಆಗಿದ್ದೇನೆ. ನಿನ್ನನ್ನೇ ಮದುವೆ ಆಗುತ್ತೇನೆ’ ಎಂದು ಆಕೆ ಜತೆಗೆ ಗೋವಾ, ಚೆನ್ನೈ, ಹೈದರಾಬಾದ್ ಮತ್ತಿತರ ಕಡೆ ಕರೆದೊಯ್ದು ಸುತ್ತಾಡಿ ವಂಚಿಸಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮೊದಲಿಗೆ “ನಾನು ಸಬ್‌ಇನ್‌ಸ್ಪೆಕ್ಟರ್ ಆಗಿದ್ದು, ಐಬಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ನಂಬಿಸಿದ್ದಾನೆ. ಬಳಿಕ ಐಪಿಎಸ್ ಪರೀಕ್ಷೆಯಲ್ಲಿ 7ನೇ ರ್‍ಯಾಂಕ್ ಪಡೆದು ಉತ್ತೀರ್ಣನಾಗಿದ್ದೇನೆ’ ಎಂದು ನಂಬಿಸಿದ್ದಾನೆ. ಅಲ್ಲದೆ, ಅದಕ್ಕೆ ಪೂರಕವಾಗಿ ನಕಲಿ ಗುರುತಿನ ಚೀಟಿ, ಪೊಲೀಸ್ ಅಧಿಕಾರಿಯ ಸಮವಸ್ತ್ರ ಧರಿಸಿ, ಇನೋವಾ ಕಾರಿಗೆ ಪೊಲೀಸ್ ವಾಹನಗಳ ಮೇಲೆ ಅಳವಡಿಸಿರುವ ಟಾಪ್‌ಲೈಟ್ ಹಾಕಿಕೊಂಡಿದ್ದಾನೆ. ಡಮ್ಮಿ ಪಿಸ್ತೂಲ್, ವಾಕಿಟಾಕಿಗಳನ್ನು ಖಾಸಗಿಯಾಗಿ ಖರೀದಿಸಿ, ಅಸಲಿ ಎಂದು ನಂಬಿಸಿದ್ದಾನೆ. ಸಾರ್ವಜನಿಕರಿಗೆ ಲ್ಯಾಂಡ್ ಡಿಲೀಂಗ್ ಹೆಸರಲ್ಲಿ ಕೋಟ್ಯಂತರ ರೂ. ಪಡೆದು ವಂಚಿಸಿದ್ದಾನೆ ಎಂದು ಪೊಲೀಸರು ಹೇಳಿದರು.
Related Articles
ದಕ್ಷಿಣ ವಿಭಾಗ ಡಿಸಿಪಿ ಪಿ.ಕೃಷ್ಣಕಾಂತ್, ಸುಬ್ರಹ್ಮಣ್ಯಪುರ ಎಸಿಪಿ ದ್ವಾರಿಕಾ ಕೆ. ನಾಯಕ್ ಮಾರ್ಗದರ್ಶನದಲ್ಲಿ ತಲಘಟ್ಟಪುರ ಠಾಣೆ ಇನ್ ಸ್ಪೆಕ್ಟರ್ ಎನ್.ಜಗದೀಶ್ ನೇತೃತ್ವದಲ್ಲಿ ಪಿಎಸ್‌ಐ ಕೆ.ಎಲ್. ವಿನಯ್, ಸಿಬ್ಬಂದಿ ಕಾರ್ಯಾಚರಣೆ ನಡೆದಿದೆ.
ಡೀಲ್ ಹೆಸರಿನಲ್ಲಿ ಕೋಟಿ ರೂ. ಪಡೆದು ಪರಾರಿ : ತಲಘಟ್ಟಪುರ ನಿವಾಸಿ ಹಾಗೂ ದೂರುದಾರ ವೆಂಕಟನಾರಾಯಣ್‌ಗೆ ಸ್ನೇಹಿತ ವೆಂಕಟರಮಣ್ಣಪ್ಪ ಎಂಬುವರ ಮೂಲಕ ಶ್ರೀನಿವಾಸ್ ಪರಿಚಯವಾಗಿದ್ದಾನೆ. ಈ ವೇಳೆ ತಾನೊಬ್ಬ ಐಪಿಎಸ್ ಪೊಲೀಸ್ ಅಧಿಕಾರಿಯಾಗಿದ್ದು, ಮೈಸೂರಿನಲ್ಲಿ ಪ್ರೊಬೇಷನರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಸದ್ಯದಲ್ಲಿ ಬೆಂಗಳೂರಿಗೆ ಡಿಸಿಪಿಯಾಗಿ ಬಡ್ತಿ ಪಡೆದು ಬರುತ್ತೇನೆ ಎಂದು ನಂಬಿಸಿದ್ದಾನೆ. ಜತೆಗೆ ಮೈಸೂರಿನಲ್ಲಿ ಆಸ್ತಿಯೊಂದರ ಪ್ರಕರಣದಲ್ಲಿ 450 ಕೋಟಿ ರೂ. ಡೀಲ್ ಇದ್ದು, ಅದರಲ್ಲಿ 250 ಕೋಟಿ ರೂ. ಬರುತ್ತದೆ. ಹೀಗಾಗಿ ತನಗೆ 2.5 ಕೋಟಿ ರೂ. ಅಗತ್ಯವಿದೆ ಎಂದು, ಮುಂಗಡ 49 ಲಕ್ಷ ರೂ. ಪಡೆದು, ಡಿಸೆಂಬರ್‌ನಲ್ಲಿ ವಾಪಸ್ ನೀಡಿದ್ದಾನೆ. ಅನಂತರ ಹೆಚ್ಚುವರಿ ಹಣ ಕೇಳಿದಾಗ, ಜಯನಗರದ ಸುಖ್‌ಸಾಗರ್ ಹೋಟೆಲ್ ಮಾಲೀಕ ಅಭಿಷೇಕ್ ಪೂಜಾರಿ ಅವರಿಂದ 1.20 ಕೋಟಿ ರೂ. ಹಾಗೂ ಸ್ನೇಹಿತರೊಬ್ಬರಿಂದ 56 ಲಕ್ಷ ರೂ. ಕೊಡಿಸಿದ್ದಾರೆ. ಆದರೆ, ಆರೋಪಿ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಪರಾರಿಯಾಗಿದ್ದ ಎಂದು ಪೊಲೀಸರು ಹೇಳಿದರು.
ಅತ್ಯುನ್ನತ ಹುದ್ದೆಗಳ ಹೆಸರಿನಲ್ಲಿ ಐಡಿ ಸೃಷ್ಟಿ : ಆರೋಪಿ ಶ್ರೀನಿವಾಸ್ ಮನೆಯಲ್ಲಿ ಶೋಧ ನಡೆಸಿದಾಗ ಈತ, ಭಾರತೀಯ ರೈಲ್ವೆಯಲ್ಲಿ ಆಪರೇಷನ್ ಎಕ್ಸಿಕ್ಯೂಟಿವ್, ಎಂಬಿಬಿಎಸ್, ಎಂಡಿ ಹೃದ್ರೋಗ ತಜ್ಞ ಎಂದು ಕರ್ನಾಟಕ ಮೆಡಿಕಲ್ ಕೌನ್ಸಿನ್ ಹೆಸರಿನಲ್ಲಿ ನಕಲಿ ಗುರುತಿನ ಚೀಟಿ ಪಡೆದುಕೊಂಡಿದ್ದಾನೆ. ರಕ್ಷಣಾ ಸಚಿವಾಲಯದಲ್ಲಿ ರಿಮೋಟ್ ಪೈಲೆಟ್ ಎಂಬ ಹುದ್ದೆಯಲ್ಲಿರುವಂತೆ ಐಡಿ ಕಾರ್ಡ್ ಸೃಷ್ಟಿಸಿಕೊಂಡಿದ್ದಾನೆ.
ಹಾಗೆಯೇ ಕೇಂದ್ರ ಗುಪ್ತಚರ ಇಲಾಖೆಯಲ್ಲಿ ಎಎಸ್‌ಐ(ಸಹಾಯಕ ಗುಪ್ತ ಚರ ಅಧಿಕಾರಿ 11) ಎಂಬ ಹುದ್ದೆಯಲ್ಲಿರುವುದಾಗಿ ಗುರುತಿನ ಚೀಟಿಗಳನ್ನು ಜಪ್ತಿ ಮಾಡಲಾಗಿದೆ. ಆದರೆ, ಈ ಗುರುತಿನ ಚೀಟಿಗಳನ್ನು ತೋರಿಸಿ ಯಾವ ರೀತಿ ವಂಚಿಸಿ ದ್ದಾನೆ. ಯಾರಿಂದ ಹಣ ಪಡೆದುಕೊಂಡಿದ್ದಾನೆ ಎಂಬ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಪೊಲೀಸರು ಹೇಳಿದರು.