ಬೆಂಗಳೂರು: ಚೈನ್ ಲಿಂಕ್ ವ್ಯವಹಾರದ ಹೆಸರಿನಲ್ಲಿ ನೂರಾರು ಮಂದಿಗೆ ಕೋಟ್ಯಂತರ ರೂ. ಹೂಡಿಕೆ ಮಾಡಿಕೊಂಡು ವಂಚಿಸುತ್ತಿದ್ದ ಆರೋಪದಡಿ “ಅಕ್ಷಯ್ ಫಾರ್ಚೂನ್’ (ಎ.ಎಫ್. ಡೆವಲಪರ್ಸ್) ಕಂಪನಿ ವಿರುದ್ಧ ಗೋವಿಂದರಾಜನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಈ ಕುರಿತ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ.
ಪ್ರಕರಣದ ಆರೋಪಿ, ಕಂಪನಿಯ ಮಾಲೀಕ ಮುನಿರಾಜು(37) ಮತ್ತು ವ್ಯವಸ್ಥಾಪಕ ಮಂಜು(39) ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.
ವಿಜಯನಗರದ ಎಂ.ಸಿ. ಲೇಔಟ್‌ನಲ್ಲಿ ವಂಚಕರು ಕಂಪನಿ ಕಚೇರಿ ತೆರೆದಿದ್ದು, ಹೂಡಿಕೆ ಹೆಸರಿನಲ್ಲಿ 150ಕ್ಕೂ ಹೆಚ್ಚು ಜನರಿಂದ ಸುಮಾರು 40 ಕೋಟಿ ರೂ. ಕಟ್ಟಿಸಿಕೊಂಡು ವಂಚಿಸಿರುವ ಮಾಹಿತಿ ಇದೆ. ಹೂಡಿಕೆ ಮಾಡಿದ ಹಣದ ಮೇಲೆ ತಿಂಗಳಿಗೆ ಶೇ.25ರಷ್ಟು ಲಾಭಾಂಶ ನೀಡುವುದಾಗಿ ಆರೋಪಿಗಳು ಹೇಳುತ್ತಿದ್ದರು. ಯಾರಾದರೂ ಹೂಡಿಕೆದಾರರು, ತಮ್ಮ ಪರಿಚಯಸ್ಥರು ಹಾಗೂ ಇತರರಿಂದ ಹಣ ಹೂಡಿಕೆ ಮಾಡಿದರೆ ಕಮಿಷನ್ ಕೂಡ ನೀಡುತ್ತಿದ್ದರು. ಇದರೊಂದಿಗೆ ಕಡಿಮೆ ಮೊತ್ತಕ್ಕೆ ಫ್ಲ್ಯಾಟ್ ಮತ್ತು ನಿವೇಶನ ಕೊಡಿಸುವುದಾಗಿ ವಂಚಿಸುತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.
ಪತ್ನಿ, ಸಂಬಂಧಿಕರೂ ಭಾಗಿ: “ಆರೋಪಿ ಮುನಿರಾಜು, ಈತನ ಪತ್ನಿ ಹಾಗೂ ಕುಟುಂಬದ ಸದಸ್ಯರು ಕಂಪನಿಯ ನಿರ್ದೇಶಕರಾಗಿದ್ದಾರೆ ಎಂಬುದು ಗೊತ್ತಾಗಿದೆ. ಪ್ರತಿಯೊಬ್ಬರೂ ವಂಚನೆ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಎಲ್ಲರನ್ನೂ ವಿಚಾರಣೆ ನಡೆಸಬೇಕಿದೆ. ಮುನಿರಾಜು ಪತ್ನಿ, ಹಲವರನ್ನು ಸಂಪರ್ಕಿಸಿ ಹಣ ಹೂಡಿಕೆ ಮಾಡಿಸಿದ್ದರೆಂಬ ಮಾಹಿತಿ ಇದೆ. ಕೆಲ ಹೂಡಿಕೆದಾರರಿಗೆ ಆರಂಭದಲ್ಲಿ ಲಾಭಾಂಶ ಸಹ ನೀಡಿದ್ದರು. ಕೆಲ ತಿಂಗಳಿನಿಂದ ಲಾಭಾಂಶ ನೀಡದೇ ವಂಚಿಸಿದ್ದಾರೆ ಎಂದು ಸಿಸಿಬಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಲಕ್ಷ ರೂ.ಗೆ 5 ಸಾವಿರ ರೂ.ನೀಡುವ ಆಮಿಷ :
1 ಲಕ್ಷ ರೂ. ಹೂಡಿಕೆ ಮಾಡಿದರೆ ಪ್ರತಿ ತಿಂಗಳು 5 ಸಾವಿರ ರೂ. ಲಾಭಾಂಶ ನೀಡುವುದಾಗಿಯೂ ಆರೋಪಿಗಳು ಜಾಹೀರಾತು ನೀಡುತ್ತಿದ್ದರು. ಅವರ ಮಾತು ನಂಬಿದ್ದ ಸಾರ್ವಜನಿಕರು, ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ವಂಚನೆ ಬಗ್ಗೆ ಕೆಲ ಹೂಡಿಕೆದಾರರು ಮಾಹಿತಿ ನೀಡಿದ್ದರು. ಅದರನ್ವಯ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ. ಕೆಲ ಹೂಡಿಕೆದಾರರು ಈಗಾಗಲೇ ಹೇಳಿಕೆ ಸಹ ನೀಡಿದ್ದಾರೆ. ಎ.ಎಫ್. ಡೆವಲ ಪರ್ಸ್ ಕಂಪನಿಯಿಂದ ಯಾರಿಗಾದರೂ ವಂಚನೆಯಾಗಿದ್ದರೆ ಸಿಸಿಬಿಯ ಚಾಮರಾಜ ಪೇಟೆಯಲ್ಲಿರುವ ಕಚೇರಿಗೆ ದೂರು ನೀಡಬ ಹುದು ಎಂದು ಸಿಸಿಬಿ ಪೊಲೀಸರು ಕೋರಿದ್ದಾರೆ.