ಮುದ್ದೇಬಿಹಾಳ: ತಾಲೂಕಿನ ಯರಗಲ್ಲ ಮದರಿ ಗ್ರಾಮದ ಬಳಿ ಇರುವ ಶ್ರೀ ಬಾಲಾಜಿ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಕೆಯಲ್ಲಿ ಗೋಲ್‍ಮಾಲ್ ನಡೆಸಿ ಅಂದಾಜು 40 ಲಕ್ಷ ರೂ ಹಾನಿ ತಂದೊಡ್ಡಿರುವ ಆರೋಪದ ಮೇಲೆ 7 ಜನರ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕೇನ್‍ಯಾರ್ಡ್ ಸೂಪರ್ ವೈಜರ್ ಮುದ್ದೇಬಿಹಾಳ ತಾಲೂಕು ಜಲಪೂರನ ಮಂಜುನಾಥ ರೇವಣಸಿದ್ದನಗೌಡ ತೊಂಡಿಹಾಳ, ವೇ ಬ್ರಿಜ್ ಆಪರೇಟರ್ ಯರಝರಿಯ ಶಿವಕುಮಾರ ಮಲ್ಲಿಕಾರ್ಜುನ ಮಣ್ಣೂರ, ಕಬ್ಬಿನ ಲೋಡ್ ಟ್ರ್ಯಾಕ್ಟರುಗಳ ಚಾಲಕರಾದ ಯರಝರಿಯ ರಮೇಶ ಯಮನಪ್ಪ ದಡ್ಡಿ ಹಾಗೂ ಓಂಪ್ರಕಾಶ ಲಕ್ಕಪ್ಪ ಗುರಿಕಾರ, ಬಳಬಟ್ಟಿಯ ಭೂಪಣ್ಣ ಅಮೀನಪ್ಪ ಮಾಳಗೊಂಡ ಹಾಗೂ ದುಂಡಪ್ಪ ಮಲ್ಲಪ್ಪ ವಾಲಿಕಾರ ಮತ್ತು ಬಸವನ ಬಾಗೇವಾಡಿ ತಾಲೂಕು ಕುರುಬರದಿನ್ನಿಯ ಸಂಗನಗೌಡ ದುಂಡಪ್ಪಗೌಡ ಬಿರಾದಾರ ವಿರುದ್ದ ಪ್ರಕರಣ ದಾಖಲಾಗಿದೆ.
ಮಂಜುನಾಥ ಮತ್ತು ಶಿವಕುಮಾರ ಇವರಿಬ್ಬರೂ ಸೇರಿಕೊಂಡು ಇತರೆ ಕಬ್ಬಿನ ಲೋಟ್ ಟ್ರ್ಯಾಕ್ಟರ್ ಗಳ ಚಾಲಕರೊಂದಿಗೆ ಸೇರಿಕೊಂಡು ಕೆಲವು ಕಬ್ಬಿನ ಲೋಡ್ ಟ್ರ್ಯಾಕ್ಟರ್ ಗಳ ತೂಕದಲ್ಲಿ ಮೋಸ ಮಾಡಿ ಲೋಡ್ ಕಾರ್ಖಾನೆಗೆ ಬರದಿದ್ದರೂ ಬಂದಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಒಂದು ಹಂತದಲ್ಲಿ ಅಂದಾಜು 10 ಲಕ್ಷ ರೂ ಮೌಲ್ಯದ 322.299 ಮೆಟ್ರಿಕ್ ಟನ್ ಹಾಗೂ ಇನ್ನೊಂದು ಹಂತದಲ್ಲಿ ಅಂದಾಜು 30 ಲಕ್ಷ ರೂ ಮೌಲ್ಯದ 1005.450 ಮೆಟ್ರಿಕ್ ಟನ್ ಕಬ್ಬಿನಲ್ಲಿ ಗೋಲ್‍ಮಾಲ್ ಮಾಡಿ ಕಾರ್ಖಾನೆಗೆ ವಂಚಿಸಿ ಒಟ್ಟು 51 ಟ್ರಿಪ್‍ಗಳ 1327.749 ಮೆಟ್ರಿಕ್ ಟನ್ ಕಬ್ಬಿಗೆ ನಕಲಿ ದಾಖಲೆ ಸೃಷ್ಟಿಸಿ 40 ಲಕ್ಷ ರೂಗಳಷ್ಟು ವಂಚನರ ಮಾಡಿದ್ದಾರೆ.
ದುಂಡಪ್ಪ ವಾಲಿಕಾರನ ಹೆಸರಿನಲ್ಲಿ ಕಾರ್ಖಾನೆಗೆ ತಿಳಿಯದ ಹಾಗೆ 130.392 ಮೆಟ್ರಿಕ್ ಟನ್ ಅನ್‍ಲೋಡ್ ಮಾಡಿದ್ದರ ಪೈಕಿ ಈಗಾಗಲೇ 3,20,764 ರೂ ಬಿಲ್ ಜಮಾ ಮಾಡಲಾಗಿದೆ. ಆರೋಪಿಗಳೆಲ್ಲರೂ ಸೇರಿ ನಿಡಗುಂದಿಯಲ್ಲಿರುವ ಕಾರ್ಖಾನೆಗೆ ಸೇರಿದ ಸುಂದರಾ ಸೌಹಾರ್ದ ಪತ್ತಿನ ಸಹಕಾರಿ ಬ್ಯಾಂಕ್‍ನಲ್ಲಿ ಖಾತೆ ತೆರೆದು ಜಮಾ ಆಗಿದ್ದ ಹಣದ ಪೈಕಿ ಈಗಾಗಲೇ 1 ಲಕ್ಷ ರೂ ವಿತ್‍ಡ್ರಾ ಮಾಡಿಕೊಂಡಿದ್ದಾರೆ.
ಆರೋಪಿಗಳ ನಡವಳಿಕೆ ಮತ್ತು ಚಟುವಟಿಕೆಗಳಿಂದ ಸಂಶಯಗೊಂಡು ವಿಚಾರಿಸಿದಾಗ, ಇನ್ನಿತರೆ ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸಿದಾಗ ಮತ್ತು ಸಿಸಿ ಟಿವಿ ದೃಶ್ಯ ಪರಿಶೀಲಿಸಿದಾಗ ಗೋಲ್‍ಮಾಲ್ ಬೆಳಕಿಗೆ ಬಂದಿದೆ.
ಎಲ್ಲ ಆರೋಪಗಳು ಕೂಡಿಕೊಂಡು ನೈಜವಾಗಿ ಕಬ್ಬಿನ ವಾಹನಗಳು ಇರದಿದ್ದಾಗ್ಯೂ ಕಂಪ್ಯೂಟರಿನಲ್ಲಿ ಡಾಟಾ ಎಂಟ್ರಿ ಮಾಡಿ, ಕಾಗದದಲ್ಲಿ ಮಾತ್ರ ಖೊಟ್ಟಿ ವಾಹನಗಳನ್ನು ಸೃಷ್ಟಿಸಿ, ನಕಲಿ ಕಾಗದ ಪತ್ರ ತಯಾರಿಸಿ ಕಾರ್ಖಾನೆಗೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಗಳ ವಿರುದ್ಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಪಿಎಸೈ ರೇಣುಕಾ ಜಕನೂರ ಅವರು ತನಿಖೆ ಕೈಕೊಂಡಿದ್ದಾರೆ.