Advertisement
ವಿಜ್ಞಾನದಲ್ಲಿ ಬೆಂಕಿ, ತಂತ್ರಜ್ಞಾನದಲ್ಲಿ ಚಕ್ರ, ರಾಜ್ಯ ಶಾಸ್ತ್ರದಲ್ಲಿ ಮತ ಮತ್ತು ಅರ್ಥಶಾಸ್ತ್ರದಲ್ಲಿ ಹಣ ಅತ್ಯಂತ ಮಹತ್ವದ ವಿಚಾರಗಳು. ಇವುಗಳ ನಿಯಂತ್ರಣ ತಪ್ಪಿದರೆ ಅಪಾಯ ನಿಶ್ಚಿತ. ಇದೀಗ ಬ್ಯಾಂಕ್‌ಗಳು ನಿಯಂತ್ರಣ ತಪ್ಪಿದ ಸಾಲಗಳನ್ನು ಸರಿದಾರಿಗೆ ತರಲು ಹರಸಾಹಸ ಪಡುತ್ತಿವೆ. ಹಲವಾರು ಅನುತ್ಪಾದಕ ಸಾಲಗಳು ದುರದ್ದೇಶ ಮತ್ತು ಭ್ರಷ್ಟಾಚಾರದಿಂದಾಗಿವೆ ಎಂದರೆ ತಪ್ಪಿಲ್ಲ. ಮೇಲ್ನೋಟಕ್ಕೆ ಕೆಲವು ಬ್ಯಾಂಕ್‌ಗಳಲ್ಲಿ ಸುಧಾರಣೆಯ ದೃಶ್ಯ ಗೋಚರವಾಗುತ್ತಿದ್ದರೂ ಸಮಸ್ಯೆ ಗಂಭೀರವಾಗಿಯೇ ಉಳಿದಿದೆ.
Related Articles
Advertisement
ಅಂತಾರಾಷ್ಟ್ರಿಯ ಹಣಕಾಸು ಸಂಸ್ಥೆ (ಐಎಂಎಫ್) ವರದಿ ಪ್ರಕಾರ ಎನ್‌ಪಿಎ ಶೇ.10.9 ಕ್ಕೆ ತಲುಪಿದೆ. ಅಲ್ಲದೇ ಶೇ.37 ರಷ್ಟು ಸಾಲಗಳು ಅಪಾಯದಂಚಿನಲ್ಲಿವೆ .
ವ0ಚನೆ ಪ್ರಕರಣಗಳು ಮಾನವನ ಇತಿಹಾಸದಷ್ಟೇ ಪುರಾತನವಾದುವುಗಳು. ಸರಕಾರ ಆರ್ಥಿಕ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸಿದೆ. ಎನ್‌ಪಿಎ ಮತ್ತು ಆಗಾಗ ಘಟಿಸುತ್ತಿರುವ ವಂಚನೆ ಪ್ರಕರಣಗಳು ಬ್ಯಾಂಕ್ ಉದ್ದಿಮೆಯನ್ನು ತಲ್ಲಣಗೊಳಿಸಿರುವುದು ಮಾತ್ರವಲ್ಲ, ದೇಶದ ಅರ್ಥ ವ್ಯವಸ್ಥೆಗೆ ಸವಾಲಾಗಿದೆ. ಬೃಹತ್ ಕಂಪೆನಿಗಳ ಸಾಲ ಮರುಪಾವತಿ ಸರಿಯಾಗಿದ್ದಲ್ಲಿ ದೇಶದ ಬ್ಯಾಂಕ್‌ಗಳ ಅನುತ್ಪಾದಕ ಸಾಲದ ಪ್ರಮಾಣ ಈ ಪರಿ ಹೆಚ್ಚಾಗುತ್ತಿರಲಿಲ್ಲ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ, ಆರ್‌ಬಿಐ ನಿರಂತರ ಶ್ರಮಿಸುತ್ತಲೇ ಇವೆ. 2014ರಲ್ಲಿ ನಮ್ಮ ಬ್ಯಾಂಕ್‌ಗಳಲ್ಲಿ ಜನಸಾಮಾನ್ಯರ ಹೂಡಿಕೆ 100 ಲಕ್ಷ ಕೋಟಿಯಾಗಿತ್ತು. ಸುಸ್ತಿ ಸಾಲ 10.25 ಲಕ್ಷ ಕೋಟಿ. ಸ್ವಾತಂತ್ರ್ಯ ಬಂದಾಗಿನಿಂದ 2008ರ ವರೆಗೆ ಕೈಗಾರಿಕೆಗಳಿಗೆ ಕೊಟ್ಟ ಸಾಲ 18.6 ಲಕ್ಷ ಕೋಟಿ ರೂ. ಆದರೆ 2008ರಿಂದ 2014ರವರೆಗೆ ಕೈಗಾರಿಕೆಗಳಿಗೆ ವಿತರಣೆ ಆದ ಸಾಲದ ಮೊತ್ತ 34.40 ಲಕ್ಷ ಕೋಟಿ ರೂ. ಕೇವಲ 5 ವರ್ಷಗಳಲ್ಲಿ ದುಪ್ಪಟ್ಟು ಹಣ ಕೈಗಾರಿಕಾ ವಲಯಕ್ಕೆ ಸಂದಾಯವಾಗಿತ್ತು. ಬ್ಯಾಂಕ್ ಅಧಿಕಾರಿಗಳ, ಹಲವು ರಾಜಕೀಯ ನಾಯಕರ ಕ್ರೋನಿ ಕ್ಯಾಪಿಟಿಲ್‌ನಿಂದಾಗಿ (ಬ್ಯಾಂಕ್ ಸಾಲವನ್ನು ವೈಯಕ್ತಿಕ ಆಸಕ್ತಿಗೆ ಬಳಸುವವರು) ಸುಸ್ತಿ ಸಾಲ ಗಗನಕ್ಕೇರಿತು.
ಕಳೆದ 11 ಹಣಕಾಸು ವರ್ಷಗಳಲ್ಲಿ ಒಟ್ಟಾರೆ 2.05 ಲಕ್ಷ ಕೋಟಿ ಮೊತ್ತದ ವಂಚನೆ ನಡೆದಿದೆ. 2018-19 ರಲ್ಲಿ 6,800 ಪ್ರಕರಣಗಳಲ್ಲಿ ನಡೆದ ವಂಚನೆ ರೂ. 71,500 ಕೋಟಿ. ವಜ್ರಾಭರಣ ವ್ಯಾಪಾರಿ ನೀರವ್ ಮೋದಿ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ. ಬ್ರಿಟನ್ ಕೋರ್ಟ್ ನಾಲ್ಕನೇ ಸಲ ಜಾಮೀನು ಅರ್ಜಿ ತಿರಸ್ಕರಿಸಿದ ಅನಂತರ ಹತಾಶನಾಗಿರುವ ನೀರವ್ ಮೋದಿ ಆತ್ಮಹತ್ಯೆಯ ಬೆದರಿಕೆ ಹಾಕಿದ್ದಾನೆ. ಮಾರ್ಚ್ 19 ರಿಂದ ಆತ ಜೈಲಿನಲ್ಲಿದ್ದಾನೆ. ಈತನ ಒಟ್ಟು ರೂ. 4000 ಕೋಟಿ ಮೌಲ್ಯದ ಸೊತ್ತುಗಳನ್ನು ಮುಟ್ಟುಗೋಲು ಹಾಕುವ ಪ್ರಕ್ರಿಯೆಯನ್ನು ಇ.ಡಿ. ಪ್ರಾರಂಭಿಸಿದೆ.
ಮದ್ಯದ ದೊರೆ ದೇಶಭ್ರಷ್ಟ ವಿತ್ತಾಪರಾಧಿ ವಿಜಯ ಮಲ್ಯ ಬ್ಯಾಂಕ್‌ಗಳಿಗೆ ವಂಚಿಸಿದ ಮೊತ್ತ 9,300 ಕೋಟಿ ರೂ. ಈ ಅಪಾದಿತನನ್ನು ದೇಶಕ್ಕೆ ಒಪ್ಪಿಸುವ ವಿಚಾರಣೆಯನ್ನು ಫೆಬ್ರವರಿ 11, 2020ಕ್ಕೆ ಮುಂದೂಡಲಾಗಿದೆ. ಐಸಿಐಸಿಐ ಬ್ಯಾಂಕಿನ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೊಚ್ಚಾರ್ ತಮ್ಮ ಬ್ಯಾಂಕಿನಿಂದ ವಿಡಿಯೋಕಾನ್ ಕಂಪೆನಿಗೆ ತನ್ನ ಪತಿಯ ಮುಖಾಂತರ ರೂ. 3250 ಕೋಟಿ ಸಾಲ ನೀಡಿದ್ದಾರೆ. ಭೂಷಣ್ ಸ್ಟೀಲ್ ಒಳಗೊಂಡ ಭಾರೀ ವಂಚನೆ ಜಗಜ್ಜಾಹೀರಾಗಿದೆ. ವಂಚನೆಯಾಗಿರುವ ಬಹುಪಾಲು ಹಣ ಸಾಲದ ರೂಪದಲ್ಲಿಯೇ ಆಗಿದೆ.
ಇತ್ತೀಚೆಗಿನ ಹಲವಾರು ವಿತ್ತೀಯ ಅಪರಾಧಗಳು ದಿಗ್ಭ್ರಮೆ ಮತ್ತು ಭೀತಿಹುಟ್ಟಿಸುತ್ತವೆ. ಬ್ಯಾಂಕುಗಳ ಮೇಲಿರುವ ವಿಶ್ವಾಸ ಹಾಗೂ ಬ್ಯಾಂಕ್‌ಗಳ ಜನಪ್ರಿಯತೆಗೆ ಇದರಿಂದ ಧಕ್ಕೆಯಾಗುತ್ತಿದೆ. ಈ ವೈಟ್ ಕಾಲರ್ ಅಪರಾಧ ದೇಶದ ಆರ್ಥಿಕ ವ್ಯವಸ್ಥೆಯ ಚಿತ್ರಣವನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿವೆ. ಇದರಿಂದ ಪರೋಕ್ಷವಾಗಿ ಪ್ರತಿಯೊಬ್ಬ ಪ್ರಾಮಾಣಿಕ ಪ್ರಜೆ ಬೆಲೆ ತೆರುವಂತಾಗಿದೆ. ಖಾಸಗಿ ವ್ಯಕ್ತಿಗಳ ವೈಯಕ್ತಿಕ ಲಾಭ- ಸಾರ್ವಜನಿಕರಿಗೆ ತಲೆದಂಡ.
ಇದೀಗ ಸುಸ್ತಿದಾರರ ಮೇಲೆ ಸಿಬಿಐ ಮುಗಿ ಬಿದ್ದಿದೆ. 169 ವಂಚಕ ಸುಸ್ತಿದಾರ ಕಂಪನೆಗಳ ಮೇಲೆ ಸಿಬಿಐ ದಾಳಿ ನಡೆಸಿದೆ. 12 ಬ್ಯಾಂಕ್‌ಗಳಿಗೆ ರೂ. 7000 ಕೋಟಿ ವಂಚಿಸಿದ ಒಟ್ಟು 35 ಪ್ರಕರಣಗಳ ತನಿಖೆಯನ್ನು ಕೈಗೆತ್ತಿಕೊಂಡಿದೆ. ಆರೋಪಿತರು ಮತ್ತು ಬ್ಯಾಂಕ್ ಅಧಿಕಾರಿಗಳ ಒಳಸಂಚು ಮತ್ತು ಖೋಟಾ ದಾಖಲೆಗಳು ಬೆಳಕಿಗೆ ಬಂದಿವೆ. ಸಾರ್ವಜನಿಕರ ಹಣದ ಹೊಣೆಗಾರಿಕೆ ಹೊತ್ತ ಬ್ಯಾಂಕ್ ಅಧಿಕಾರಿಗಳು ತಮ್ಮ ಹೊಣೆಯನ್ನು ಮರೆತು ಶ್ರೀಮಂತರನ್ನು ಮತ್ತು ಭ್ರಷ್ಟರನ್ನು ಓಲೈಸಿದರೆ ಮುಂದಿನ ಅನಾಹುತಗಳಿಗೆ ಅವರೇ ಕಾರಣರಾಗುತ್ತಾರೆ. ಇದೀಗ ಬ್ಯಾಂಕ್‌ಗಳನ್ನು ಸುಲಭವಾಗಿ ವಂಚಿಸಬಹುದೆಂಬ ಭಾವನೆ ಕೆಳಸ್ತರದ ಜನರಲ್ಲೂ ಮೂಡಿ ಹಲವಾರು ಉದ್ದೇಶ ಪೂರ್ವಕ ವಂಚನೆಗಳು ನಡೆಯುತ್ತಿವೆ.
– ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ