ಚನ್ನಪಟ್ಟಣ: ಮದುವೆಯಾಗಿ ಮಗು ಇರುವುದನ್ನು ಮರೆಮಾಚಿ, ಕಾರು ಚಾಲಕನೊರ್ವ ಮತ್ತೂಂದು ಮದುವೆಯಾಗಿ ಆಕೆಯಿಂದ ಹಣ, ಆಭರಣ ಪಡೆದು ಮಾನಸಿಕವಾಗಿ, ದೈಹಿಕವಾಗಿ ದೌರ್ಜನ್ಯವೆಸಗಿರುವ ಘಟನೆ ತಾಲೂಕಿನ ಬಾಣ ಗಹಳ್ಳಿ ಗ್ರಾಮದಲ್ಲಿ ನಡೆದಿದೆ.
ಎರಡನೇ ಮದುವೆಯಾಗಿ ವಂಚನೆ ಮಾಡಿರುವ ಕಾರು ಚಾಲಕ ಎನ್.ಡಿ.ಶ್ರೀನಿವಾಸ್ ಎಂದು ಹೇಳಲಾಗಿದ್ದು, ಮಳವಳ್ಳಿ ತಾಲೂಕಿನ ಹಲಗೂರು ಪಕ್ಕದ ಗೊಲ್ಲರಹಳ್ಳಿ ಗ್ರಾಮದ ದಾಸೇಗೌಡ ಎಂಬುವರ ಮಗನಾದ ಈತ ತಾಲೂಕಿನ ಬಾಣಗಹಳ್ಳಿ ಗ್ರಾಮದ ವೆಂಕಟರಾಜು ಎಂಬುವರ ಮಗಳಾದ ಸುಕನ್ಯರನ್ನು ಕೆಲ ತಿಂಗಳ ಹಿಂದೆ ಸಂಪ್ರದಾಯದಂತೆ ಮದುವೆ ಮಾಡಿಕೊಂಡಿದ್ದನು. ಮದುವೆಯಾದ ಹೊಸತರಲ್ಲಿ ಪತ್ನಿಯ ಜೊತೆ ಚೆನ್ನಾಗಿದ್ದ ಈತ ಮದುವೆಯಾದ ಕೆಲವೇ ದಿನಗಳಲ್ಲಿಯೇ ತನಗೆ ವರದಕ್ಷಣೆ ಕೊಡುವಂತೆ ಪೀಡಿಸಿದ್ದನೆಂದು ಆರೋಪಿಸಲಾಗಿದೆ. ಹಣವನ್ನು ಪಡೆದ ಆತ, ಮತ್ತಷ್ಟು ವರದಕ್ಷಣೆ ಬೇಕು ಎಂದು ಪತ್ನಿಯ ಮೈಮೇಲಿದ್ದ ಚಿನ್ನದ ಆಭರಣಗಳನ್ನು ಪಡೆದು ಮಾರಾಟ ಕೂಡ ಮಾಡಿದ್ದಾನೆನ್ನಲಾಗಿದೆ.
ವರದಕ್ಷಣೆ ಕೊಡುವಂತೆ ಪತ್ನಿಗೆ ಮಾನಸಿಕವಾಗಿ ಹಿಂಸೆ ನೀಡುವುದಲ್ಲದೆ ದೈಹಿಕವಾಗಿ ದೌರ್ಜನ್ಯವನ್ನು ಎಸೆಗಲು ಮುಂದಾಗಿದ್ದಾನೆ. ಆತನಿಗೆ ಆತನ ಕುಟುಂಬದವರೂ ಪ್ರಚೋದನೆ ನೀಡಿದ್ದಾರೆ. ಹಲವಾರು ಭಾರಿ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆಂದು ದೂರಿನಲ್ಲಿ ಆಕೆ ತಿಳಿಸಿದ್ದಾಳೆ. ಪತಿ ತನಗೆ ಗೊತ್ತಿಲ್ಲದಂತೆ ಮೊದಲೇ ಬೆಂಗಳೂರಿನ ಚನ್ನಸಂದ್ರದ ಪವಿತ್ರ ಎಂಬಾಕೆಯನ್ನು ಮದುವೆಯಾಗಿದ್ದು, ಆಕೆಗೆ ಒಂದು ಮಗು ಕೂಡ ಇದೆ. ಆಕೆಯು ಕೂಡ ನನ್ನಿಂದ ವರದಕ್ಷಿಣೆ ಕೇಳುವಂತೆ ಹಾಗೂ ದೈಹಿಕವಾಗಿ ದೌರ್ಜನ್ಯವೆಸಗಲು ಪ್ರಚೋದನೆ ಮಾಡುತ್ತಿದ್ದಾಳೆಂದು ದೂರುದಾರೆ ಸುಕನ್ಯ ತಿಳಿಸಿದ್ದಾರೆ.
ಎನ್.ಜಿ.ಓ ದಲ್ಲಿ ಕರ್ತವ್ಯ ನಿರ್ವಹಿಸುವ ಸುಕನ್ಯಳ ನೆರವಿಗೆ ಸಂಘ ಸಂಸ್ಥೆಗಳು ನೆರವಿಗೆ ಬಂದಿದ್ದು, ಪೊಲೀಸ್ ಠಾಣೆಯಲ್ಲಿ ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ. ಪೊಲೀಸ್ ಠಾಣೆಯಲ್ಲಿಯೇ ಪೊಲೀಸರ ರಕ್ಷಣೆಯಲಿದ್ದ ಪತಿ ಶ್ರೀನಿವಾಸ ಹಾಗೂ ಪವಿತ್ರಳನ್ನು ಬಂಧಿಸುವಂತೆ ಪೊಲೀಸ್ ಠಾಣೆಯ ಮುಂದೆ ಮಲಗಿ ಪ್ರತಿಭಟಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಸಹಾಯಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಮದುವೆಯಾಗಿ ಮಗು ಇದ್ದರೂ ಮರೆಮಾಚಿ ಮತ್ತೂಂದು ಮದುವೆಯಾಗಿರುವುದು ಕಾನೂನಿನಡಿ ಅಪರಾಧವಾಗಿದ್ದು, ಸಮಗ್ರವಾಗಿ ವಿಚಾರಣೆ ನಡೆಸಿ ಸಂಬಂಧಿಸಿದರ ಮೇಲೆ ಶಿಸ್ತುಕ್ರಮ ಕೈಗೊಳ್ಳಲು ಪೊಲೀಸರಿಗೆ ಆದೇಶ ನೀಡಿದ್ದಾರೆ. ಸದ್ಯಅಕ್ಕೂರು ಪೊಲೀಸ್ ಠಾಣೆಯಲ್ಲಿ ಆರೋಪಿಯ ಮೇಲೆ ಪ್ರಕರಣ ದಾಖಲಾಗಿದೆ.
ಪ್ರತಿಭಟನೆಯಲ್ಲಿ ಎಸ್‌ಡಿಎಂಸಿ ಸಮನ್ವಯ ಸಮಿತಿ ರಾಜ್ಯ ಉಪಾಧ್ಯಕ್ಷ ನಾಗವಾರ ಶಂಭೂಗೌಡ, ಬಿಸಿಯೂಟ ನೌಕರರ ಸಂಘದ ಜಿಲ್ಲಾಧ್ಯಕ್ಷೆ ನಿರ್ಮಲ.ಎಚ್, ಪ್ರಧಾನ ಕಾರ್ಯದರ್ಶಿ ಲತಾ, ಸಂಚಾಲಕಿ ರೋಸ್‌ಮೇರಿ, ಸ್ಪಂದನ ಫರನಾಭಾನು ಹಾಗೂ ಹಲವಾರು ಮಹಿಳೆಯರು ಹಾಜರಿದ್ದರು.