ಪ್ಯಾರಿಸ್: ಫ್ರಾನ್ಸ್ ನ ಅಧ್ಯಕ್ಷರ ಮರು ಚುನಾವಣೆಯಲ್ಲಿ ಇಮ್ಯಾನುಯೆಲ್ ಮ್ಯಾಕ್ರಾನ್ ಅವರು ಪುನರಾಯ್ಕೆಗೊಂಡಿದ್ದು, ತಮ್ಮ ಪ್ರತಿಸ್ಪರ್ಧಿ ಮರೀನ್ ಲಿ ಪೆನ್ ಅವರನ್ನು ಪರಾಜಯಗೊಳಿಸುವ ಮೂಲಕ ಮ್ಯಾಕ್ರಾನ್ ಎರಡನೇ ಬಾರಿ ಅಧಿಕಾರದ ಗದ್ದುಗೆ ಏರಿದಂತಾಗಿದೆ.
ಇದನ್ನೂ ಓದಿ:ರಾಮನಗರ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಒಂದೇ ಕುಟುಂಬದ ಇಬ್ಬರು ಸ್ಥಳದಲ್ಲೇ ಸಾವು
ಭಾನುವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮ್ಯಾಕ್ರಾನ್ ಶೇ.58ರಷ್ಟು ಮತ ಪಡೆದು ಗೆಲುವು ಸಾಧಿಸಿದ್ದು, ಎದುರಾಳಿ ಲೀ ಪೆನ್ ಶೇ.42ರಷ್ಟು ಮತ ಪಡೆದುಕೊಂಡಿರುವುದಾಗಿ ಸಮೀಕ್ಷೆ ನಡೆಸಿರುವ ಫ್ರಾನ್ಸ್ ಟಿವಿ ಚಾನೆಲ್ ಗಳು ವರದಿ ಮಾಡಿರುವುದಾಗಿ ತಿಳಿಸಿದೆ.
ಕಳೆದ ಎರಡು ದಶಕಗಳಲ್ಲಿ ಸತತ ಎರಡನೇ ಬಾರಿಗೆ ಆಯ್ಕೆಯಾದ ಮೊದಲ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಮ್ಯಾಕ್ರಾನ್ ಪಾತ್ರರಾಗಿದ್ದಾರೆ. ಆದರೆ ಪ್ರತಿಸ್ಪರ್ಧಿ ಬಲಪಂಥೀಯ ಲೀ ಪೆನ್ ಕೂಡಾ ಪ್ರಬಲ ಹೋರಾಟ ನೀಡಿದ್ದು, ಇದರಿಂದಾಗಿ ಫ್ರಾನ್ಸ್ ನಲ್ಲಿ ಬಲಪಂಥೀಯ ಪಕ್ಷ ಅಧಿಕಾರ ಪಡೆಯುವತ್ತ ದಾಪುಗಾಲಿಟ್ಟಿದೆ ಎಂಬುದು ಬಹಿರಂಗಗೊಂಡಿರುವುದಾಗಿ ವರದಿ ಹೇಳಿದೆ.
44 ವರ್ಷದ ಮ್ಯಾಕ್ರಾನ್ ಗೆ ಎರಡನೇ ಅವಧಿಯ ಅಧ್ಯಕ್ಷಗಾದಿ ಭಾರೀ ಸವಾಲುಗಳನ್ನು ಒಡ್ಡಲಿದೆ ಎಂದು ವರದಿ ವಿವರಿಸಿದೆ. ಜೂನ್ ನಲ್ಲಿ ಫ್ರಾನ್ಸ್ ನಲ್ಲಿ ನಡೆಯಲಿರುವ ಪಾರ್ಲಿಮೆಂಟ್ ಚುನಾವಣೆ ಕೂಡಾ ಮ್ಯಾಕ್ರಾನ್ ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ ಎಂದು ವರದಿ ತಿಳಿಸಿದೆ.
ಫ್ರಾನ್ಸ್ ನ ಅಧ್ಯಕ್ಷೀಯ ಚುನಾವಣೆಯ ಸ್ಪಷ್ಟ ಅಂಕಿಅಂಶ ಸೋಮವಾರ ಸಂಜೆಯೊಳಗೆ ಹೊರಬೀಳಲಿದೆ ಎಂದು ವರದಿ ವಿವರಿಸಿದೆ. ಮ್ಯಾಕ್ರಾನ್ ಗೆಲುವು ಎಲ್ಲಾ ಯುರೋಪಿಯನ್ ಜನರಿಗೆ ದೊಡ್ಡ ಸುದ್ದಿಯಾಗಿದೆ ಎಂದು ಪ್ರಧಾನಿ ಮಾರಿಯೋ ಡ್ರಾಗಿ ತಿಳಿಸಿದ್ದಾರೆ.