ಗುರುವಾರ ಫ್ರಾನ್ಸ್‌ನ ನೀಸ್ ನಗರದ ಚರ್ಚ್ ಬಳಿ ಉಗ್ರನೊಬ್ಬ ಮೂವರನ್ನು ಚೂರಿಯಿಂದ ಹತ್ಯೆಗೈದಿದ್ದಾನೆ. ಇದರಲ್ಲಿ ಇಬ್ಬರ ಶಿರಚ್ಛೇದನವನ್ನೂ ಮಾಡಿ ಕ್ರೌರ್ಯ ಮೆರೆದಿದ್ದಾನೆ. ಕೆಲವೇ ದಿನಗಳ ಅಂತರದಲ್ಲಿ ಎರಡನೇ ಬಾರಿ ಈ ರೀತಿಯ ಉಗ್ರರ ದಾಳಿಯಿಂದ ನಲುಗಿದೆ ಫ್ರಾನ್ಸ್.
ಇತ್ತೀಚೆಗೆ ತರಗತಿಯಲ್ಲಿ ಪ್ರವಾದಿಯವರ ವ್ಯಂಗ್ಯಚಿತ್ರ ತೋರಿಸಿದರೆಂಬ ಕಾರಣಕ್ಕಾಗಿ ಉಗ್ರನೊಬ್ಬ ಶಿಕ್ಷಕರೊಬ್ಬರ ಶಿರಚ್ಛೇದನ ಮಾಡಿದ್ದ. ಈ ಘಟನೆ ಮಾಸುವ ಮುನ್ನವೇ, ಅಂಥದ್ದೇ ರಕ್ತಪಾತ ನಡೆದಿದೆ. ಈಗೆಂದಷ್ಟೇ ಅಲ್ಲ, ಕಳೆದ ಕೆಲವು ವರ್ಷಗಳಿಂದಲೂ ಫ್ರಾನ್ಸ್ ಉಗ್ರವಾದದಿಂದಾಗಿ ತತ್ತರಿಸುತ್ತಲೇ ಇದೆ. ಅದರಲ್ಲೂ 2015ರ ಚಾರ್ಲಿ ಹೆಬೊxà ಘಟನೆಯ ಅನಂತರದಿಂದ ಈ ಪಶ್ಚಿಮ ಐರೋಪ್ಯ ರಾಷ್ಟ್ರ ಭಯೋತ್ಪಾದಕ ಕೃತ್ಯಗಳಿಗೆ ಈಡಾಗುತ್ತಲೇ ಬಂದಿದೆ. ಅಂದಿನ ಉಗ್ರದಾಳಿಯಲ್ಲಿ 12 ಜನ ಕಾಟೂìನಿಸ್ಟ್‌ಗಳು ಹಾಗೂ ಪತ್ರಕರ್ತರು ಸಾವಿಗೀಡಾಗಿದ್ದರು. ಅನಂತರದ ವರ್ಷಗಳಲ್ಲಿ ಮಾರುಕಟ್ಟೆಯೊಂದರಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 17 ಮಂದಿ, ಬಾಟ್ಲಾಕಾನ್ ಥಿಯೇಟರ್ ಹಾಗೂ ಸರಣಿ ದಾಳಿಗಳಲ್ಲಿ 130 ಮಂದಿ ಪ್ರಾಣಕಳೆದುಕೊಂಡಿದ್ದರು.
ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮೆಕ್ರಾನ್ ಅಂತೂ ಇತ್ತೀಚಿನ ದಿನಗಳಲ್ಲಿ ಭಯೋತ್ಪಾದನೆ ಹಾಗೂ ಮತಾಂಧತೆಯ ವಿರುದ್ಧ ಕಟುವಾಗಿ ಮಾತನಾಡುತ್ತಿರುವುದು ಮೂಲ ಭೂತವಾದಿ ಗಳ ಕಣ್ಣುಕೆಂಪಾಗಿಸಿದೆ. ಅಷ್ಟೇ ಅಲ್ಲದೆ, ಟರ್ಕಿ ಮತ್ತು ಪಾಕಿಸ್ಥಾನ ದಂಥ ರಾಷ್ಟ್ರಗಳೂ ಮೆಕ್ರಾನ್‌ರ ವಿರುದ್ಧ ವಾಗ್ಬಾಣ ಹರಿಸುತ್ತಲೇ ಇವೆ. ಇಸ್ಲಾಮಿಕ್ ಜಗತ್ತಿನ ನೇತೃತ್ವ ತನ್ನದಾಗಿಸಿಕೊಳ್ಳಬೇಕೆಂದು ಪ್ರಯತ್ನಿಸುತ್ತಿರುವ ಟರ್ಕಿ ಅಧ್ಯಕ್ಷ ಎಡೋìಗನ್ ಹಾಗೂ ಎಡೋìಗನ್‌ರನ್ನು ಅತಿಯಾಗಿ ಆರಾಧಿಸುವ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್, ಮೆಕ್ರಾನ್ ವಿರುದ್ಧ ಟೀಕಾಸ್ತ್ರ ಹರಿಸುತ್ತಲೇ ಇದ್ದಾರೆ.
ದುರಂತವೆಂದರೆ, ತನ್ನ ಕಲೆ-ಸಂಸ್ಕೃತಿಯಿಂದ, ಪ್ರಗತಿಪರ ನಿಲುವಿನಿಂದ ಖ್ಯಾತಿ ಗಳಿಸಿರುವ ಫ್ರಾನ್ಸ್ ಕೆಲವು ವರ್ಷಗಳಿಂದ ಭಯೋತ್ಪಾದನಾ ಕೃತ್ಯಗಳಿಂದ ಸುದ್ದಿಯಾಗುತ್ತಿರುವುದು. ಮಧ್ಯಪ್ರಾಚ್ಯದಲ್ಲಿ ದುರಂತ ಅಧ್ಯಾಯ ಬರೆದ ಉಗ್ರಸಂಘಟನೆ ಐಸಿಸ್ ಕೂಡ ತನ್ನ ಉತ್ತುಂಗದ ಸಮಯದಲ್ಲಿ ಫ್ರಾನ್ಸ್ ವಿರುದ್ಧ ದಾಳಿ ಮಾಡಲು ಉಗ್ರರಿಗೆ ಕರೆಕೊಡುತ್ತಲೇ ಇತ್ತು.
ಅಕ್ರಮ ವಲಸಿಗರ ಪ್ರಮಾಣ ಹೆಚ್ಚಿರುವುದೇ ಫ್ರಾನ್ಸ್‌ನಲ್ಲಿ ಉಗ್ರಕೃತ್ಯಗಳು ಅಧಿಕವಾಗಿರುವುದಕ್ಕೆ ಕಾರಣ ಎನ್ನುವ ವಾದವೂ ಇದೆ. ಇದಷ್ಟೇ ಅಲ್ಲದೆ, ಐಸಿಸ್ ಉಗ್ರರಿಂದ ತಪ್ಪಿಸಿಕೊಳ್ಳಲು ಮಧ್ಯಪ್ರಾಚ್ಯದಿಂದ ಸಾಗರೋಪಾದಿಯಲ್ಲಿ ಹರಿದು ಬಂದ ನಿರಾಶ್ರಿತರಲ್ಲಿ ಉಗ್ರರೂ ನುಸುಳಿದ್ದಾರೆ ಎಂದು ಫ್ರಾನ್ಸ್‌ನ ಗುಪ್ತಚರ ಇಲಾ ಖೆಯು ಕಾಲಕಾಲಕ್ಕೆ ಸರಕಾರಕ್ಕೆ ಎಚ್ಚರಿಸುತ್ತಲೇ ಬಂದಿದೆ. ಈ ಕಾರಣಕ್ಕಾಗಿಯೇ, ಇಂದು ಫ್ರಾನ್ಸ್‌ನಲ್ಲಿ ಅಕ್ರಮ ವಲಸಿಗರನ್ನು ಹೊರತಳ್ಳುವ ಹಾಗೂ ನಿರಾಶ್ರಿತರನ್ನು ಒಳಬಿಟ್ಟುಕೊಳ್ಳುವುದನ್ನು ನಿಲ್ಲಿಸಿ ಎಂಬ ಧ್ವನಿಗಳು ಹೆಚ್ಚಾಗುತ್ತಿವೆ.
ಒಂದೆಡೆ ಕೋವಿಡ್‌ನ ಅಪಾರ ಸವಾಲನ್ನೂ ಎದುರಿಸುತ್ತಿರುವ ಫ್ರಾನ್ಸ್‌ಗೆ ಇನ್ನೊಂದೆಡೆ ಮೂಲಭೂತವಾದದ ಅಪಾಯವೂ ಎದುರಾಗುತ್ತಿರುವುದು ದುರಂತ. ಈ ಹೊತ್ತಿನಲ್ಲಿ ವಿಶ್ವ ಸಮುದಾಯ ಫ್ರಾನ್ಸ್‌ನ ಸಹಾಯಕ್ಕೆ ಮುಂದಾಗಿರುವುದು ಶ್ಲಾಘನೀಯ.