Advertisement
ಇದೆಲ್ಲದಕ್ಕಿಂತ ಮೊದಲಿಗೆ ಭಾರತ ಮತ್ತು ಫ್ರಾನ್ಸ್ ಸಂಬಂಧದ ಬಗ್ಗೆ ಇಲ್ಲಿ ಹೇಳಲೇಬೇಕು. ವಿಶೇಷವೆಂದರೆ, ಉಭಯ ದೇಶಗಳ ಸಂಬಂಧ ಮೊದಲಿನಿಂದಲೂ ಅತ್ಯುತ್ತಮವಾಗಿಯೇ ಇದೆ. ಐರೋಪ್ಯ ಒಕ್ಕೂಟದ ದೇಶಗಳ ಸಾಲಿನಲ್ಲಿ ಫ್ರಾನ್ಸ್ ಜತೆಗಿನ ಸಂಬಂಧ ಇನ್ನೂ ಗಾಢವಾದದ್ದು. ರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಫ್ರಾನ್ಸ್ ಭಾರತಕ್ಕೆ ನೀಡಿರುವ ಸಹಾಯ ತುಸು ಹೆಚ್ಚೇ ಎನ್ನಬಹುದು. ಅದರಲ್ಲೂ ಅಮೆರಿಕದ ಎಫ್ 17 ಯುದ್ಧ ವಿಮಾನಕ್ಕಿಂತಲೂ ಅತ್ಯಂತ ಆಧುನಿಕ ಎಂದು ಎನ್ನಿಸಿಕೊಂಡಿರುವ ರಫೇಲ್ ಯುದ್ಧ ವಿಮಾನ ನೀಡಿದ ದೇಶ ಫ್ರಾನ್ಸ್. ಹಾಲಿ ಅಧ್ಯಕ್ಷ ಇಮ್ಯಾನುವಲ್ ಮ್ಯಾಕ್ರಾನ್ ಅಷ್ಟೇ ಅಲ್ಲ, ಹಿಂದಿನ ಹೋಲೆಂದ್ ಅವಧಿಯಲ್ಲಿಯೂ ಭಾರತ ಮತ್ತು ರಷ್ಯಾ ಸಂಬಂಧ ಉತ್ತಮವಾಗಿಯೇ ಇತ್ತು. ಈಗಿನ ಚುನಾವಣೆ ಬಗ್ಗೆ ವಿಶೇಷವಾಗಿ ಹೇಳಬೇಕು ಅಂದರೆ ಇದು ನಡುಪಂಥೀಯ ಅಥವಾ ಎಡಪಂಥೀಯ ವಿಚಾರಧಾರೆಯ ಮನಃಸ್ಥಿತಿಯುಳ್ಳ ಇಮ್ಯಾನುವಲ್ ಮ್ಯಾಕ್ರಾನ್ ಮತ್ತು ಕಟ್ಟರ್ ಬಲಪಂಥೀಯ ವಿಚಾರಧಾರೆಯ ಮರೀನ್ ಲೇ ಪೆನ್ ಅವರು ಆಯ್ಕೆಯಾದರೆ, ಭಾರತಕ್ಕೆ ಯಾವ ರೀತಿಯ ಲಾಭ ಅಥವಾ ನಷ್ಟಗಳಿವೆ ಎಂಬುದರ ಕುರಿತಂತೆ ವಿಶ್ಲೇಷಣೆಗಳಿವೆ. ಆದರೆ ಕೆಲವು ತಜ್ಞರ ಪ್ರಕಾರ,ಫ್ರಾನ್ಸ್‌ಗೆ ಯಾರೇ ಆಯ್ಕೆಯಾದರೂ ಇದರಿಂದ ಭಾರತಕ್ಕೇನೂ ನಷ್ಟವಿಲ್ಲ.
ವ್ಯಾಪಾರ-ಒಪ್ಪಂದಗಳ ವಿಚಾರದಲ್ಲಿ ಟ್ರಂಪ್ ಭಾರತಕ್ಕೆ ಒಂದಷ್ಟು ಅಡ್ಡಿಯಾದರೂ ಅಂತಾರಾಷ್ಟ್ರೀಯ ಸಂಬಂಧಗಳ ವಿಚಾರದಲ್ಲಿ ಭಾರತದ ಜತೆಗೇ ಇದ್ದರು. ಹಾಗೆಯೇ
ಫ್ರಾನ್ಸ್‌ಗೆ ಲೇ ಪೆನ್ ಹೊಸ ಅಧ್ಯಕ್ಷರಾದರೆ ಇದೇ ರೀತಿ ವರ್ತಿಸಬಹುದು ಎಂದೇ ಹೇಳಲಾಗುತ್ತಿದೆ. ಅದಲ್ಲದೇ ವಿಶ್ವಸಂಸ್ಥೆಯ ಭದ್ರತ ಮಂಡಳಿಯಲ್ಲಿಯೂ ಖಾಯಂ ಸದಸ್ಯ ದೇಶವಾಗಿರುವ ಫ್ರಾನ್ಸ್, ಇದುವರೆಗೆ ಭಾರತ ವಿರೋಧಿ ನೀತಿಯನ್ನು ತೆಗೆದುಕೊಂಡಿಲ್ಲ ಎನ್ನುವುದು ವಿಶೇಷ. ನಿರ್ಣಾಯಕ ಹಂತದ ಚುನಾವಣೆ: ಈ ಬಾರಿಯ ಫ್ರಾನ್ಸ್‌ನ ಚುನಾವಣೆ ನಿರ್ಣಾಯಕ ಹಂತದಲ್ಲಿ ನಡೆಯುತ್ತಿದೆ. ವಿಶೇಷವಾಗಿ ಹೇಳಬೇಕು ಎಂದರೆ ಇಡೀ ಜಗತ್ತೇ ಇಂದು ಒಂದು ರೀತಿಯ ಸಂಕಷ್ಟದ ವಾತಾವರಣದಲ್ಲಿದೆ. ಮೊದಲಿಗೆ ಕೊರೊನಾ ಎಂಬ ಮಹಾಮಾರಿ, ಈಗ ಉಕ್ರೇನ್ ಮೇಲೆ ರಷ್ಯಾದ ಯುದ್ಧ. ಈ ಎರಡು ಸಂಗತಿಗಳು ಫ್ರಾನ್ಸ್ ಪಾಲಿಗೆ ನಿರ್ಣಾಯಕವಾದವು. 2017ರಲ್ಲಿ 39ರ ಹರೆಯದ ಯುವಕ ಇಮ್ಯಾನುವಲ್ ಮ್ಯಾಕ್ರಾನ್ ಗೆದ್ದಾಗ, ಇಡೀ ಫ್ರಾನ್ಸ್ ಅಚ್ಚರಿಗೊಂಡಿತ್ತು. ಅದಕ್ಕೂ ಹಿಂದಿನ ಅಧ್ಯಕ್ಷ ಹೋಲೆಂದ್ ಮತ್ತೂಮ್ಮೆ ಸ್ಪರ್ಧೆ ಮಾಡಲಾರೆ ಎಂದಾಗಲೇ ಮ್ಯಾಕ್ರಾನ್ ಅವರ ಗೆಲುವಿನ ದಾರಿ ಸುಗಮಗೊಂಡಿತ್ತು. ಆದರೆ, ಮ್ಯಾಕ್ರಾನ್ ಹೊಸ ಪಕ್ಷ ಕಟ್ಟಿ ಗೆಲುವಿನ ನಗೆ ಬೀರಿದರು ಎಂಬುದು ವಿಶೇಷ. ಏಕೆಂದರೆ ಬ್ಯಾಂಕಿಂಗ್ ವಲಯದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಮ್ಯಾಕ್ರಾನ್, ಅತ್ಯಂತ ಕಡಿಮೆ ವಯಸ್ಸಿಗೇ ಹೋಲೆಂದ್ ಅವರ ನಿಕಟವರ್ತಿಯಾಗಿದ್ದರು. ಅವರ ಸಲಹೆಗಾರನಾಗಿ ಆಯ್ಕೆಯಾಗಿ ಬಳಿಕ, ಹಣಕಾಸು ಸಚಿವರಾಗಿಯೂ ಸೇವೆ ಸಲ್ಲಿಸಿದ ಮ್ಯಾಕ್ರಾನ್, ರಾಜಕಾರಣದ ಒಳಹೊರಹುಗಳನ್ನು ಅರಿತಿದ್ದರು. ಕಡೆಗೆ ಹೋಲೆಂದ್ ಸರಕಾರಕ್ಕೆ ನಾಲ್ಕು ವರ್ಷವಿದ್ದಾಗ, ವಿತ್ತ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಸ್ವತಂತ್ರವಾಗಿ ಪಕ್ಷ ಕಟ್ಟಿದ್ದವರು ಮ್ಯಾಕ್ರಾನ್.
Related Articles
Advertisement
ಈಗ ಮ್ಯಾಕ್ರಾನ್ ಅವರಿಗೆ ಗೆಲುವು ಅಷ್ಟು ಸಲೀಸಲ್ಲ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಸದ್ಯ ಚುನಾವಣೆ ಮೇಲೆ ರಷ್ಯಾ ಯುದ್ಧ ಗಮನಾರ್ಹ ಪಾತ್ರ ವಹಿಸುತ್ತಿದೆ ಎಂದು ಹೇಳುತ್ತಿದ್ದಾರಾದರೂ ಈ ವಿಚಾರದಲ್ಲಿ ಯಾರು ಆಯ್ಕೆಯಾದರೆ ಉತ್ತಮ ಎಂಬುದನ್ನು ನಿರ್ಧರಿಸುವುದು ಫ್ರಾನ್ಸ್ ಜನರ ಪಾಲಿಗೆ ಕಷ್ಟದ ಸಂಗತಿ. ಯುದ್ಧ ಆರಂಭವಾದಾಗಿನಿಂದಲೂ ಮ್ಯಾಕ್ರಾನ್, ರಷ್ಯಾ ಅಧ್ಯಕ್ಷ ಪುತಿನ್ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಿಲ್ಲ. ಇದಕ್ಕೆ ಮಿಗಿಲಾಗಿ, ಪಾಶ್ಚಾತ್ಯ ದೇಶಗಳು ಮತ್ತು ರಷ್ಯಾ ಅಧ್ಯಕ್ಷರ ಮಧ್ಯೆ ಸಂಧಾನಕಾರರಾಗಿಯೇ ಕಾರ್ಯ ನಿರ್ವಹಿಸಿದ್ದಾರೆ. ಯುದ್ಧ ಆರಂಭವಾದಾಗಿನಿಂದ ಐದು ಬಾರಿ ಅವರು ಪುತಿನ್ ಜತೆ ಮಾತುಕತೆ ನಡೆಸಿದ್ದಾರೆ. ಇನ್ನು ಲೇ ಪೆನ್ ಅವರಂತೂ, ನೇರವಾಗಿಯೇ ತಾವು ಡೊನಾಲ್ಡ್ ಟ್ರಂಪ್ ಮತ್ತು ವ್ಲಾದಿಮಿರ್ ಪುತಿನ್ ಅವರ ಹಾದಿಯಲ್ಲೇ ಇರುವವರು ಎಂದು ಘೋಷಿಸಿಕೊಂಡಿದ್ದಾರೆ. ಈ ಮೂಲಕ ತಾವು ಪುತಿನ್ ಸಮರ್ಥಕರು ಎಂಬುದನ್ನು ದೇಶದ ಮುಂದೆ ಹೇಳಿದ್ದಾರೆ. ಜತೆಗೆ ಚುನಾವಣೆ ಸಂದರ್ಭದಲ್ಲೇ ಭಾರತದಲ್ಲಿ ಈಗ ತಲೆದೋರಿರುವ ಹಿಜಾಬ್ ವಿವಾದವನ್ನೂ ಪ್ರಸ್ತಾವಿಸಿ, ಮುಂದಿನ ದಿನಗಳಲ್ಲಿ ಸಂಪೂರ್ಣ ನಿಷೇಧ ಮಾಡುವುದಾಗಿ ಹೇಳಿದ್ದಾರೆ. ಈ ಮೂಲಕ ಮತ ತುಷ್ಟೀಕರಣಕ್ಕೆ ಮುಂದಾಗಿದ್ದಾರೆ. ಆದರೆ, ಈ ಅಂಶ ಚುನಾವಣೆಯಲ್ಲಿ ಅವರ ಕೈ ಹಿಡಿದಿದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಬೇಕು. ಇದರ ಜತೆಯಲ್ಲೇ ನ್ಯಾಟೋ ಮತ್ತು ರಷ್ಯಾ ನಡುವೆ ಸಂಧಾನ ಮಾಡುವ ಭರವಸೆಯನ್ನೂ ನೀಡಿದ್ದಾರೆ ಲೇ ಪೆನ್.
ಇವೆಲ್ಲದಕ್ಕಿಂತ ಮುಖ್ಯವಾಗಿ ಐರೋಪ್ಯ ಒಕ್ಕೂಟದ ನಾಯಕತ್ವದ ವಿಚಾರದಲ್ಲಿಯೂ ಫ್ರಾನ್ಸ್ ಚುನಾವಣೆ ಪ್ರಾಮುಖ್ಯ ಪಡೆದುಕೊಂಡಿದೆ. ಇದುವರೆಗೆ ಜರ್ಮನಿ ಛಾನ್ಸೆಲರ್ ಆಗಿದ್ದ ಏಂಜೆಲಾ ಮಾರ್ಕೆಲ್ ಅವರು ಒಂದು ರೀತಿಯಲ್ಲಿ ನಾಯಕತ್ವ ವಹಿಸಿಕೊಂಡಿದ್ದರು. ಆದರೆ, ಈಗ ಅವರ ಅನುಪಸ್ಥಿತಿಯಲ್ಲಿ ಮ್ಯಾಕ್ರಾನ್ ಅವರೇ ಐರೋಪ್ಯ ಒಕ್ಕೂಟದಲ್ಲಿ ಮಿಂಚುತ್ತಿದ್ದಾರೆ. ಒಂದು ರೀತಿಯಲ್ಲಿ ಜಾಗತಿಕ ನಾಯಕನಾಗಿಯೂ ಹೊರಹೊಮ್ಮಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ, ರಷ್ಯಾ -ಉಕ್ರೇನ್ ಯುದ್ಧದಲ್ಲಿ ಸಂಧಾನಕಾರನ ಪಾತ್ರ ವಹಿಸಿದ್ದಾರೆ. ಅಲ್ಲದೆ ಅಮೆರಿಕ, ಬ್ರಿಟನ್, ಚೀನ, ರಷ್ಯಾ, ಭಾರತ ಸೇರಿದಂತೆ ಜಗತ್ತಿನ ಪ್ರಮುಖ ದೇಶಗಳ ನಾಯಕರ ಜತೆಗೂ ಉತ್ತಮ ಸಂಬಂಧ ಇರಿಸಿಕೊಂಡಿದ್ದಾರೆ. ಈ ಪಾತ್ರವನ್ನು ಕಟ್ಟರ್ ಬಲಪಂಥೀಯ ಧೋರಣೆ ಹೊಂದಿರುವ ಲೇ ಪೆನ್ ವಹಿಸಿಕೊಳ್ಳಲಿದ್ದಾರೆಯೇ ಎಂಬ ಪ್ರಶ್ನೆಗಳೂ ಫ್ರಾನ್ಸ್ ಜನತೆಯಲ್ಲಿ ಇವೆ.
– ಸೋಮಶೇಖರ ಸಿ.ಜೆ