ಅಲ್ ಖೋರ್: ಹಲವು ಬಲಿಷ್ಠ ತಂಡಗಳನ್ನು ಸೋಲಿಸಿ, ಕಣ್ಣೀರು ಹಾಕಿಸಿ ಸೆಮಿ ಫೈನಲ್‌ವರೆಗೆ ಏರಿ ಬಂದಿದ್ದ ಮೊರಾಕ್ಕೊ ಇಲ್ಲಿ ಎಡವಿದೆ. ಬಲಿಷ್ಠ, ಅನುಭವಿ ತಂಡ ಫ್ರಾನ್ಸ್‌ನ ತಂತ್ರಗಳನ್ನು ಭೇದಿಸಲು ಕಡೆಗೂ ಮೊರಾಕ್ಕೊಗೆ ಆಗಲಿಲ್ಲ.
ಬುಧವಾರ ತಡರಾತ್ರಿ ಅದು 2 -0 ಗೋಲುಗಳ ಅಂತರದಿಂದ ಸೋಲುವ ಮೂಲಕ ವಿಶ್ವಕಪ್‌ನಿಂದ ಹೊರಬಿದ್ದಿದೆ. ಅಲ್ಲಿಗೆ ಫ್ರಾನ್ಸ್ 4ನೇ ಬಾರಿಗೆ ಫೈನಲ್ ಗೇರಿದರೆ, ಮೊರಾಕ್ಕೊ ಇನ್ನೊಂದು ಇತಿಹಾಸ ಸೃಷ್ಟಿಸುವ ಅವಕಾಶ ಕಳೆದುಕೊಂಡಿತು. ಡಿ.18ರಂದು ಅರ್ಜೆಂಟೀನ ಮತ್ತು ಫ್ರಾನ್ಸ್ ನಡುವೆ ವಿಶ್ವಕಪ್ ಕಿರೀಟಕ್ಕಾಗಿ ಹಣಾಹಣಿ ನಡೆಯಲಿದೆ.
ಇನ್ನೇನಿದ್ದರೂ ಲಯೋನೆಲ್ ಮೆಸ್ಸಿ ಮತ್ತು ಕಿಲಿಯನ್ ಎಂಬಪ್ಪೆ ನಡುವಿನ ಸಮರದ ಕುರಿತೇ ಇಡೀ ವಿಶ್ವದ ಚಿತ್ತ! ಫ್ರಾನ್ಸ್‌ಗೆ ಎದುರಾಳಿಯಾಗಿ ಮೊರಾಕ್ಕೊ ಬಂದಾಗ ಎಲ್ಲರೂ ಜಾಗೃತರಾಗಿದ್ದರು. ಮೊರಾಕ್ಕೊನ ಎಂದು ತಿರಸ್ಕರಿಸುವ ಸ್ಥಿತಿಯಲ್ಲಿ ಫ್ರಾನ್ಸ್ ಇರಲೇ ಇಲ್ಲ. ಮೈಯೆಲ್ಲ ಕಣ್ಣಾಗಿ ಆಡಿದ ಅದು, ಮೊರಾಕ್ಕೊದ ತಂತ್ರಗಳನ್ನೆಲ್ಲ ಬುಡಮೇಲು ಮಾಡಿತು. ಅದು ಎಂತಹ ರಕ್ಷಣಾ ಕೋಟೆ ಕಟ್ಟಿತ್ತೆಂದರೆ ಮೊರಾಕ್ಕೊಗೆ ಹಲವು ಬಾರಿ ಅವಕಾಶಗಳು ಸಿಕ್ಕರೂ ಭೇದಿಸಲು ಆಗಲೇ ಇಲ್ಲ. ಇನ್ನು ಫ್ರಾನ್ಸ್ ಸಿಕ್ಕ ಕೆಲವೇ ಅವಕಾಶಗಳನ್ನು ಅದ್ಭುತವಾಗಿ ಬಳಸಿಕೊಂಡು ಗೋಲು ಬಾರಿಸಿತು.
ಇದನ್ನೂ ಓದಿ:ನಾಯಕತ್ವ ತೊರೆದ ನ್ಯೂಜಿಲ್ಯಾಂಡ್ ನ ಕೇನ್ ವಿಲಿಯಮ್ಸನ್: ನೂತನ ಕ್ಯಾಪ್ಟನ್ ನೇಮಕ
ಆ ತಂಡದ ಮೊದಲನೇ ಗೋಲು ದಾಖಲಾಗಿದ್ದು ಕೇವಲ ಪಂದ್ಯದ 5ನೇ ನಿಮಿಷದಲ್ಲಿ. ಬಲಭಾಗದಿಂದ ನುಗ್ಗಿಬಂಧ ಥಿಯೊ ಹೆರ್ನಾಂಡೆಝ್, ಸಿನಿಮಾ ಹೊಡೆತದ ಶೈಲಿಯಲ್ಲಿ ಚೆಂಡನ್ನು ಗೋಲುಪೆಟ್ಟಿಗೆಯೊಳಕ್ಕೆ ತಳ್ಳಿದಾಗ; ಪ್ರೇಕ್ಷಕರಿರಲಿ, ಮೊರಾಕ್ಕೊ ಆಟಗಾರರೇ ದಿಗ್ಭ್ರಾಂತರಾಗಿದ್ದರು. ಮುಂದೆ ಫ್ರಾನ್ಸ್ ಮೊರಾಕ್ಕೊಗೆ ಅವಕಾಶ ನೀಡದೇ ಹತಾಶೆಗೊಳಿಸುತ್ತಲೇ ಹೋಯಿತು. ಪಂದ್ಯದ 79ನೇ ನಿಮಿಷದಲ್ಲಿ ಬದಲೀ ಆಟಗಾರನಾಗಿ ಒಳಪ್ರವೇಶಿಸಿದ ರ್‍ಯಾಂಡಲ್ ಕೊಲೊ ಮುವಾನಿ, ಎಂಬಪ್ಪೆ ನೀಡಿದ ಸುಂದರ ಪಾಸನ್ನು ಆ ಕೂಡಲೇ ಗೋಲುಪೆಟ್ಟಿಗೆಯೊಳಕ್ಕೆ ತಳ್ಳಿದರು. ಅಲ್ಲಿಗೆ ಮೊರಾಕ್ಕೊ ಆಟ ಮುಗಿಯಿತು.
ಡಿ ಗುಂಪಿನಲ್ಲಿ ಅಗ್ರಸ್ಥಾನಿಯಾಗಿದ್ದ ಫ್ರಾನ್ಸ್ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಪೋಲೆಂಡ್ ಎದುರು 3-1ರಿಂದ, ಕ್ವಾರ್ಟರ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 2-1ರಿಂದ ಜಯ ಸಾಧಿಸಿತ್ತು.