ಲಕ್ಷಾಂತರ ರೂಪಾಯಿ ವ್ಯಯಿಸಿ ಅಳವಡಿಸಿರುವ ರಬ್ಬರ್ ಕೋನ್‌ಗಳ ಪ್ರಸ್ತುತ ಸ್ಥಿತಿ ಹೇಗಿದೆ ಎಂದು ತಿಳಿಯುವ ನಿಟ್ಟಿನಲ್ಲಿ “ಸುದಿನ’ ತಂಡವು ರಿಯಾಲಿಟಿ ಚೆಕ್ ನಡೆಸಿದೆ. ವಿವಿಧ ಜಂಕ್ಷನ್‌ಗಳು, ಬಸ್ ಬೇಗಳಲ್ಲಿ ಅಳವಡಿಸಲಾದ ಬಹುತೇಕ ರಬ್ಬರ್ ಕೋನ್‌ಗಳು ಈಗಾಗಲೇ ಕಿತ್ತು ಹೋಗಿದೆ. ಕೆಲವೊಂದು ಕಡೆಗಳಲ್ಲಿ ಇರುವ ಕೆಲವೊಂದು ರಬ್ಬರ್ ಕೋನ್‌ಗಳು ವಾಹನಗಳ ಚಕ್ರದೆಡೆಗೆ ಸಿಲುಕಿಕೊಳ್ಳುತ್ತಿವೆ. ಇದರಿಂದ ವಾಹನ ಅಪಘಾತವಾಗುವ ಸಾಧ್ಯತೆ, ಪಾದಚಾರಿಗಳು ರಸ್ತೆ ದಾಟುವಾಗಲೂ ತೊಂದರೆ ಅನುಭವಿಸುವ ಸಂಭವವಿದೆ.
ಮಹಾನಗರ: ಸುಗಮ ವಾಹನ ಸಂಚಾರ ಮತ್ತು ವಾಹನಗಳ ಚಾಲನೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ನಗರದ ವಿವಿಧ ಜಂಕ್ಷನ್‌ಗಳಲ್ಲಿ ಈಗಾಗಲೇ ಅಳವಡಿಸಿರುವ ರಬ್ಬರ್ ಕೋನ್‌ಗಳು ಕಿತ್ತು ಹೋಗಿದ್ದು, ಇದರಿಂದಾಗಿ ವಾಹನ ಸವಾರರು, ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ನಗರದ ಜ್ಯೋತಿ ಚಿತ್ರ ಮಂದಿರ ಬಳಿ ಇರುವ ಬಸ್ ಬೇಗೆ ಅಳವಡಿಸಲಾದ ಕೋನ್‌ಗಳಲ್ಲಿ ಬಹುತೇಕ ಈಗಾಗಲೇ ತುಂಡಾಗಿದೆ. ಕಾಸರಗೋಡು, ಬೆಂಗಳೂರು, ತಲಪಾಡಿ, ಇನ್ನಿತರ ಕಡೆಗಳಿಗೆ ತೆರಳುವ ಸರಕಾರಿ ಮತ್ತು ಖಾಸಗಿ ಬಸ್‌ಗಳು ಇದೇ ಬಸ್ ಬೇ ಮುಖೇನ ಸಂಚರಿಸುತ್ತಿದ್ದು, ಬಸ್‌ಗಳ ಪರಸ್ಪರ ಪೈಪೋಟಿಯ ವೇಗದಲ್ಲಿ ಕೋನ್‌ಗಳು ಚಕ್ರದಡಿಗೆ ಸಿಲುಕಿ ಮುರಿದು ಹೋಗಿವೆ.
ವಾಹನಗಳಿಂದ ಸದಾ ಗಿಜಿಗಿಡುತ್ತಿರುವ ಹಂಪನಕಟ್ಟೆ ಬಸ್ ನಿಲ್ದಾಣದ ಬಳಿ ಪೊಲೀಸ್ ಇಲಾಖೆಯು ಈ ಹಿಂದೆ ಕೋನ್‌ಗಳನ್ನು ಅಳವಡಿಸಿದ್ದು, ಸದ್ಯ ಕೆಲವೊಂದು ಕೋನ್‌ಗಳು ಮಾತ್ರ ಉಳಿದುಕೊಂಡಿವೆ. ಅದೇ ರೀತಿ ನಗರದ ಎಂ.ಜಿ. ರಸ್ತೆಯಲ್ಲಿರುವ ಕೋನ್‌ಗಳು ತುಂಡಾಗಿ ಅದಕ್ಕೆ ಅಳವಡಿಸಿದ ಬೋಲ್ಟ್, ನೆಟ್‌ಗಳು ರಸ್ತೆಯಲ್ಲಿ ಕಾಣುತ್ತಿವೆ. ಒಂದು ವೇಳೆ ವಾಹನಗಳ ಚಕ್ರದಡಿಗೆ ಸಿಲುಕಿದರೆ ಅಪಘಾತವಾಗುವ ಸಾಧ್ಯತೆ ಇದೆ. ಉಡುಪಿ, ಮಣಿಪಾಲ, ಸುರತ್ಕಲ್ ಕಡೆಗೆ ತೆರಳುವ ಬಸ್‌ಗಳು ಪ್ರವೇಶಿಸುವ ಲೇಡಿಹಿಲ್‌ನಲ್ಲಿ ಅಳವಡಿಸಿದ ಹತ್ತಾರು ರಬ್ಬರ್ ಕೋನ್‌ಗಳ ಪೈಕಿ ಕೆಲವೊಂದು ಮಾತ್ರ ಉಳಿದಿವೆ.
ಅದೇ ರೀತಿ, ಬಂಟ್ಸ್ ಹಾಸ್ಟೆಲ್, ಆರ್.ಟಿ.ಒ. ರಸ್ತೆ, ಲಾಲ್‌ಬಾಗ್ ಸಹಿತ ವಿವಿಧ ಕಡೆಗಳಲ್ಲಿ ಅಳವಡಿಸಿರುವ ಕೋನ್ಸ್‌ಗಳು ಕಿತ್ತುಹೋದ ಕಾರಣ, ರಾತ್ರಿ ವೇಳೆ ಸಂಚಾರಿಸುವಾಗ ಸವಾರರಿಗೆ ಅರೆಬರೆ ಕೋನ್‌ಗಳನ್ನು ಗುರುತಿಸುವುದು ಕಷ್ಟವಾಗುತ್ತಿದೆ. ಏಕೆಂದರೆ ಕೆಲವೊಂದು ಕಡೆಗಳಲ್ಲಿ ರಿಫ್ಲೆಕ್ಟರ್ ಅನ್ನು ಕೂಡ ಅಳವಡಿಸಿಲ್ಲ. ಉರ್ವ ಮಾರುಕಟ್ಟೆ ಬಳಿ ರಸ್ತೆಯಲ್ಲಿ ಇತ್ತೀಚೆಗೆ ರಬ್ಬರ್ ಕೋನ್‌ಗಳು ಅಳವಡಿಸಿದ ಕಾರಣ ಸದ್ಯ ಸುಸ್ಥಿತಿಯಲ್ಲಿದೆ.
ಪ್ರಕರಣ ದಾಖಲಿಸಲಾಗಿತ್ತು
ನಗರದ ಕರಂಗಲ್ಪಾಡಿ ಜಂಕ್ಷನ್ ಬಳಿ ಜೈಲ್ ರೋಡ್‌ಗೆ ತೆರಳುವಲ್ಲಿ ಅಳವಡಿಸಲಾಗಿದ್ದ ರಬ್ಬರ್ ಕೋನ್‌ಗಳ ಮೇಲೆ ಬಸ್ ಚಲಾಯಿಸಿ ಹಾನಿಗೊಳಿಸಿದ ಕಾರಣಕ್ಕೆ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕನೊಬ್ಬನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅಲ್ಲದೆ ಇದಾದ ಕೆಲವು ದಿನಗಳ ಬಳಿಕ ಜ್ಯೋತಿ ಚಿತ್ರಮಂದಿರ ಬಳಿ ಕೋನ್‌ಗಳಿಗೆ ಹಾನಿ ಎಸಗಿದ ಮೂರು ಕರ್ನಾಟಕ ಸಾರಿಗೆ ಬಸ್ ಮತ್ತು ಎರಡು ಖಾಸಗಿ ಬಸ್ ಚಾಲಕರ ವಿರುದ್ಧ ಕ್ರಮ ಜರಗಿಸಲಾಗಿತ್ತು.
ಪರ್ಯಾಯ ಯೋಜನೆ ಬಗ್ಗೆ ಚಿಂತನೆ
ನಗರದ ವಿವಿಧ ಕಡೆಗಳಲ್ಲಿ ಅಳವಡಿಸಿರುವಂತ ರಬ್ಬರ್ ಕೋನ್‌ಗಳು ಇದೀಗ ಮುರಿದು ಹೋಗಿವೆ. ಸದ್ಯದಲ್ಲಿ ಹೊಸ ಕೋನ್‌ಗಳನ್ನು ಅಳವಡಿಸಲಾಗುವುದು ಅಥವಾ ಪರ್ಯಾಯ ಯೋಜನೆಯ ಬಗ್ಗೆ ಅಧಿಕಾರಿಗಳ ಜತೆ ಮಾತುಕತೆ ನಡೆಸುತ್ತೇನೆ.
– ಮಂಜುನಾಥ ಶೆಟ್ಟಿ, ಟ್ರಾಫಿಕ್ ಎಸಿಪಿ, ಮಂಗಳೂರು
ನವೀನ್ ಭಟ್ ಇಳಂತಿಲ