Advertisement

ಪೋಕ್ಸೊ ಬಾಲಾಪರಾಧಿ ಅನುಮಾನಾಸ್ಪದ ಸಾವು

11:13 PM Jun 15, 2020 | Hari Prasad |

ಬಳ್ಳಾರಿ: ಪೋಕ್ಸೊ ಕಾಯ್ದೆಯಡಿ ಬಂಧನಕ್ಕೊಳಗಾಗಿ, ನಗರದ ಬಾಲಾಪರಾಧಿ ಮಂದಿರದಲ್ಲಿ ಇಡಲಾಗಿದ್ದ ಅಪ್ರಾಪ್ತ ಬಾಲಕ ಅನುಮಾನಾಸ್ಪದವಾಗಿ ಭಾನುವಾರ ಸಂಜೆ ಮೃತಪಟ್ಟಿದ್ದಾನೆ.

Advertisement

ನೆರೆಯ ಕೊಪ್ಪಳ ಜಿಲ್ಲೆಯವನಾಗಿದ್ದ 16 ವರ್ಷದ ಈ ಬಾಲಕನು ವಿರುದ್ಧ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಬೆಳಗಿನ ಜಾವ 1.30 ಗಂಟೆ ಸುಮಾರಿಗೆ ನಗರದ ಎಸ್‌ಪಿ ವೃತ್ತ ಬಳಿಯ ಬಾಲಾಪರಾಧ ಮಂದಿರಕ್ಕೆ ಕರೆತರಲಾಗಿತ್ತು.

ಆದರೆ, ಭಾನುವಾರ ಸಂಜೆ ಹೊತ್ತಿಗೆ ಬಾಲಕನು ಅನುಮಾಸ್ಪದವಾಗಿ ಮೃತಪಟ್ಟಿದ್ದಾನೆ. ಈ ಕುರಿತು ಕೌಲ್‌ ಬಜಾರ್ ಠಾಣೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.

ಸಾವಿಗೆ ಕಾರಣವೇನು ಎಂಬುದು ತನಿಖೆಯಿಂದ ಬಹಿರಂಗವಾಗಬೇಕಿದೆ. ಮಂದಿರಕ್ಕೆ ಭದ್ರತೆ ಒದಗಿಸುತ್ತಿದ್ದ ಇಬ್ಬರು ಗೃಹ ರಕ್ಷಕ ಸಿಬ್ಬಂದಿಗಳನ್ನು ಬಂಧಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾಗರಾಜ್ ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯ 2ನೇ ಹೆಚ್ಚುವರಿ ನ್ಯಾಯಾಧೀಶ ರಘುನಾಥ್‌ಗೌಡ ಸಮಕ್ಷಮದಲ್ಲಿ ಮೃತ ಬಾಲಕನ ಮರಣೋತ್ತರ ಪರೀಕ್ಷೆ ಸೋಮವಾರ ಸಂಜೆ ನಡೆಯಿತು.

Advertisement

ಸಾವಿನ ಸುತ್ತ ಅನುಮಾನದ ಹುತ್ತ
ಬಾಲಾಪರಾಧ ಮಂದಿರಕ್ಕೆ ಭದ್ರತೆ ಒದಗಿಸುತ್ತಿದ್ದ ಗೃಹರಕ್ಷಕರಾದ ಮಾರುತಿ, ಓಬಳೇಶ್ ಎನ್ನುವವರು ಬಂಧನದಲ್ಲಿದ್ದಾರೆ. ಆದರೆ, ಮಾರುತಿ ಎನ್ನುವ ಗೃಹರಕ್ಷಕ ಸಿಬ್ಬಂದಿಯು ಕಳೆದ ಮೇ 30ರಂದೇ ಬಾಲಾಪರಾಧ ಮಂದಿರದಿಂದ ರಿಲೀವ್ ಆಗಿ ಅವನ ಸ್ಥಾನಕ್ಕೆ ಓಬಳೇಶ್ ಎನ್ನುವವರನ್ನು ನಿಯೋಜಿಸಲಾಗಿದೆ. ಆದರೂ, ಮಾರುತಿ ಎನ್ನುವವರು ಬಾಲಮಂದಿರಕ್ಕೇಕೆ ಬಂದಿದ್ದರು ಎಂಬುದು ಸ್ಪಷ್ಟವಾಗಬೇಕಿದೆ.

ಅಲ್ಲದೇ, ಮೃತ ಬಾಲಕನ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಮಂದಿರದ ಇನ್ನಿಬ್ಬರು ಬಾಲಕರಿಗೂ ತೀವ್ರವಾದ ಗಾಯಗಳಾಗಿವೆ. ಜತೆಗೆ ಮಂದಿರದ ಹೌಸ್ ಫಾದರ್ ನಾಪತ್ತೆಯಾಗಿದ್ದಾರೆ, ಅಧೀಕ್ಷಕರು ರಜೆಯಲ್ಲಿದ್ದಾರೆ ಎನ್ನಲಾಗುತ್ತಿದೆ.

ಪ್ರಕರಣ ದಾಖಲಿಸಿಕೊಂಡಿರುವ ಕೌಲ್‌ಬಜಾರ್ ಪೊಲೀಸರು ಬಾಲಾಪರಾಧ ಮಂದಿರದ ಸಿಸಿಟಿವಿ ಪುಟೇಜ್‌ಗಳನ್ನು ಪಡೆದು ತನಿಖೆ ಕೈಗೆತ್ತಿಕೊಂಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next