ನವದೆಹಲಿ:ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ಕೋವಿಡ್ 19 ಸೋಂಕು ಪ್ರಕರಣ ಹೆಚ್ಚಳವಾಗುತ್ತಿದ್ದು, ದೆಹಲಿ-ಎನ್ ಸಿಆರ್ ನಲ್ಲಿ ಮತ್ತೆ ಕೋವಿಡ್ ಪ್ರಕರಣ ವರದಿಯಾಗತೊಡಗಿದೆ. ಇದರ ಪರಿಣಾಮ ನೋಯ್ಡಾದ ಖೈತಾನ್ ಪಬ್ಲಿಕ್ ಸ್ಕೂಲ್ ನ 13 ವಿದ್ಯಾರ್ಥಿಗಳು ಹಾಗೂ ಮೂವರು ಶಿಕ್ಷಕರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದರಿಂದ ಶಾಲೆಯನ್ನು ಬಂದ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಜನರೇಟರ್ ಬಾಡಿಗೆಗೆ ಪಡೆದು ಪಂದ್ಯ ವೀಕ್ಷಿಸಿದ್ದೆ: ಆರ್ ಸಿಬಿ ಬೌಲರ್ ಆಕಾಶ್ ದೀಪ್
ಖೈತಾನ್ ಪಬ್ಲಿಕ್ ಸ್ಕೂಲ್ ನ 6ನೇ ಮತ್ತು 8ನೇ ತರಗತಿಯಲ್ಲಿ ಪ್ರಕರಣಗಳು ಪತ್ತೆಯಾದ ನಂತರ ಶಾಲಾ ಆಡಳಿತ ಮಂಡಳಿ ಸೋಮವಾರ ಸಂಜೆ (ಏ.11) ಶಾಲೆಯನ್ನು ಮುಚ್ಚಲು ನಿರ್ಧಾರ ತೆಗೆದುಕೊಂಡಿರುವುದಾಗಿ ವರದಿ ಹೇಳಿದೆ.
ಅದೇ ರೀತಿ ಗಾಜಿಯಾಬಾದ್ ನ ಇಂದಿರಾಪುರಂ ಪ್ರದೇಶದಲ್ಲಿರುವ ಶಾಲೆಯೊಂದರಲ್ಲಿ ಕೋವಿಡ್ ಪ್ರಕರಣ ವರದಿಯಾದ ನಂತರ ಶಾಲೆಗೆ ಮೂರು ದಿನಗಳ ಕಾಲ ರಜೆ ಘೋಷಿಸಿದ್ದು, ಮುಂದಿನ ಒಂದು ವಾರ ಆನ್ ಲೈನ್ ತರಗತಿ ನಡೆಸುವುದಾಗಿ ತಿಳಿಸಿದೆ.
ಗಾಜಿಯಾಬಾದ್ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಶಾಲೆಗಳಲ್ಲಿಯೂ ಕೋವಿಡ್ 19 ಪರೀಕ್ಷೆ ನಡೆಸಲಿದ್ದು, ಲಸಿಕೆ ನೀಡಲಾಗುವುದು ಎಂದು ವೈದ್ಯರು ಪಿಟಿಐ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ.