Advertisement

ನಾಲ್ಕೂರು: ಜಂಗಮರಜಡ್ಡು ಮದಗದಲ್ಲಿ ಜಲಸಮೃದ್ಧಿ

10:21 PM Jul 21, 2019 | Sriram |

ಬ್ರಹ್ಮಾವರ: ನಾಲ್ಕೂರು ಗ್ರಾಮದ ಜಂಗಮರಜಡ್ಡು ಮದಗ ಪ್ರಸ್ತುತ ಜೀವ ಜಲದಿಂದ ತುಂಬಿ ತುಳುಕುತ್ತಿದೆ. ಇದು ನೇತಾಜಿ ಸೇವಾ ವೇದಿಕೆಯ ಪ್ರಯತ್ನದ ಫಲ.

Advertisement

ಕಳೆದ ಬೇಸಗೆಯಲ್ಲಿ ಸುಮಾರು ಒಂದು ಎಕ್ರೆ ವಿಸ್ತೀರ್ಣದ ಜಂಗಮರಜಡ್ಡು ಮದಗದ ಹೂಳೆತ್ತುವ ಕಾರ್ಯ ಕೈಗೊಳ್ಳ ಲಾಗಿತ್ತು. ವೇದಿಕೆಯಿಂದ ಅಂದಾಜು 60 ಸಾವಿರ ರೂ. ಕೆಲಸ ಮಾಡಲಾಗಿತ್ತು. ಜೆಸಿಬಿ ಜತೆಗೆ ವೇದಿಕೆಯ ಸದಸ್ಯರು ಶ್ರಮದಾನ ಮಾಡಿದ್ದರು.

ಇವೆಲ್ಲದರ ಪರಿಣಾಮ ಈಗ ಮದಗ ದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಶೇಖರಣೆಯಾಗಿದೆ. ಪರಿಸರದ ಎಕ್ರೆಗಟ್ಟಲೆ ಸ್ಥಳದಲ್ಲಿ ಬಿದ್ದ ನೀರು ಮದಗದಲ್ಲಿ ಸಂಗ್ರಹಗೊಳ್ಳುತ್ತಿದೆ. ಒಂದು ಕಡೆಯ ಬಂಡೆ ಮೇಲಿನ ನೀರು ಸಹ ಇಲ್ಲಿ ಸೇರುತ್ತಿದೆ.

ಪ್ರಯೋಜನಗಳು
ಹೂಳಿನಿಂದ ತುಂಬಿ ಹೋಗಿದ್ದ ಜಂಗಮರಜೆಡ್ಡು ಮದಗದ ಅಭಿವೃದ್ದಿ ಹಲವು ಪ್ರಯೋಜನಗಳಿಗೆ ದಾರಿಯಾಗಿದೆ. ಭಾರೀ ಪ್ರಮಾಣದಲ್ಲಿ ನೀರು ಇಂಗಿ ಅಂತರ್ಜಲ ಸೇರುತ್ತಿದೆ. ಆಸುಪಾಸಿನ ಭತ್ತದ ಕೃಷಿಗೆ ಪೂರಕ ಮಾತ್ರವಲ್ಲದೆ ಬೇಸಗೆಯಲ್ಲಿ ಬಾವಿಯ ಕುಡಿಯುವ ನೀರಿನ ಮಟ್ಟವೂ ಹೆಚ್ಚಲಿದೆ.

ವರ್ಷಕ್ಕೆ ಒಂದು ಯೋಜನೆ
ವೇದಿಕೆಯಿಂದ 2018ರಲ್ಲಿ ಮುದ್ದೂರಿನ ಗೋವಿನ ಕೆರೆ ಅಭಿವೃದ್ಧಿ ಪಡಿಸಲಾಗಿತ್ತು. ಇದರಿಂದ ನೀರಿನ ಸಂಗ್ರಹ ಹೆಚ್ಚಿ ಬಹಳಷ್ಟು ಪ್ರಯೋಜನವಾಗಿದೆ. ಈ ನಡುವೆ ಮುದ್ದೂರು ಪೇಟೆಯಲ್ಲಿ ಇಂಗುಗುಂಡಿ ರಚಿಸಿ ತಡೆ ಬೇಲಿ ಸೇರಿದಂತೆ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ವರ್ಷ ಗ್ರಾಮದ ಒಂದೊಂದು ಕೆರೆಯನ್ನು ಜೀರ್ಣೋದ್ಧಾರಗೊಳಿಸುವ ಯೋಜನೆಯನ್ನು 9 ವರ್ಷ ಹಳೆಯ ಈ ವೇದಿಕೆ ಹಾಕಿಕೊಂಡಿದೆ. ಈ ಮೂಲಕ ಜೀವ ಜಲ ರಕ್ಷಿಸುವ ನಿಟ್ಟಿನಲ್ಲಿ ನೇತಾಜಿ ಸೇವಾ ವೇದಿಕೆ ಇತರರಿಗೆ ಮಾದರಿಯಾಗಿದೆ.

Advertisement

ಶಾಶ್ವತ ದಂಡೆ ರಚಿಸಿ
ಪ್ರಸ್ತುತ ಜಂಗಮರಜಡ್ಡು ಮದಗದ ಸುತ್ತಲು ಹಳೆಯ ಮಣ್ಣಿನ ದಂಡೆ ಇದೆ. ಮದಗದಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಕಡಿದು ಹೋಗುವ ಭೀತಿ ಇದೆ. ಆದ್ದರಿಂದ ಇಲಾಖೆಯು ತಕ್ಷಣ ಸ್ಪಂದಿಸಿ ಶಾಶ್ವತ ದಂಡೆ ನಿರ್ಮಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಸರಕಾರದ ಯೋಜನೆ ಅಗತ್ಯ
ನೀರಿನ ಅಭಾವ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಆದರೆ ನೀರು ಇಂಗಿಸುವ ನಿಟ್ಟಿನಲ್ಲಿ ಸರಕಾರದ ಪ್ರಯತ್ನ ಸಾಲುತ್ತಿಲ್ಲ. ಕೆರೆ, ಮದಗ ಹೂಳೆತ್ತುವ ಕಾರ್ಯ ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು. ಜಲಸಂರಕ್ಷಣೆ ದೃಷ್ಟಿಯಿಂದ ವೇದಿಕೆ ತನ್ನಿಂದಾದ ಕಾರ್ಯ ಮಾಡುತ್ತಿದೆ.
-ಪ್ರಸಾದ್‌ ಹೆಗ್ಡೆ ಮುದ್ದೂರು,
ಸ್ಥಾಪಕಾಧ್ಯಕ್ಷ, ನೇತಾಜಿ ಸೇವಾ ವೇದಿಕೆ.

Advertisement

Udayavani is now on Telegram. Click here to join our channel and stay updated with the latest news.

Next