Advertisement

ನಾಮಫಲಕದ ಗಡುವು 6 ತಿಂಗಳು ವಿಸ್ತರಿಸಲು ಮನವಿ: ಶಿವಾನಂದ ಶೆಟ್ಟಿ

11:55 AM May 28, 2022 | Team Udayavani |

ಮುಂಬಯಿ: ಹೊಟೇಲ್‌ಗ‌ಳ ನಾಮ ಫಲಕವನ್ನು ಮರಾಠಿ ಭಾಷೆಯಲ್ಲಿ ಬರೆಯಲು ಸರಕಾರ ಆದೇಶಿಸಿದ್ದು, ಅದರ ಗಡುವನ್ನು ಆರು ತಿಂಗಳ ಕಾಲ ವಿಸ್ತರಿಸಲು ಆಹಾರ್‌ ಸರಕಾರಕ್ಕೆ ಹಾಗೂ ಮಹಾನಗರ ಪಾಲಿಕೆಗೆ ಮನವಿ ಮಾಡಿದೆ ಎಂದು ಆಹಾರ್‌ನ ಅಧ್ಯಕ್ಷ ಶಿವಾನಂದ ಶೆಟ್ಟಿ ಅವರು ತಿಳಿಸಿದ್ದಾರೆ.

Advertisement

ಮೇ 24ರಂದು ಸಂಜೆ 6ಕ್ಕೆ ನಾನಾ ಚೌಕ್‌ನಲ್ಲಿರುವ ಕೃಷ್ಣ ಪ್ಯಾಲೇಸ್‌ ರೆಸಿಡೆನ್ಸಿಯ ಸಭಾಗೃಹದಲ್ಲಿ ಆಹಾರ್‌ ವಲಯ-3ರ ಪ್ರಾಯೋಜಕತ್ವದಲ್ಲಿ ನಡೆದ ನಾಲ್ಕನೇ ಮಾಸಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಧ್ಯ ಪೂರೈಕೆ ಮಾಡುವ ಹೊಟೇಲ್‌ಗ‌ಳ ದೇವರ ಹೆಸರನ್ನು ಬದಲಾಯಿಸಲು ಅಬಕಾರಿ ವಿಭಾಗ ಸುತ್ತೋಲೆಯನ್ನು ಹೊರಡಿಸಿದ್ದು, ಅದು ಕೇವಲ ನೂತನ ಹೊಟೇಲ್‌ಗ‌ಳಿಗೆ ಅನ್ವಯಿಸಬೇಕು. ಪ್ರಸ್ತುತ ಇರುವ ಹೆಸರನ್ನು ಮುಂದುವರಿಸಲು ಅವಕಾಶ ನೀಡಬೇಕು ಎಂದು ಸರಕಾರಕ್ಕೆ ಮನವಿಯನ್ನು ಮಾಡಲಾಗಿದೆ. ಆಹಾರ್‌ನ ಸದಸ್ಯರಲ್ಲಿ ಕ್ರೀಡಾ ಮನೋಭಾವನೆಯನ್ನು ಮೂಡಿಸಲು ಎಪ್ರಿಲ್‌ 28ರಂದು ವಸಂತ್‌ ದಾದಾ ಪಾಟೀಲ್‌ ಕ್ರೀಡಾಂಗಣದಲ್ಲಿ ಆಹಾರ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಪಂದ್ಯಾಟವನ್ನು ಯಶಸ್ವಿಯಾಗಿ ನಡೆದಿದ್ದು, ಉತ್ತಮ ಸ್ಪಂದನೆ ಲಭಿಸಿದೆ. ಇದರ ಯಶಸ್ಸಿಗೆ ಕಾರಣಕರ್ತರಾದ ಸರ್ವರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಪಾಲ್ಗೊಂಡ ಎಲ್ಲ ಕ್ರೀಡಾಳುಗಳನ್ನು ಅಭಿನಂದಿಸಿದರು.

ನಾಮಫಲಕದ ಗಡುವು ವಿಸ್ತರಣೆಗಾಗಿ ಆಹಾರ್‌ ರಾಜ್ಯ ಸರಕಾರ ಮತ್ತು ಮಹಾನಗರ ಪಾಲಿಕೆಯ ಸಂಬಂಧಿತ ಇಲಾಖೆಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿದ್ದು, ನಮ್ಮ ಮನವಿಗೆ ಪೂರಕವಾಗಿ ಸ್ಪಂದನೆ ಲಭಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ ಆಹಾರ್‌ನ ಅಧ್ಯಕ್ಷ ಶಿವಾನಂದ ಶೆಟ್ಟಿ ಅವರು, ಇತ್ತೀಚೆಗೆ ಜರಗಿದ ಥಾಮಸ್‌ ಕಪ್‌ ಡಬಲ್ಸ್‌ನ್ನು ಗೆದ್ದ ಆಹಾರ್‌ನ ಸದಸ್ಯ ಚಂದ್ರಶೇಖರ್‌ ಶೆಟ್ಟಿ ಅವರ ಪುತ್ರ ಚಿರಾಗ್‌ ಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಿಸಿದರು. ಎಗ್ರಿಗೇಶನ್‌ ವಿರುದ್ಧ ಆಹಾರ್‌ ರಿಟ್‌ಫೈಲ್‌ ಮಾಡಿದ್ದು, ಅದನ್ನು ಆದಷ್ಟು ಬೇಗ ವಿಚಾರಣೆಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದರು.

ಆಹಾರ್‌ನ ಸದಸ್ಯ ಹೊಟೇಲಿಗರಿಗೆ ಮಾನ್ಸೂನ್‌ ಶೆಡ್‌ ನಿರ್ಮಿಸಲಿಕ್ಕಿದ್ದಲ್ಲಿ ಕೂಡಲೇ ಮಹಾನಗರ ಪಾಲಿಕೆಯ ವಿವಿಧ ವಾರ್ಡ್‌ನ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಸಲಹೆ ನೀಡಿದ ಅಧ್ಯಕ್ಷರು, ಪ್ರಶಿಕ್ಷಣ್‌ ಸಂಸ್ಥೆಯಿಂದ ಆರೋಗ್ಯಕರ ರೇಟಿಂಗ್‌ ಹಾಗೂ ಆಹಾರದ ಅಡಿಟ್‌ ಅನ್ನು ಮಾಡಿ ಪ್ರಮಾಣ ಪತ್ರವನ್ನು ಪಡೆಯಬಹುದು ಎಂದು ಸದಸ್ಯ ಬಾಂಧವರಿಗೆ ಮನವಿ ಮಾಡಿದರು.

ಮಾಸಿಕ ಮಹಾಸಭೆಯ ಪ್ರಾಯೋಜಕರಾದ ಆಹಾರ್‌ ವಲಯ ಮೂರರ ಉಪಾಧ್ಯಕ್ಷ ಸುರೇಶ್‌ ಜಿ. ಶೆಟ್ಟಿ ಅವರು ಸ್ವಾಗತಿಸಿದರು. ಉಪಸಮಿತಿಯ ಪ್ರೊಮೋಷನ್‌ ವಿಭಾಗದ ಅಧ್ಯಕ್ಷ ಮಹೇಶ್‌ ಶೆಟ್ಟಿ, ಕಾನೂನು ವಿಭಾಗದ ಅಧ್ಯಕ್ಷ ಗುರುಪ್ರಸಾದ್‌ ಶೆಟ್ಟಿ ಮತ್ತು ಕಮಲಾಕರ್‌ ಶೆಣೈ ತಮ್ಮ ಉಪ ಸಮಿತಿಗಳ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

Advertisement

ಸಲಹೆಗಾರರಾದ ಸಂತೋಷ್‌ ರಾಮಣ್ಣ ಶೆಟ್ಟಿ, ಸಂತೋಷ್‌ ರಾಜು ಶೆಟ್ಟಿ ಸಲಹೆಗಳನ್ನಿತ್ತು ಸಹಕರಿಸಿ ದರು. ಪ್ರದರ್ಶನ ಮಳಿಗೆಯಲ್ಲಿ ಭಾಗವಹಿ ಸಿದ ವಿವಿಧ ಕಂಪೆನಿ ಹಾಗೂ ಮುಖ್ಯಸ್ಥರನ್ನು ಗೌರವ ಜತೆ ಕಾರ್ಯದರ್ಶಿ ಪ್ರಮೋದ್‌ ಕಾಮತ್‌ ಅವರು ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ್‌ ಟಿ. ಶೆಟ್ಟಿ ಅವರು ಅಗಲಿದ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಸಂಸ್ಥೆಯ ಸಾಧನೆಗಳಿಗೆ ಬಂದ ಪ್ರಶಂಸಾ ಪತ್ರಗಳನ್ನು ಓದಿದರು.

ವಲಯ ಒಂದರ ಉಪಾಧ್ಯಕ್ಷ ಸಂಕರ್ಷಣ್‌ ನಾಯಕ್‌, ವಲಯ ಎರಡರ ಉಪಾಧ್ಯಕ್ಷ ನಿರಂಜನ್‌ ಶೆಟ್ಟಿ, ವಲಯ ಮೂರರ ಉಪಾಧ್ಯಕ್ಷ ಸುರೇಶ್‌ ಜಿ. ಶೆಟ್ಟಿ, ವಲಯ ನಾಲ್ಕರ ಉಪಾಧ್ಯಕ್ಷ ಶಶಿಧರ ಶೆಟ್ಟಿ, ವಲಯ ಐದರ ಉಪಾಧ್ಯಕ್ಷ ಸುರೇಶ್‌ ವಿ. ಶೆಟ್ಟಿ, ವಲಯ ಆರರ ಉಪಾಧ್ಯಕ್ಷ ಸುನಿಲ್‌ ಪಾಟೀಲ್‌, ವಲಯ ಏಳರ ಉಪಾಧ್ಯಕ್ಷ ಡಾ| ಸಂತೋಷ್‌ ರೈ, ವಲಯ ಎಂಟರ ಉಪಾಧ್ಯಕ್ಷ ಭುಜಂಗ ಶೆಟ್ಟಿ, ವಲಯ ಒಂಭತ್ತರ ಉಪಾಧ್ಯಕ್ಷ ಜಯದೀಪ್‌ ದೇವಾಡಿಗ, ವಲಯ ಹತ್ತರ ಉಪಾಧ್ಯಕ್ಷ ಡಾ| ಸತೀಶ್‌ ಶೆಟ್ಟಿ ತಮ್ಮ ವಲಯದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದರು.

ವಲಯ 3ರ ವತಿಯಿಂದ ಅಧ್ಯಕ್ಷ ಶಿವಾನಂದ ಶೆಟ್ಟಿ ಹಾಗೂ ಉಪಾಧ್ಯಕ್ಷ ಸುರೇಶ್‌ ಜಿ. ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಗೌರವ ಪ್ರಧಾನ ಕಾರ್ಯದರ್ಶಿ ಸುಧಾಕರ್‌ ಟಿ. ಶೆಟ್ಟಿ ಅವರು ವಂದಿಸಿದರು. ಆಹಾರ್‌ನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸದಸ್ಯ ಬಾಂಧವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next