Advertisement

ರೈಲುಗಳಿಗೆ ನಿಲ್ಲಲು ಜಾಗವಿಲ್ಲ 

10:53 AM Dec 27, 2017 | Team Udayavani |

ಮಹಾನಗರ: ವಿಶ್ವದರ್ಜೆಗೇರುವ ಕನಸಿನ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ನಾಲ್ಕನೇ ಪ್ಲಾಟ್‌ಫಾರಂ ನಿರ್ಮಾಣಕ್ಕೆ ಮಂಜೂರಾತಿ ದೊರೆತು, ಟೆಂಡರ್‌ ಪ್ರಕ್ರಿಯೆಯೂ ಮುಗಿದಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು. ಇದರೊಂದಿಗೆ ನೇತ್ರಾವತಿ- ಮಂಗಳೂರು ಸೆಂಟ್ರಲ್‌ 1.5 ಕಿ.ಮೀ. ರೈಲು ಮಾರ್ಗದ ದ್ವಿಪಥ ಕಾಮಗಾರಿಯ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ.

Advertisement

ಇತ್ತೀಚೆಗೆ ಪಾಲ್ಘಾಟ್‌ನಲ್ಲಿ ನಡೆದ ರೈಲು ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ದಕ್ಷಿಣ ರೈಲ್ವೇ ಪಾಲ್ಘಾಟ್‌ ವಿಭಾಗದ ಮಹಾ ಪ್ರಬಂಧಕ ನರೇಶ್‌ ಲಾಲ್ವಾನಿ ಅವರು ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣ ಹಾಗೂ ಕಣ್ಣೂರಿನಲ್ಲಿ ತಲಾ ಒಂದು ಪ್ಲಾಟ್‌ ಫಾರಂ ನಿರ್ಮಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಹೆಚ್ಚುವರಿ ರೈಲುಗಳ ನಿಲುಗಡೆಗೆ ಅವಕಾಶ ದೊರೆಯಲಿದೆ. ಶೀಘ್ರ ಕಾಮಗಾರಿ ಆರಂಭಿಸುವುದಾಗಿ ರೈಲ್ವೇ ಇಲಾಖೆ ಹೇಳುತ್ತಿದ್ದರೂ ಕಾಮಗಾರಿ ನಡೆಯುವ ಯಾವುದೇ ಸೂಚನೆ ಲಭಿಸದೆ, ರೈಲು ಪ್ರಯಾಣಿಕರಲ್ಲಿ ನಿರಾಶೆ ಮೂಡಿತ್ತು.

ಸೆಂಟ್ರಲ್‌ಗೆ ಬರುವ ರೈಲು ಜಂಕ್ಷನ್‌ಗೆ!
‘ಮಂಗಳೂರು ಸೆಂಟ್ರಲ್‌ನಲ್ಲಿ ಪ್ಲಾಟ್‌ ಫಾರ್ಮ್ ಖಾಲಿ ಇಲ್ಲ’ ಎಂಬ ಕಾರಣ ನೀಡಿ ಪ್ರಸ್ತುತ ಕಂಕನಾಡಿ, ನೇತ್ರಾವತಿ
ಸೇತುವೆ ಸಮೀಪ ಕೆಲವು ರೈಲುಗಳನ್ನು ನಿಲ್ಲಿಸ ಲಾಗುತ್ತದೆ. ಮೂರು ಪ್ಲಾಟ್‌ ಫಾರಂಗಳಲ್ಲಿ ನಿಂತಿರುವ ರೈಲು ಗಳು
ಮುಂದಕ್ಕೆ ಚಲಿಸದೆ ಉಳಿದ ರೈಲುಗಳು ನಿಲ್ದಾಣ ಪ್ರವೇಶಿಸುವಂತಿಲ್ಲ. ಹೊಸ ಪ್ಲಾಟ್‌ ಫಾರಂ ಒಂದು ಸಲಕ್ಕೆ ಮತ್ತೂಂದು ರೈಲು ನಿಲುಗಡೆಗೆ ಅವಕಾಶ ನೀಡುವುದರಿಂದ ಸಮಸ್ಯೆ ಬಹುತೇಕ ನಿವಾರಣೆಯಾಗುತ್ತದೆ. ಹೊಸ ರೈಲುಗಳ ಸೇವೆಯನ್ನು ಮಂಗಳೂರು ಸೆಂಟ್ರಲ್‌ ನಿಲ್ದಾಣದಿಂದ ಆರಂಭಿಸಲೂ ಅವಕಾಶವಾಗುತ್ತದೆ.

ಮುಂಬಯಿ ಸಿಎಸ್‌ಟಿ – ಮಂಗಳೂರು ರೈಲು ಮಂಗಳೂರು ಸೆಂಟ್ರಲ್‌ಗೆ ಬರಬೇಕು ಎಂದು ಇಲಾಖೆ ಆದೇಶವಿದ್ದರೂ ಪ್ಲಾಟ್‌ ಫಾರಂ ಇಲ್ಲ ಎನ್ನುವ ಕಾರಣ ನೀಡಿ, ಮಂಗಳೂರು ಜಂಕ್ಷನ್‌ಗೇ (ಕಂಕನಾಡಿ) ಕೊನೆಯಾಗುತ್ತಿದೆ. ಮಂಗಳೂರು- ಬೆಂಗಳೂರು ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ನಿಂದ ಹೊರಡುವುದಕ್ಕೂ ಪ್ಲಾಟ್‌ಫಾರಂ ಕೊರತೆಯೇ ಅಡ್ಡಿಯಾಗಿದೆ. ಆದರೆ, ಪಾಲ್ಘಾಟ್‌- ಮಂಗಳೂರು ಇಂಟರ್‌ಸಿಟಿ ರೈಲು ಮಂಗಳೂರು ಸೆಂಟ್ರಲ್‌ನಿಂದಲೇ ಹೊರಡುತ್ತಿದೆ. ಪ್ಲಾಟ್‌ಫಾರಂ ಇಲ್ಲ ಎಂಬ ನೆಪದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಹೋರಾಟಗಾರ ಹನುಮಂತ ಕಾಮತ್‌ ಆರೋಪಿಸಿದ್ದಾರೆ.

ದಿನ ಕೂಡಿಬಂದಿಲ್ಲ!
ಮಂಗಳೂರು ಸೆಂಟ್ರಲ್‌ಗೆ ಅತ್ತಾವರ ದಿಂದ ಎರಡನೇ ಪ್ರವೇಶ ದ್ವಾರ ಆರಂಭಿಸುವ ಬಗ್ಗೆ ಒಂದೂವರೆ ವರ್ಷದ ಹಿಂದೆ ಯೋಜನೆ ಜಾರಿಗೊಳಿ ಸಲಾಗಿತ್ತು. ಇದಕ್ಕೆ ಟೆಂಡರ್‌ ಆಗಿದೆ. ಟಿಕೆಟ್‌ ಕೌಂಟರ್‌, ಪಾರ್ಕಿಂಗ್‌ ಸ್ಥಳ ಸಹಿತ ವ್ಯವಸ್ಥೆಗಳನ್ನು ಕೈಗೊಳ್ಳುವ ಗುರಿ ಹೊಂದಲಾಗಿದೆ. ಆದರೆ, ಕಾಮಗಾರಿ ಮಾತ್ರ ಇನ್ನೂ ಆರಂಭವಾಗಿಲ್ಲ.

Advertisement

ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಗೂಡ್ಸ್‌ ಲೋಡಿಂಗ್‌ ಪ್ರಕ್ರಿಯೆ ಈಗ 3ನೇ ಪ್ಲಾಟ್‌ಫಾರಂನಲ್ಲಿ ನಡೆಯುತ್ತಿದೆ. ಅತ್ತಾವರ ಬದಿಯಿಂದ ವಾಹನ ಗಳಲ್ಲಿ ಸಾಮಾನು ಸರಂಜಾಮನ್ನು ಮೂರನೇ ಪ್ಲಾಟ್‌ಫಾರಂಗೆ ತಂದು, ರೈಲಿಗೆ ತುಂಬಿಸಲಾಗುತ್ತದೆ. ಆದರೆ, ಸ್ಥಳಾವಕಾಶದ ಕೊರತೆಯಿಂದ ಸಮಸ್ಯೆ ಯಾಗುತ್ತಿದೆ. ಈ ಕಾಮಗಾರಿಯೂ ತ್ವರಿತವಾಗಿ ಆಗಬೇಕಿದೆ.

3 ವರ್ಷ ಹಿಂದೆಯೇ ಮನವಿ 
ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಎರಡು ಪ್ಲಾಟ್‌ಫಾರಂಗಳ ಅಗತ್ಯ ವಿರುವ ಬಗ್ಗೆ ಪಶ್ಚಿಮ ಕರಾವಳಿ ರೈಲ್ವೇ ಅಭಿವೃದ್ಧಿ ಸಮಿತಿ 3 ವರ್ಷಗಳ ಹಿಂದೆಯೇ ಮನವಿ ಸಲ್ಲಿಸಿತ್ತು. ಇದಕ್ಕೆ 14 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಿ ಕಳುಹಿಸಿದ್ದರೂ ರೈಲ್ವೇ ಸಚಿವಾಲಯ ತಿರಸ್ಕರಿಸಿತ್ತು. ಒಂದು ವರ್ಷದ ಬಳಿಕ 1 ಪ್ಲಾಟ್‌ಫಾರಂ ನಿರ್ಮಿಸಲು ಅವಕಾಶ ನೀಡುವಂತೆ ಸಂಸದ ನಳಿನ್‌ ಕುಮಾರ್‌ ಅವರ ಮೂಲಕ ಮನವಿ ಸಲ್ಲಿಸಲಾಗಿತ್ತು. 7 ಕೋಟಿ ರೂ. ವೆಚ್ಚದ ಈ ಯೋಜನೆಗೆ ಆರು ತಿಂಗಳ ಹಿಂದೆ ಅನುಮೋದನೆ ಲಭಿಸಿತ್ತು. ಟೆಂಡರ್‌ ಕೂಡ ಪೂರ್ಣಗೊಂಡಿದೆ. ಇತರ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಕಾಮಗಾರಿ ಆರಂಭವಾಗಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

4ನೇ ಪ್ಲಾಟ್‌ ಫಾರ್ಮ್ ಗೆ ಕ್ರಮ
ನೇತ್ರಾವತಿ ಸೇತುವೆಯಿಂದ ಮಂಗಳೂರು ಸೆಂಟ್ರಲ್‌ವರೆಗಿನ ರೈಲ್ವೇ ಹಳಿ ದ್ವಿಗುಣಗೊಳಿಸುವ ಕಾರ್ಯ, ಸೆಂಟ್ರಲ್‌ನಲ್ಲಿ 4ನೇ ಪ್ಲಾಟ್‌ಫಾರ್ಮ್ ನಿರ್ಮಾಣದ ಬಗ್ಗೆ ಅಂತಿಮ ಕ್ರಮಕ್ಕೆ ಈಗಾಗಲೇ ಪಾಲ್ಘಾಟ್‌ ರೈಲ್ವೇ ವಿಭಾಗ ನಿರ್ಧರಿಸಿದೆ. ಎರಡೂ ಕಾರ್ಯಗಳನ್ನು ತ್ವರಿತವಾಗಿ, ಅತ್ಯಂತ ಎಚ್ಚರಿಕೆ, ಜವಾಬ್ದಾರಿಯಿಂದ ನಿರ್ವಹಿಸಬೇಕಿದೆ. ಕಾಮಗಾರಿ ಕೈಗೊಳ್ಳುವ ವೇಳೆ ಎದುರಾಗುವ ವಿಚಾರ ಕುರಿತಂತೆ ಮಾತುಕತೆ ನಡೆಯುತ್ತಿದೆ.
ನರೇಶ್‌ ಲಾಲ್ವಾನಿ, ಪಾಲ್ಘಾಟ್‌
   ರೈಲ್ವೇ ವಿಭಾಗೀಯ ಪ್ರಬಂಧಕರು 

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next