Advertisement

ಸಕಾರಾತ್ಮಕ ಸಂಘಟನೆ ಕಟ್ಟಲು ನಾಲ್ಕು ಮಾತು

02:25 PM May 14, 2018 | Harsha Rao |

ಪ್ರತಿ ವರ್ಷವೂ  ನೂರಕ್ಕೂ ಹೆಚ್ಚು  ಸಂಘ-ಸಂಸ್ಥೆಗಳು ಹುಟ್ಟಿಕೊಳ್ಳುತ್ತವೆ. ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಅವುಗಳ ನೋಂದಾವಣಿಯೂ ಆಗುತ್ತದೆ. ಹೀಗೆ ಆರಂಭವಾಗುವ ಸಂಘಸಂಸ್ಥೆಗಳಿÉ ಸದಸ್ಯರಾಗಿ ನಿರ್ದೇಶಕರಾಗಿ, ಯಾರಾರು ಇರಬಹುದು? ಅವರ ಕೆಲಸಗಳೇನು? ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

Advertisement

ಸಂಘ/ಸಂಸ್ಥೆ ಎಂದರೆ ಯಾವುದೇ ಕಾನೂನಿನ್ವಯ ನೋಂದಾಯಿಸಲ್ಪಟ್ಟ,  ನಿರಂತರ ಅಸ್ತಿತ್ವವನ್ನು ಹೊಂದಿರುವ, ಸಾರ್ವಜನಿಕ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುತ್ತಿರುವ, ಲಾಭಾಸಕ್ತಿ ಇಲ್ಲದ,  ಸರಕಾರೇತರ ಸ್ವಯಂಸೇವಾ ಸಂಸ್ಥೆಗಳು. ಈ ರೀತಿ ಶುಷ್ಕವಾಗಿ ಹೇಳಿದರೆ ಅರ್ಥವಾಗುವುದಕ್ಕಿಂತ ಗೊಂದಲಗಳೇ ಹೆಚ್ಚು ಸೃಷ್ಟಿಯಾಗಬಹುದು. ಒಂದು ಕಾನೂನಿನ ಚೌಕಟ್ಟು ಹೊಂದಿರುವ, ಸ್ಪಷ್ಟ ನೀತಿನಿಯಮಗಳನ್ನು ಹೊಂದಿರುವ ಸಮಾನ ಮನಸ್ಸಿನವರ ಗುಂಪನ್ನು ಸಂಘಟನೆ ಎನ್ನಬಹುದು. 

ಇಂಥವುಗಳ ಮುಖ್ಯ ಅಂಶಗಳನ್ನು ಹೀಗೆ ಗುರುತಿಸೋಣ. ನೆಲದ ಕಾನೂನಿನಂತೆ ಅವು ನೋಂದಾಯಿತವಾಗಿರಬೇಕು. ಕೆಲವೊಂದು ಸಂಘಟನೆಗಳು ಆಯಾ ಸಂದರ್ಭಕ್ಕೆ ಮಾತ್ರ ಹುಟ್ಟಿಕೊಳ್ಳುತ್ತವೆ. ಯಾರೋ ಗಣ್ಯರಿಗೆ 80 ವರ್ಷ ಆಗಿದೆ. ಸಹಸ್ರ ಚಂದ್ರನ ದರ್ಶನ ಸಂದರ್ಭದಲ್ಲಿ ಒಂದು ಸ್ಮರಣ ಸಂಚಿಕೆ, ಸಮಾರಂಭ ಮಾಡಬೇಕು. ಆಗಲೂ ಸಮಿತಿ ಬೇಕು. ಅದಕ್ಕೊಂದು ಸಾಂಸ್ಥಿಕ ರೂಪವೇ ಇರುತ್ತದೆ. ಆದರದು ನಿರಂತರವಾಗಿರಬಯಸುವುದಲ್ಲ. ಒಂದು ಸಂಸ್ಥೆ ಗುರುತಿಸಿಕೊಳ್ಳಲು ಅದಕ್ಕೆ ಬಹುವರ್ಷದ ನಿರಂತರತೆ ಬೇಕು. ಅಷ್ಟಕ್ಕೂ ಉದ್ದೇಶ ಸಮುದಾಯದ್ದಾಗಿರಬೇಕು. ವೈಯುಕ್ತಿಕವಾಗಿ ಅನುಕೂಲ ಮಾಡಿಕೊಳ್ಳಲು ಸಂಘ-ಸಂಸ್ಥೆ ಹುಟ್ಟುಹಾಕುವ ಪ್ರಯತ್ನವನ್ನು ಹೆಚ್ಚೆಂದರೆ ಕಂಪನಿ ಸಾಹಸ ಎನ್ನಬಹುದು. ಸಮಾಜದ ಒಳಿತಿಗಾಗಿಯೇ ಸಂಘ ಹುಟ್ಟಿಕೊಳ್ಳಬೇಕು.

ಇಂಥ ಸಂಘಗಳು ಸಾರ್ವಜನಿಕರಿಂದ ಸೃಷ್ಟಿಯಾಗುತ್ತದೆ. ಸರ್ಕಾರ ಮುಂದಿನ ದಿನಗಳಲ್ಲಿ ಅದರ ಕಾರ್ಯ ಚಟುವಟಿಕೆಗಳಿಗೆ ಹಣ ಒದಗಿಸಬಹುದು. ಆದರೆ ಸರ್ಕಾರವೇ ತನ್ನ ವ್ಯಾಪ್ತಿಯ ಆಚೆಗೆ ಸಂಘ ಸಂಸ್ಥೆಯನ್ನು ಕಟ್ಟಲು ಅವಕಾಶವಿಲ್ಲ.  ಸಂಘಟನೆಯನ್ನು ಹೆಚ್ಚು ಅಧಿಕೃತಗೊಳಿಸುವುದು ಅದರ ನೋಂದಣಿ ಪ್ರಕ್ರಿಯೆ. ಒಂದು ಊರಿನಲ್ಲಿ ನೂರಾರು ಸಂಘಟನೆಗಳ ಇರಬಹುದಾದರೂ ಕೆಲವಕ್ಕೆ ಮಾತ್ರ ದೇಶದ ಕಾನೂನಿನಡಿಯಲ್ಲಿ ದಾಖಲಿಸಲ್ಪಟ್ಟಿರುವಂತದನ್ನು ಕಾಣಬಹುದು. ಹಾಗಾಗಿಯೇ ಹಲವು ಸಂಸ್ಥೆಗಳ ಹೆಸರಿನ ಜೊತೆಗೆ ಶೀರ್ಷಿಕೆಯಲ್ಲಿ “(ರಿ)’ ಎಂಬ ರಿಜಿಸ್ಟರ್ಡ್‌ ಎಂಬುದರ ಹೃಸ್ವ ಮಾಹಿತಿಯನ್ನೂ ಕಾಣುತ್ತೇವೆ. ಸಂಸ್ಥೆ ನೋಂದಾಯಿತವಾಗುವುದರಿಂದ ಉತ್ತರದಾಯಿತ್ವದ ಹೊಣೆ ಹೆಗಲೇರುತ್ತದೆ. ಬೇಕಾಬಿಟ್ಟಿ ವರ್ತನೆ ಸಾಧ್ಯವಾಗುವುದಿಲ್ಲ. ಪ್ರಮುಖವಾಗಿ, ಸರ್ಕಾರ ತನ್ನ ಚಟುವಟಿಕೆಯೊಂದನ್ನು ಸರ್ಕಾರೇತರ ಸಂಸ್ಥೆಯಿಂದ ನಿರ್ವಹಿಸಲು ಯೋಚಿಸಿದಾಗ ರಿಜಿಸ್ಟರ್ಡ್‌ ಎನ್‌ಜಿಓಗಳಿಗೆ ಮಾತ್ರ ಅಂತಹ ಅವಕಾಶ ಲಭಿಸುತ್ತದೆ.

ಎರಡು ಆಯ್ಕೆಗಳು
ನೋಂದಣಿ, ಸಮಾಜದಲ್ಲಿ ಸಂಸ್ಥೆಗೆ ಗಮನಾರ್ಹ ಗೌರವವನ್ನು ತಂದುಕೊಡುವುದು ನಿಶ್ಚಿತ. ಸಂಘ ಸಂಸ್ಥೆ ಸಮಾಜಮುಖೀಯಾದದ್ದು ಎನ್ನುವುದನ್ನು ನೋಂದಣಿಯೂ ದೃಢಪಡಿಸುವಂಥದು. ಅದರ ವಿಧಾನಗಳಲ್ಲಿ ಕಾನೂನಿನಲ್ಲಿ ಎರಡು ಆಯ್ಕೆಗಳಿವೆ. ಮೊದಲನೆಯದು,  ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ, 1960. ಇದು ಬಿಟ್ಟರೆ, ಭಾರತೀಯ ವಿಶ್ವಸ್ಥ ಕಾಯ್ದೆ, 1882.

Advertisement

ನೋಂದಣೆ ಎಂಬುದು ಕೆಲವು ಅಂಶಗಳನ್ನು ತಾನೇತಾನಾಗಿ ದೃಢಪಡಿಸುತ್ತದೆ. ಈ ಸಂಸ್ಥೆ ಲಾಭಾಸಕ್ತಿಇಲ್ಲದ, ಸರಕಾರೇತರ ಸಂಸ್ಥೆ ಎಂಬ ಮಾನ್ಯತೆ. ಸಂಸ್ಥೆಯಲ್ಲಿ ಸದಸ್ಯರಿಗೆ ಸೇವಾ ಚಟುವಟಿಕೆಗಳಿಗೆ ಸಮಾನ ಅವಕಾಶ ಲಭ್ಯವಾಗುತ್ತದೆ ಎಂಬ ನಂಬಿಕೆ.  ಸಂಸ್ಥೆ ಅಥವಾ ಈ ಸಂಘ ನಿಶ್ಚಿತ ಧ್ಯೇಯೋದ್ದೇಶಗಳು, ಕಾರ್ಯಚಟುವಟಿಕೆಗಳನ್ನು ಹೊಂದಿದೆ ಎಂಬ ನಿರ್ಧಾರ. ಸಂಸ್ಥೆ ಸ್ವಾರ್ಥದ ಪರಿಧಿಯಲ್ಲಿ ಇಲ್ಲ, ಇಲ್ಲಿ ಸದಸ್ಯರು ಬೇರೆ, ಫ‌ಲಾನುಭವಿಗಳು ಬೇರೆ ಎಂಬ ಪರಿಕಲ್ಪನೆ. ನೋಂದಾಯಿತ ಸಾರ್ವಜನಿಕ ಸಂಸ್ಥೆ ಎಂಬ ಮಾನ್ಯತೆಯನ್ನು ಈ ಎರಡೂ ಕಾಯ್ದೆಯಡಿ ರಿಜಿಸ್ಟರ್‌ ಆದ ಸಂಘಟನೆ ಪ್ರತಿಪಾದಿಸುತ್ತದೆ, ದೃಢಪಡಿಸುತ್ತದೆ.

ಆರ್ಥಿಕ ವ್ಯವಸ್ಥೆ, ಶಿಸ್ತು ಥರಹದ ಮಾತು ಬಂದರೂ ನೋಂದಾಯಿತ ಸಂಸ್ಥೆ ಜವಾಬ್ದಾರಿಪೂರ್ಣ. ಇಂಥ ಸಂಘಟನೆಯಲ್ಲಿ ಎಲ್ಲ ಸರ್ಕಾರಿ, ಬ್ಯಾಂಕುಗಳ ಸವಲತ್ತುಗಳಿಗೂ ಅವಕಾಶ ಇರುತ್ತದೆ. ಸರ್ಕಾರಿ ಸಹಾಯಧನ, ಯೋಜನೆಗಳನ್ನು ಪಡೆಯುವಾಗಲಂತೂ ಸಂಸ್ಥೆ ನೋಂದಾಯಿತವಾಗಿರಬೇಕು. ಸಂಸ್ಥೆ ತನ್ನ ಒಂದು ಉದ್ದೇಶಕ್ಕಾಗಿ ಹಣ ಸಂಗ್ರಹಿಸಬೇಕು. ಇದೇ ವೇಳೆ ದೇಣಿಗೆ ನೀಡುವ ಜನ ಕೂಡ ತೆರಿಗೆ ಸೋಡಿ ಸಿಗುವ ಪಾವತಿ ಅವಕಾಶವನ್ನು ನಿರೀಕ್ಷಿಸುತ್ತಾರೆ. 80ಜಿ ಎಂಬ ತೆರಿಗೆ ನಿಯಮಗಳ ರಿಯಾಯ್ತಿ ಅನುಕೂಲ ಸಂಸ್ಥೆಯೊಂದು ಪಡೆಯಬೇಕು ಎಂತಾದರೆ ಅದು ರಿಜಿಸ್ಟರ್ಡ್‌ ಆಗಿರಲೇಬೇಕು. ಅದರ ಹಣಕಾಸು ವ್ಯವಹಾರ ಲೆಕ್ಕಪತ್ರ ಪರಿಶೀಲನೆಯಲ್ಲಿ ಉತ್ತೀರ್ಣವಾಗಿರಬೇಕು ಅರ್ಥಾತ್‌ ಆಡಿಟ್‌ ಆಗಿರಬೇಕು. ಇಂತಹ ಸಂಸ್ಥೆಗಳು ಶರತ್ತಿಗೊಳಪಟ್ಟು ಆದಾಯ ತೆರಿಗೆ ಕಾಯ್ದೆಯಡಿಯಲ್ಲಿ ವಿನಾಯಿತಿ ಲಭ್ಯವಾಗುತ್ತದೆ.

ಅನುಕೂಲ ಅನಾನುಕೂಲ
ಸಂಘಗಳ ನೋಂದಣಿ ಅಧಿನಿಯಮ ಹಾಗೂ ಭಾರತೀಯ ವಿಶ್ವಸ್ಥ ಕಾಯ್ದೆಯಡಿ ನೋಂದಣಿಯಾಗುವ ಎರಡು ಆಯ್ಕೆಗಳಲ್ಲಿ ಅನುಕೂಲ ಅನಾನುಕೂಲಗಳನ್ನೂ ನೋಂದಣಿಗೆ ಮುನ್ನವೇ ತೂಕ ಹಾಕಿ ನೋಡಿಕೊಳ್ಳಬೇಕು. ಸಾಮಾನ್ಯರ ಭಾಷೆಯಲ್ಲಿ ಹೇಳುವುದಾದರೆ, ಮೊದಲನೆಯದು ಸೊಸೈಟಿ ಆ್ಯಕ್ಟ್ ಅನ್ವಯ ರಿಜಿಸ್ಟೇಷನ್‌ ಎನ್ನಿಸಿಕೊಂಡರೆ, ಎರಡನೆಯದು ದತ್ತಿ ಯಾನೆ ಟ್ರಸ್ಟ್‌ ಮಾಡುವ ಯೋಚನೆ.

ಸಂಘಗಳ ನೋಂದಣಿ ಅಧಿನಿಯಮದ ಪ್ರಕಾರ ಸೊಸೈಟಿ/ ಅಸೋಸಿಯೇಷನ್‌ ರೂಪಿಸಿ ಅಧಿಕೃತ ಸಂಸ್ಥೆಯಾಗಬಹುದು. ಇಂಥ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ, ಆರಂಭದಲ್ಲಿ ಕನಿಷ್ಠ ಏಳು ಜನ ಪ್ರವರ್ತಕರು ಇರಲೇಬೇಕು. ಇಂಥ ಸಂಘಟನೆಯನ್ನು ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಒಂದರ್ಥದಲ್ಲಿ ನೋಂದಣಿ ಪ್ರಕ್ರಿಯೆ ಸ್ವಲ್ಪ ಪ್ರಯಾಸಕರ. ಆದರೆ ಹೆಚ್ಚು ಪಾರದರ್ಶಕ, ಪ್ರಜಾತಾಂತ್ರಿಕ. ಮುಂದಿನ ದಿನಗಳಲ್ಲಿ ಯಾರೊಬ್ಬರೂ ಸಂಸ್ಥೆಯನ್ನು ಹೈಜಾಕ್‌ ಮಾಡಲಾಗದಂತಹ ಕಾನೂನು ರಕ್ಷಣೆ ಸೊಸೈಟಿ/ ಅಸೋಸಿಯೇಷನ್‌ಗಿರುವುದು ದಿಟ. ಇಲ್ಲಿ ಸದಸ್ಯತ್ವಕ್ಕೆ ಜನರೇ ಅರ್ಜಿ ಸಲ್ಲಿಸಬೇಕು.  ಸಾಮಾನ್ಯವಾಗಿ ನಿರ್ದಿಷ್ಟ ಸದಸ್ಯತ್ವ ಶುಲ್ಕವನ್ನೂ ಭರಿಸಬೇಕಾಗುತ್ತದೆ. 

ಸಂಸ್ಥೆ ಚುನಾಯಿತ ನಿರ್ದೇಶಕರನ್ನು ಒಳಗೊಂಡಿರುತ್ತದೆ. ಅಂದರೆ ಈ ನಿರ್ದೇಶಕರ ಆಯ್ಕೆಯ ಹಕ್ಕು ಸದಸ್ಯ ಮತದಾರರಾಗಿರುತ್ತದೆ. ನಿರ್ದೇಶಕರ ಕಾರ್ಯಚಟುವಟಿಕೆಯ ಒಂದು ಮಟ್ಟದ ಹಿಡಿತ ಸದಸ್ಯರಿಗೆ ಲಭ್ಯವಾಗುವುದು ಈ  ನಿಯಮದಿಂದ ಎಂಬುದು ನೆನಪಿನಲ್ಲಿರಲಿ. ನಿಜ, ಪ್ರತಿ ವರ್ಷ ಸಂಸ್ಥೆಯ ನೋಂದಣಿಯನ್ನು ನವೀಕರಿಸಬೇಕಾಗುತ್ತದೆ. ಬೈಲಾದಲ್ಲಿಯೇ ಸ್ಪಷ್ಟಪಡಿಸಿರುವಂತೆ, ಈ ಮಾದರಿಯ ಸಂಘಟನೆ ನಿರ್ದಿಷ್ಟ, ನಿಗದಿಗೊಳಿಸಲಾದ ವ್ಯಾಪ್ತಿಯನ್ನು ಹೊಂದಿರುತ್ತದೆ. ವ್ಯಾಜ್ಯ ತಗಾದೆಗಳ ಸಂದರ್ಭದಲ್ಲಿ ನ್ಯಾಯಾಲಯವನ್ನು ಆಡಳಿತ ಮಂಡಳಿ ಅಥವಾ ಸದಸ್ಯ ವರ್ಗ ಆಶ್ರಯಿಸಬಹುದು. ಅತ್ಯಂತ ಮುಖ್ಯ ಅಂಶವೆಂದರೆ, ಇವುಗಳ ಮೇಲೆ ಸರ್ಕಾರದ ಇಲಾಖೆಗಳ ಹತೋಟಿ ಇದೆ. ಅಪರಾತಪರ ನಡೆಸಿದ ಸಂದರ್ಭದಲ್ಲಿ ನೇರವಾಗಿ ಇಲಾಖೆ ಮೂಲಕ ಸರ್ಕಾರ ಸಂಸ್ಥೆಯ ಆಡಳಿತವನ್ನು ತನ್ನ ಕೈಗೆ ತೆಗೆದುಕೊಳ್ಳಬಹುದು. ನಾಣ್ಯದ ಇನ್ನೊಂದು ಮುಖವಾಗಿ, ಸರ್ಕಾರಿ ಯೋಜನೆ, ಸಹಾಯಧನಕ್ಕೆ ಸೊಸೈಟಿ ಕಾಯ್ದೆಯಡಿ ನೋಂದಾವಣೆಯಾದವಕ್ಕೆ ಹೆಚ್ಚು ಆದ್ಯತೆಯೂ ಕೊಡಲ್ಪಡುತ್ತದೆ.

ಏಕೈಕ ಪ್ರವರ್ತಕನಿಂದ ಸಂಸ್ಥೆ!
ಈ ಹೋಲಿಕೆಯಲ್ಲಿ ಸಂಪೂರ್ಣ ಭಿನ್ನವಾದದ್ದು, ಭಾರತೀಯ ವಿಶ್ವಸ್ಥ ಕಾಯ್ದೆಯಡಿ ನೋಂದಾವಣೆಗೊಳ್ಳುವ ಟ್ರಸ್ಟ್‌/ ದತ್ತಿ ಸಂಸ್ಥೆಯದ್ದು. ಇಂತಹ ಸಂಸ್ಥೆಯನ್ನು ಹುಟ್ಟುಹಾಕಲು ಏಕೈಕ ಪ್ರವರ್ತಕ ಇದ್ದರೆ ಸಾಕು. ಇಲ್ಲಿ ಪ್ರವರ್ತಕ ಎಂಬುದನ್ನೂ ವ್ಯಾಖ್ಯಾನಿಸಬೇಕಾಗಬಹುದು. ಒಂದು ಸಂಘ ಸಂಸ್ಥೆಯ ನೋಂದಾವಣೆಗೆ ಮುನ್ನ ಹಲವು  ಕಾರ್ಯಚಟುವಟಿಕೆಗಳನ್ನು ಮಾಡಬೇಕಾಗುತ್ತದೆ. ಹೆಸರು, ಉದ್ದೇಶ, ವ್ಯಾಪ್ತಿಯಿಂದ ಆರಂಭಿಸಿ ಸಂಘಟನೆಯೊಂದರ ಹರವನ್ನು ರೂಪಿಸುವುದು ದೊಡ್ಡ ಕೆಲಸ. ಇದನ್ನು ಮಾಡುವವರನ್ನೇ ಪ್ರವರ್ತಕರು ಎನ್ನುತ್ತಾರೆ. ಪ್ರವರ್ತಕರು ಸಂಸ್ಥೆಯ ನೋಂದಾವಣೆಯ ನಂತರ ಅಧಿಕೃತವಾಗಿ ಸಂಸ್ಥೆಯ ಆಡಳಿತ ಮಂಡಳಿಯ ಭಾಗವಾಗಬಹುದು ಅಥವಾ ಹುಟ್ಟುಹಾಕಿದ ನಂತರ ತಾವು ಹಿನ್ನೆಲೆಗೂ ಸರಿಯಬಹುದು.

ಟ್ರಸ್ಟ್‌ ಆಗುವುದರ ಹಿನ್ನೆಲೆಯಲ್ಲಿ ಗಿಟ್ಟುವ ಹಲವು ಅನುಕೂಲಗಳನ್ನು ಪಟ್ಟಿ ಮಾಡಬಹುದು. ಇಂತಹ ಸಂಸ್ಥೆಯ ನೋಂದಣಿಯನ್ನು ತಾಲ್ಲೂಕು ಉಪನೋಂದಣಾಧಿಕಾರಿಗಳ ಸಮಕ್ಷಮದಲ್ಲಿಯೇ ನೆರವೇರಿಸಬಹುದು. ಇದರ ನೋಂದಣಿ ಪ್ರಕ್ರಿಯೆ ಬಹುಪಾಲು ಸುಲಭವೂ ಹೌದು. ಗಮನಿಸಬೇಕಾದುದೆಂದರೆ, ಇಲ್ಲಿ ಸದಸ್ಸತ್ವ ಅರ್ಜಿ ಹಾಕಿ ಪಡೆಯುವುದಲ್ಲ. ನಾನು ಅರ್ಜಿ ಹಾಕಿದ್ದು, ಏಕೆ ತಿರಸ್ಕರಿಸಿದಿರಿ ಎಂದು ಗಟ್ಟಿಸಿ ಕೇಳುವಂತೆಯೂ ಇಲ್ಲ. ಇಂತಹ ವ್ಯವಸ್ಥೆಯಡಿ ಆಹ್ವಾನದ ಆಧಾರದ ಮೇಲೆ ಸದಸ್ಯತ್ವ ಕೊಡಲಾಗುತ್ತದೆ. 

ದತ್ತಿ ವ್ಯವಸ್ಥೆಯಡಿ ಚುನಾವಣೆಗಳಿಲ್ಲ. ಇಲ್ಲಿ ನಿರ್ದೇಶಕರನ್ನು ಆಯ್ಕೆ ವಿಧಾನದ ಮೂಲಕ ಒಳಸೇರಿಸಿಕೊಳ್ಳಲಾಗುತ್ತದೆ. ವ್ಯಾಜ್ಯ ತಗಾದೆಗಳ ಸಂದರ್ಭದಲ್ಲಿ ಪಂಚಾಯಿತಿ ನಡೆಸಿ ತೀರ್ಮಾನಿಸಬೇಕಾಗುತ್ತದೆ. ಇದರಿಂದ ಆಂತರಿಕ ವಿಚಾರಗಳಿಗೆ ಕೋರ್ಟ್‌ ಮೆಟ್ಟಿಲು ಹತ್ತುವುದು ಶಿಫಾರಸಾದ ತಂತ್ರವಲ್ಲ. ಸರ್ಕಾರಿ ಇಲಾಖೆಗಳ ನಿಯಂತ್ರಣ ಇಲ್ಲದಿರುವುದರಿಂದ ಆಡಳಿತ ಮಂಡಳಿ ಹೆಚ್ಚು ಪರಿಣಾಮಕಾರಿಯಾದ ನಿರ್ಧಾರಗಳನ್ನು ತೆಗೆದುಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬಹುದು. ಆಯ್ಕೆ ನಿಮ್ಮದು!

-ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next