Advertisement

ನಾಲ್ಕು ಗಂಟೆ ಅವಧಿಯಲ್ಲಿ ನಾಲ್ಕು ಕಡೆ ಸರಗಳವು

01:16 AM Jul 03, 2019 | Team Udayavani |

ಬೆಂಗಳೂರು: ನಗರದಲ್ಲಿ ಮತ್ತೆ ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ಸೋಮವಾರ ಒಂದೇ ದಿನ ಕೇವಲ ನಾಲ್ಕು ಗಂಟೆಗಳ ಅಂತರದಲ್ಲಿ ನಾಲ್ಕು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ದ್ವಿಚಕ್ರದಲ್ಲಿ ಬಂದ ದುಷ್ಕರ್ಮಿಗಳು ನಾಲ್ವರು ಮಹಿಳೆಯರ ಸರ ಕಳವು ಮಾಡಿ ಪರಾರಿಯಾಗಿದ್ದಾರೆ.

Advertisement

ಅಪರಾಹ್ನ 12.30ರಿಂದ ಸಂಜೆ 3.30ರ ಅವಧಿಯಲ್ಲಿ ವೈಯಾಲಿಕಾವಲ್‌, ಮಲ್ಲೇಶ್ವರ,
ವಿಜಯನಗರ ಮತ್ತು ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದೆ. ಒಂದೇ ಗ್ಯಾಂಗ್‌ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ನಗರ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಮಂಗಳವಾರ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಸರಗಳ್ಳರ ಪತ್ತೆಗೆ ವಿಶೇಷ ತಂಡ ರಚಿಸಿ ಕಾನೂನು ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ.

ವೈಯಾಲಿಕಾವಲ್‌ ವ್ಯಾಪ್ತಿ: ವೈಯಾಲಿಕಾವಲ್‌ ಠಾಣಾ ವ್ಯಾಪ್ತಿಯಲ್ಲಿ ಮಲ್ಲೇಶ್ವರದ ಈಜುಕೋಳ ಬಡಾವಣೆಯ 12ನೇ ಅಡ್ಡ ರಸ್ತೆಯ ನಿವಾಸಿ ಯಶೋಧ(63) ಮಧ್ಯಾಹ್ನ 12.30ರ ಸುಮಾರಿಗೆ ಮನೆ ಬಳಿಯ ಅಂಗಡಿಗೆ ಹೋಗಿ ವಾಪಸ್‌ ಬರುತ್ತಿದ್ದರು. ಈ ವೇಳೆ ಮುಂಭಾಗದಿಂದ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಯಶೋಧ ಅವರ 30 ಗ್ರಾಂ ತೂಕದ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದಾರೆ. ಚೋರರ ಕೃತ್ಯ ಸ್ಥಳೀಯ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ್ದು, ಆರೋಪಿಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಸದ್ಯದಲ್ಲೇ ಬಂಧಿಸಲಾಗುವುದು ಎಂದು ಪ್ರಕರಣ ದಾಖಲಿಸಿಕೊಂಡಿರುವ ವೈಯಾಲಿಕಾವಲ್‌ ಪೊಲೀಸರು ತಿಳಿಸಿದರು. ಕೆಲ ಹೊತ್ತಿನ ಬಳಿಕ ಅದೇ ಬೈಕ್‌ನಲ್ಲಿ ಬಂದ ಆರೋಪಿಗಳು ವೈಯಾಲಿಕಾವಲ್‌ನ ಒಂದನೇ ರಸ್ತೆಯ ನಿವಾಸಿ ಮಧುಮತಿ ಅವರು ಮಲ್ಲೇಶ್ವರದ 18ನೇ ಅಡ್ಡ ರಸ್ತೆಯಲ್ಲಿರುವ ಬೆಂಗಳೂರು ಒನ್‌ ಕೇಂದ್ರದಲ್ಲಿ ಕಂದಾಯ ಪಾವತಿಸಿ ಮನೆಗೆ ಹೋಗುವಾಗ 50 ಗ್ರಾಂ ತೂಕದ ಸರ ಕಳವು ಮಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯನಗರದಲ್ಲಿ ಕಳವು: ಅನಂತರ ಮಧ್ಯಾಹ್ನ 1.30ರ ಸುಮಾರಿಗೆ ವಿಜಯನಗರದ ಆರ್‌ಪಿಸಿ ಲೇಔಟ್‌ ಬಳಿ ಸರ ಅಪಹರಣ ನಡೆದಿದೆ. ಮನೆ ಸಮೀಪದ ಗಣಪತಿ ದೇವಾಲಯಕ್ಕೆ ಹೋಗಿದ್ದ ಜಗದಾಂಬಾ ಎಂಬ ಮಹಿಳೆಯ ಎರಡು ಲಕ್ಷ ರೂ. ಮೌಲ್ಯದ 80 ಗ್ರಾಂ ತೂಕದ ಸರ ಕಳವು ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಮಧ್ಯಾಹ್ನ 3.30ರ ಸುಮಾರಿಗೆ ಪರಪ್ಪನ ಅಗ್ರಹಾರದ ಸಿಂಗಸಂದ್ರದ ಬಳಿ ಬಂದಿರುವ ದುಷ್ಕರ್ಮಿಗಳು ನಡೆದುಕೊಂಡು ಹೋಗುತ್ತಿದ್ದ ಚಂದ್ರಮ್ಮ(55) ಅವರ 40 ಗ್ರಾಂ ತೂಕದ ಮಾಂಗಲ್ಯ ಸರ ಕಳವು ಮಾಡಿ ಪರಾರಿಯಾಗಿದ್ದಾರೆ. ಚಂದ್ರಮ್ಮ ಸಿಂಗಸಂದ್ರದ ಸಂಬಂಧಿಕರ ಮನೆಗೆ ನೆಡದುಕೊಂಡು ಹೋಗುವಾಗ ದುರ್ಘ‌ಟನೆ ನಡೆದಿದೆ ಎಂದು ಪರಪ್ಪನ ಅಗ್ರಹಾರ ಪೊಲೀಸರು ಹೇಳಿದರು.

ದೃಶ್ಯಗಳು ಸೆರೆ: ಆರೋಪಿಗಳು ಬಳಸಿರುವ ದ್ವಿಚಕ್ರ ವಾಹನದ ದೃಶ್ಯಗಳು ಸ್ಥಳೀಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಒಂದೇ ದ್ವಿಚಕ್ರ ವಾಹನ ಬಳಿಸಿರುವುದು ಗೊತ್ತಾಗಿದೆ. ಕೃತ್ಯ ಎಸಗಿರುವಆರೋಪಿಗಳು ಕೊನೆಯದಾಗಿ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಎಸಗಿ ಹೊಸೂರು ಮಾರ್ಗವಾಗಿ ರಾಜ್ಯ ತೊರೆದಿರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next