Advertisement

ಮತ್ತೆ ನಾಲ್ವರು ಶಂಕಿತರು ಆಸ್ಪತ್ರೆಗೆ ದಾಖಲು

01:01 PM Mar 30, 2020 | Suhan S |

ರಾಯಚೂರು: ಜಿಲ್ಲೆಯಲ್ಲಿ ಈವರೆಗೆ ಯಾವುದೇ ಪಾಸಿಟಿವ್‌ ಪ್ರಕರಣ ದಾಖಲಾಗದಿದ್ದರೂ, ರವಿವಾರ ನಾಲ್ವರು ಶಂಕಿತರು ಆಸ್ಪತ್ರೆಗೆ ದಾಖಲಾಗಿರುವುದು ಜನರಲ್ಲಿ ಮತ್ತೆ ಆತಂಕ ಮೂಡಿಸಿದೆ.

Advertisement

ಈವರೆಗೂ ವಿದೇಶಗಳಿಂದ ಒಟ್ಟು 171 ಮಂದಿ ಹಿಂತಿರುಗಿದ್ದಾರೆ. ಅದರಲ್ಲಿ ಏಳು ಜನರ ಗಂಟಲಿನ ದ್ರವ್ಯ ಹಾಗೂ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಲ್ಯಾಬ್‌ಗ ಕಳುಹಿಸಲಾಗಿತ್ತು. ಐದು ವರದಿಗಳು ನೆಗೆಟಿವ್‌ ಆಗಿದ್ದು, ರೋಗ ಲಕ್ಷಣಗಳು ಇಲ್ಲದ ಕಾರಣ ಎರಡು ತಿರಸ್ಕೃತಗೊಂಡಿದೆ. ಆದರೆ, ರವಿವಾರ ನಾಲ್ವರು ಶಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದೇಶದಿಂದ ಬಂದವರು, ಶಂಕಿತರು ಸೇರಿ ಅವರ ಕುಟುಂಬದ 715 ಜನರು ಹೋಮ್‌ ಕ್ವಾರಂಟೈನ್‌ನಲ್ಲಿಟ್ಟಿದ್ದು, ಜಿಲ್ಲೆಯಿಂದ ಇದೂವರೆಗೆ ಕಳುಹಿಸಲಾದ ವರದಿಗಳಲ್ಲಿ ಯಾವುದೇ ಪಾಸಿಟಿವ್‌ ಪ್ರಕರಣ ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶ ಕುಮಾರ ತಿಳಿಸಿದ್ದಾರೆ.

ಎರಡು ದಿನಗಳಿಂದ ಪೊಲೀಸರು ಲಾಠಿ ಪ್ರಹಾರ ನಡೆಸದ ಕಾರಣ ಜನ ಸಂಚಾರ ಹೆಚ್ಚಾಗಿತ್ತು. ಆದರೆ, ಪರಿಸ್ಥಿತಿ ಹೀಗೆ ಮುಂದುವರಿದರೆ ಸಮಸ್ಯೆಯಾಗಲಿದೆ ಎಂದರಿತ ಪೊಲೀಸರು ರವಿವಾರ ಪುನಃ ಲಾಠಿ ಕೈಗೆತ್ತಿಕೊಂಡಿದ್ದು, ಸವಾರರ ಮೇಲೆ ಪ್ರಹಾರ ನಡೆಸಿದ್ದು, ಕಂಡು ಬಂತು. ಅದರ ಜತೆಗೆ ರವಿವಾರವಾಗಿದ್ದ ಕಾರಣ ನಗರ ಸಂಪೂರ್ಣ ಸ್ತಬ್ಧವಾಗಿತ್ತು.

ಇನ್ನೂ ಬೆಂಗಳೂರು ಸೇರಿದಂತೆ ವಿವಿಧೆಡೆ ಗುಳೆ ಹೋಗಿದ್ದ ಜನರ ನೆರವಿಗೆ ಧಾವಿಸುವಂತೆ ಡಿಸಿ ಮನವಿ ಮಾಡಿದ್ದು, ಈಗಾಗಲೇ ಸಾಕಷ್ಟು ಊಟೋಪಹಾರ, ದವಸ ಧಾನ್ಯಗಳನ್ನು ನೀಡುತ್ತಿದ್ದಾರೆ. ರವಿವಾರ ಕೂಡ ಉದ್ಯಮಿ ಕೇಶವರೆಡ್ಡಿ, ನೀಲೊಗಲ್‌ ಮಠದ ಬಾಲಯೋಗಿ ರೇಣುಕಾ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಅವರಿಂದ ಕರ್ತವ್ಯ ನಿರತ ಪೊಲೀಸರು, ವೈದ್ಯರು, ನಿರ್ಗತಿಕರಿಗೆ ಊಟ, ನೀರಿನ ಬಾಟಲಿಗಳನ್ನು ವಿತರಿಸಿದರು.

Advertisement

ನಗರ ಸೇರಿದಂತೆ ಜಿಲ್ಲೆಯಲ್ಲಿರುವ ಎಲ್ಲ ಮಸೀದಿಗಳಲ್ಲಿ ಧ್ವನಿವರ್ಧಕ ಮೂಲಕ ತ್ರಿಭಾಷೆಯಲ್ಲಿ ನಿತ್ಯ ನಾಲ್ಕು ಬಾರಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ರಾಜ್ಯ ವಕ್ಫ್  ಮಂಡಳಿಯು ಆದೇಶ ಹೊರಡಿಸಿದೆ.

ಸಾಮಾಜಿಕ ಅಂತರ ಮರೆ: ಅಗತ್ಯ ವಸ್ತುಗಳ ಖರೀದಿಗೆ ಅನುವು ಮಾಡಿಕೊಟ್ಟಿರುವ ಜಿಲ್ಲಾಡಳಿತ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದೆ. ಆದರೆ, ಅದು ಎಲ್ಲಿಯೂ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ಜನ ಗುಂಪು ಗುಂಪಾಗಿ ಓಡಾಡುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ಗುರುತುಗಳನ್ನು ಮಾಡಿದರೂ ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ.

ವಾಹನಗಳಿಗೆ ಇಂಧನದ ಮಿತಿ: ಕೋವಿಡ್ 19 ಹರಡದಂತೆ ತಡೆಯುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಪೆಟ್ರೋಲ್‌ ಪಂಪ್‌ಗ್ಳಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಪೆಟ್ರೋಲ್‌ ಹಾಕಲು ನಿರ್ಧರಿಸಲಾಗಿದೆ. ಒಂದು ಪೆಟ್ರೋಲ್‌ ವಾಹನಕ್ಕೆ 200 ರೂ. ವರೆಗೆ ಪೆಟ್ರೋಲ್‌ ಮತ್ತು 500 ರೂ. ಡೀಸೆಲ್‌ ಮಾತ್ರ ವಿತರಿಸಲಾಗುವುದು. ಯಾವುದೇ ಕಾರಣಕ್ಕೂ ಬಾಟಲ್‌ ಗಳ ಮೂಲಕ ಇಂಧನ ತುಂಬಿಸಿ ಕೊಡುವುದಿಲ್ಲ. ಡಿಜಿಟಲ್‌, ಆನ್‌ಲೈನ್‌ ಮೂಲಕವೇ ವ್ಯವಹಾರ ಮಾಡುವಂತೆ ಡಿಸಿ ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next