ಕಲಬುರಗಿ: ಜಿಲ್ಲೆಯಲ್ಲಿ ಸರ್ಕಾರದ ವಿದ್ಯಾಗಮ ಯೋಜನೆಯಡಿ ಕಲಿಕೆಯಲ್ಲಿ ತೊಡಗಿದ್ದ ನಾಲ್ವರು ಶಾಲಾ ಮಕ್ಕಳಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ಶಿಕ್ಷಕರ ವಲಯ ಮತ್ತು ಮಕ್ಕಳ ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ವಿದ್ಯಾಗಮ ಯೋಜನೆಯಡಿ ವಠಾರ ಶಾಲೆಗಳನ್ನು ನಡೆಸಲಾಗುತ್ತಿದೆ. ಬಹುದೊಡ್ಡ ಶಾಲೆ ಇದಾಗಿದ್ದು, ಸುಮಾರು 865 ಮಕ್ಕಳ ದಾಖಲಾತಿ ಇದೆ. ಇದರಲ್ಲಿ ವಿದ್ಯಾಗಮ ಯೋಜನೆಯಡಿ ವಠಾರ ಶಾಲೆಗಳಿಗೆ ಬರುತ್ತಿದ್ದ 203 ಜನ ಮಕ್ಕಳನ್ನು ರ್ಯಾಂಡಮ್ ಆಗಿ ಕೋವಿಡ್ ತಪಾಸಣೆಗೆ ಒಳಪಡಿಸಿದಾಗ ನಾಲ್ವರು ಮಕ್ಕಳಿಗೆ ಪಾಸಿಟಿವ್ ಕಂಡು ಬಂದಿದೆ.
ಯಾವುದೇ ಶಿಕ್ಷಕರಿಗೆ ಕೋವಿಡ್ ಸೋಂಕು ಪತ್ತೆಯಾಗಿಲ್ಲ. ಸೋಂಕು ಕಂಡ ಬಂದಿರುವ ನಾಲ್ವರು ಮಕ್ಕಳನ್ನು ಹೋಂ ಐಸೋಲೇಷನ್ ಮಾಡಲಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಪಿ.ಬಾಡಂಗಿ ಖಚಿತ ಪಡಿಸಿದರು.
ಇದನ್ನೂ ಓದಿ:ಮಂಗಳೂರು: ಹೆಬ್ಬಾವು ಕಚ್ಚಿದರೂ ಅಳುಕದೆ ಅದರ ತಲೆಮೇಲೆ ಕಾಲಿಟ್ಟು ಸೆರೆಹಿಡಿದ 10ರ ಪೋರ !
ಜಿಲ್ಲಾದ್ಯಂತ ಕಳೆದ ಎರಡು ತಿಂಗಳಿಂದ ವಿದ್ಯಾಗಮ ಯೋಜನೆಯಡಿ 3,638 ಕಡೆಗಳಲ್ಲಿ ಮಕ್ಕಳಿಗೆ ಬೋಧಿಸಲಾಗುತ್ತಿದೆ. ಪ್ರತಿ ಶಿಕ್ಷಕರಿಗೆ ಇಂತಿಷ್ಟು ಮಕ್ಕಳನ್ನು ಹಂಚಿಕೆ ಮಾಡಿ ಪಾಠ ಮಾಡಲಾಗುತ್ತಿದೆ. ಮಾಶಾಳ ಗ್ರಾಮದ ಕೆಲ ಮಕ್ಕಳಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಇದೇ ಬುಧವಾರ 203 ಮಕ್ಕಳನ್ನು ಕೋವಿಡ್ ಪರೀಕ್ಷೆಗೆ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಒಳ ಪಡಿಸಿದ್ದರು. ಈ ವೇಳೆ ನಾಲ್ವರು ಮಕ್ಕಳಿಗೆ ಕೋವಿಡ್ ಸೋಂಕು ಹರಡಿರುವುದು ಪತ್ತೆಯಾಗಿದೆ ಎಂದು ಅವರು ಹೇಳಿದರು.
ನಾಲ್ವರು ಸೋಂಕಿತ ಮಕ್ಕಳಿಗೆ ಮನೆಯಲ್ಲೇ ಐಸೋಲೇಷನ್ ಮಾಡಲಾಗಿದೆ. ಇನ್ನೂ ಕೆಲವರ ಕೋವಿಡ್ ಪರೀಕ್ಷಾ ವರದಿ ಬಾಕಿ ಇದೆ. ಸದ್ಯಕ್ಕೆ ಗ್ರಾಮದಲ್ಲಿ ವಠಾರ ಶಾಲೆಗಳನ್ನು ಸ್ಥಗಿತಗೊಳಿಸಲಾಗಿದೆ. ಉಳಿದ ಎಲ್ಲ ಮಕ್ಕಳಿಗೂ ಕೋವಿಡ್ ಪರೀಕ್ಷೆ ಮಾಡುವ ಹಿರಿಯ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಡಿಡಿಪಿಐ ತಿಳಿಸಿದರು.