ಮುಂಬೈ: ನಾಲ್ಕು ಮಹಡಿಯ ಕಟ್ಟಡವೊಂದು ಧರೆಗುರುಳಿದ ಪರಿಣಾಮ ಹನ್ನೊಂದು ಮಂದಿ ಸಾವನ್ನಪ್ಪಿದ ಘಟನೆ ಮುಂಬೈನ ಪಶ್ಚಿಮ ಮಲಾಡ್ ನ ಮಾಲ್ವಾನಿ ಪ್ರದೇಶದಲ್ಲಿ ನಡೆದಿದೆ. ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದೊಂದು ನಾಲ್ಕು ಮಹಡಿಯ ವಸತಿ ಕಟ್ಟಡವಾಗಿದ್ದು, ದುರ್ಘಟನೆ ನಡೆದ ಸಂದರ್ಭದಲ್ಲಿ ಮಕ್ಕಳು ಸೇರಿದಂತೆ ಹಲವು ಮಂದಿ ಇಲ್ಲಿದ್ದರು. ಘಟನೆ ನಡೆದ ಕೆಲವೇ ಕ್ಷಣದಲ್ಲಿ ಅಗ್ನಿ ಶಾಮಕ ದಳ ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಒಳಗೆ ಸಿಲುಕಿಕೊಂಡವರನ್ನು ರಕ್ಷಣೆ ಮಾಡಲಾಗಿದೆ.
ಇದರ ಬಳಿಯಿರುವ ಇನ್ನೂ ಮೂರು ಕಟ್ಟಡಗಳು ಆತಂಕದ ಪರಿಸ್ಥಿತಿಯಲ್ಲಿದ್ದು, ಅಲ್ಲಿದ್ದ ಎಲ್ಲರನ್ನೂ ಕೂಡಲೇ ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ ಎಂದು ಬೃಹನ್ ಮುಂಬೈ ನಗರಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ:ಕರೆಂಟ್ ಶಾಕ್! ಪ್ರತೀ ಯೂನಿಟ್‌ಗೆ 30 ಪೈಸೆ ದರ ಹೆಚ್ಚಳ : ಎಪ್ರಿಲ್ ನಿಂದಲೇ ಪೂರ್ವಾನ್ವಯ
ಬುಧವಾರ ನಗರದಲ್ಲಿ ಸುರಿದ ಭಾರಿ ಮಳೆಯ ಕಾರಣದಿಂದ ಈ ಬಹುಮಹಡಿ ಕಟ್ಟಡ ಕುಸಿದಿದೆ ಎಂದು ಮಹಾರಾಷ್ಟ್ರದ ಸಚಿವ ಅಸ್ಲಾಂ ಶೇಖ್ ಹೇಳಿದ್ದಾರೆ. ಮುಂಬೈನಲ್ಲಿ ಬುಧವಾರ ಧಾರಾಕಾರ ಮಳೆಯಾಗಿತ್ತು. ಹಲವು ಪ್ರದೇಶಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿತ್ತು. ಇದರಿಂದ ರಸ್ತೆ ಮತ್ತು ರೈಲು ಸಂಚಾರಕ್ಕೂ ಅಡಚಣೆಯಾಗಿತ್ತು.