Advertisement

Election results ನಾಲ್ಕು ಫ‌ಲಿತಾಂಶ: ಹತ್ತು ಪಾಠ

12:36 AM Dec 04, 2023 | Team Udayavani |

ದೇಶದ ಪ್ರತೀ ಚುನಾವಣೆಯ ಫ‌ಲಿತಾಂಶವೂ ರಾಜಕೀಯ ಚಿತ್ರಣಕ್ಕೆ ಒಂದಲ್ಲ ಒಂದು ಕೈದೀವಿಗೆಯಾಗುತ್ತದೆ. ಈ ಸಲದ ಚುನಾವಣೆ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಹಲವು ಹೊಸ ಹೊಳಹುಗಳನ್ನು ಈ ಫ‌ಲಿತಾಂಶ ಬಿಟ್ಟುಕೊಟ್ಟಿದೆ.

Advertisement

1. ಪ್ರಬಲಗೊಂಡ ಮೋದಿ ವರ್ಚಸ್ಸು : ಪ್ರಧಾನಿ ಮೋದಿ ವರ್ಚಸ್ಸು ಕುಸಿಯುತ್ತಿದೆ ಎಂಬ ವಿಪಕ್ಷ‌Òಗಳ ಅಭಿಪ್ರಾಯದ ನಡುವೆಯೂ ಈ ಬಾರಿಯ ಫ‌ಲಿತಾಂಶವು ಬಿಜೆಪಿಗೆ ಮೋದಿ ಇನ್ನೂ “ಶಕ್ತಿ’ ಎಂಬುದನ್ನು ತೋರಿಸಿಕೊಟ್ಟಿದೆ. ಬಿಜೆಪಿ ಹಿಂದಿನ ಸಲ ಕಳೆದುಕೊಂಡಿದ್ದ ಮೂರು ರಾಜ್ಯಗಳನ್ನು ಮತ್ತೆ ದಕ್ಕಿಸಿಕೊಳ್ಳುವಲ್ಲಿ ಮೋದಿ ಪಾತ್ರ ಪ್ರಮುಖವಾದುದು. ವಿಶೇಷವೆಂದರೆ ಯಾವ ರಾಜ್ಯದಲ್ಲೂ ಯಾರನ್ನೂ ಸಹ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುವ ಗೋಜಿಗೆ ಹೋಗದ ಬಿಜೆಪಿ, ಮೋದಿ ಅವರನ್ನು ಮುಂದಿಟ್ಟುಕೊಂಡೇ ಚುನಾವಣೆ ಎದುರಿಸಿತು. ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆಗೆ ಅವಕಾಶ ಇದ್ದರೂ ಬಿಜೆಪಿ ಅಂಥ ಸಾಹಸಕ್ಕೆ ಕೈ ಹಾಕಲಿಲ್ಲ. ಛತ್ತೀಸ್‌ಗಢದಲ್ಲಿ ಮಾಜಿ ಮುಖ್ಯಮಂತ್ರಿ ರಮಣ್‌ ಸಿಂಗ್‌ ಅವರನ್ನು ಬಿಟ್ಟರೆ ಬೇರೆ ಪ್ರಭಾವಿ ನಾಯಕರು ಇರಲಿಲ್ಲ. ತೆಲಂಗಾಣದಲ್ಲಿ ತನ್ನ ಖಾತೆಯನ್ನು ಮತ್ತಷ್ಟು ಭದ್ರಪಡಿಸಲು ಮೋದಿ ಫ್ಯಾಕ್ಟರ್‌ ಕೆಲಸ ಮಾಡಿದೆ. “ಮೋದಿಯೇ ಗ್ಯಾರಂಟಿ’ ಎಂಬ ಘೋಷವಾಕ್ಯದೊಂದಿಗೆ ಕಣಕ್ಕಿಳಿದ ಬಿಜೆಪಿಯು ಕಾಂಗ್ರೆಸ್‌ನ ಗ್ಯಾರಂಟಿಗಳಿಗೆ ಮೋದಿ ಬ್ರ್ಯಾಂಡ್‌ ಮೂಲಕವೇ ತಿರುಗೇಟು ನೀಡಿದೆ.
2. ದಕ್ಷಿಣ -ಉತ್ತರ ವಿಭಜನೆ: ಕಳೆದ ಒಂದು ಒಂದು ದಶಕದ ಫ‌ಲಿತಾಂಶ ನೋಡಿದರೆ ಉತ್ತರ ಭಾರತದ ಹಿಂದಿ ಭಾಷಿಕ ಪ್ರದೇಶವು ಕಾಂಗ್ರೆಸ್‌ ತೆಕ್ಕೆಯಿಂದ ನಿಧಾನವಾಗಿ ಜಾರುತ್ತಿರುವುದು ಸ್ಪಷ್ಟ. ಅದರಲ್ಲೂ ರಾಜಸ್ಥಾನ ಮತ್ತು ಛತ್ತೀಸ್‌ಗಢವನ್ನೂ ಕಳೆದುಕೊಂಡ ಕಾಂಗ್ರೆಸ್‌ ಹಿಂದಿ ಹಾರ್ಟ್‌ಲ್ಯಾಂಡಿನಲ್ಲಿ ತನ್ನ ಮ್ಯಾಜಿಕ್‌ ಏಕೆ ನಡೆಯುದಿಲ್ಲ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ದಕ್ಷಿಣದ ಕರ್ನಾಟಕದ ಜತೆ ತೆಲಂಗಾಣವನ್ನು ತನ್ನದಾಗಿಸಿಕೊಂಡಿ ರುವ ಕಾಂಗ್ರೆಸ್‌, ದಕ್ಷಿಣಕ್ಕೆ ಮಾತ್ರ ಸೀಮಿತವಾಗುವ ಅಪಾಯ ಇದೆ. ಇನ್ನೊಂದೆಡೆ ಉತ್ತರ ಭಾಗದಲ್ಲಿ ನಡೆಯುವ ಮ್ಯಾಜಿಕ್‌ ದಕ್ಷಿಣದಲ್ಲಿ ಏಕೆ ನಡೆಯುವುದಿಲ್ಲ ಎಂದು ಬಿಜೆಪಿ ಸಹ ತನ್ನನ್ನು ತಾನು ಆತ್ಮಾವಲೋಕನಕ್ಕೆ ಒಳಪಡಿಸಲು ಇದು ಸಕಾಲ. ದಕ್ಷಿಣ ಭಾರತದ ಕರ್ನಾಟಕ ಹೊರತುಪಡಿಸಿ ಉಳಿದ ಕಡೆ ತನ್ನ ಛಾಪು ಬೀರಲು ಸಾಧ್ಯವಾಗದೆ ಇರುವ ಕುರಿತು ಬಿಜೆಪಿ ಚಿಂತಿಸಬೇಕಾಗಿದೆ.
3. ಗ್ಯಾರಂಟಿ ದೇಶವ್ಯಾಪಿ ನಡೆಯದೇ?: ಕರ್ನಾಟಕದಲ್ಲಿ ಗ್ಯಾರಂಟಿ ಭರವಸೆಗಳು ಚುನಾವಣೆಯಲ್ಲಿ ಉತ್ತಮ ಫ‌ಲಿತಾಂಶಕ್ಕೆ ಕಾರಣವಾಯಿತು. ಆದರೆ ಇದು ರಾಷ್ಟ್ರದಾದ್ಯಂತ ಪ್ರಭಾವ ಬೀರಬಲ್ಲುದೇ ಎನ್ನುವುದಕ್ಕೆ ಫ‌ಲಿತಾಂಶ ನಿರಾಶದಾಯಕ ಉತ್ತರವನ್ನು ನೀಡಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ಸಿನ ಆರು ಗ್ಯಾರಂಟಿ ಗಳು ಮತದಾರರನ್ನು ಪ್ರಭಾವಿಸಿತು ಎಂದು ಕಾಂಗ್ರೆಸ್‌ ವ್ಯಾಖ್ಯಾನಿಸುವುದಾದರೆ, ಅದೇ ಗ್ಯಾರಂಟಿಗಳು ಉಳಿದ ಮೂರು ರಾಜ್ಯಗಳಲ್ಲಿ ಏಕೆ ಪ್ರಭಾವ ಬೀರಿಲ್ಲ ಎನ್ನುವ ಜಿಜ್ಞಾಸೆ ಇದೆ. ಹೀಗಾಗಿ, ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆ ಯಲ್ಲಿ ಗ್ಯಾರಂಟಿಗಳು ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತದೆ ಎನ್ನುವುದು ಈಗ ಇನ್ನೊಮ್ಮೆ ನಿಕಷಕ್ಕೆ ಒಳಪಡಬೇಕಾಗುತ್ತದೆ. ಕರ್ನಾಟಕ ಚುನಾವಣ ಫ‌ಲಿತಾಂಶದಿಂದ ಕಂಗೆಟ್ಟಿದ್ದ ಬಿಜೆಪಿ, ಗ್ಯಾರಂಟಿ ಮೇಲೆ ಎಲ್ಲವನ್ನೂ ಹೇರಿ ಸುಮ್ಮನಾಗಿತ್ತು. ಆದರೆ ಈ ಚುನಾವಣೆ ಗಮನಿಸಿದರೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆಲುವಿಗೆ ಕಾರಣ ಗ್ಯಾರಂಟಿ ಮಾತ್ರವಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
4. ಜಾತಿ ಗಣತಿ ಭವಿಷ್ಯ ಏನು?: ಈ ಚುನಾವಣೆಯಲ್ಲಿ ಪ್ರಚಲಿತಕ್ಕೆ ಬಂದ ಇನ್ನೊಂದು ವಿಚಾರ ಎಂದರೆ ಜಾತಿಗಣತಿ. ಆರಂಭದಲ್ಲಿ ಇದನ್ನು ಪ್ರಮುಖ ಅಸ್ತ್ರ ಮಾಡಿಕೊಂಡಿದ್ದ ಕಾಂಗ್ರೆಸ್‌, ನಿಧಾನವಾಗಿ ಅದರಿಂದ ಹಿಂದೆ ಸರಿಯಿತು. ಇತರ ಹಿಂದುಳಿದ ವರ್ಗದ ಮತಗಳನ್ನು (ಒಬಿಸಿ) ತನ್ನ ತೆಕ್ಕೆಯಲ್ಲಿಟ್ಟುಕೊಳ್ಳಲು ಈ ಜಾತಿಗಣತಿ ಅಸ್ತ್ರ ಸಹಾಯವಾಗಬಹುದು ಎನ್ನುವ ಕಾಂಗ್ರೆಸ್‌ ನಂಬಿಕೆ ಇದರಿಂದ ನುಚ್ಚುನೂರಾಗಿದೆ. ಪ್ರಧಾನಿ ಮೋದಿ ಅವರೂ ಹಲವು ಬಾರಿ ತಾನೊಬ್ಬ ಒಬಿಸಿ ಎಂದು ಬಿಂಬಿಸಿಕೊಳ್ಳುವ ಮೂಲಕ ಆ ಮತಗಳು ಎಲ್ಲಿಯೂ ಚದುರಿಹೋಗದಂತೆ ನೋಡಿಕೊಂಡರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಈ ಅಸ್ತ್ರ ಅನುಕೂಲಕ್ಕೆ ಬರುವುದಿಲ್ಲ ಎನ್ನುವುದೂ ಚರ್ಚೆಗೆ ಒಳಪಟ್ಟ ವಿಚಾರ.
5. ಮುಸ್ಲಿಂ ಮತಗಳ ಕ್ರೋಡೀಕರಣ: ಈ ವಿಚಾರದಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದೆ ಎಂದೇ ಹೇಳಬೇಕು. ಇದರ ನೇರ ಫ‌ಲಿತಾಂಶ ತೆಲಂಗಾಣದಲ್ಲಿ ಸ್ಪಷ್ಟಗೊಂಡಿದೆ. ಕರ್ನಾಟಕದಲ್ಲಿ ಹೇಗೆ ಮುಸ್ಲಿಂ ಮತಗಳನ್ನು ಕಾಂಗ್ರೆಸ್‌ ತಾನು ತನ್ನಲ್ಲಿ ಕ್ರೋಡೀಕರಿಸಿಕೊಂಡಿದೆಯೋ, ಅದೇ ರೀತಿ ತೆಲಂಗಾಣದಲ್ಲೂ ನಡೆದಿದೆ. ಅಲ್ಲಿ ಬಿಆರ್‌ಎಸ್‌ ಹಾಗೂ ಓವೈಸಿಯ ಎಐಎಂಐಎಂ ಪಕ್ಷಗಳ ನಡುವೆ ಹಂಚಿಹೋಗಬೇಕಿದ್ದ ಮುಸ್ಲಿಂ ಮತಗಳು ಕೈನತ್ತ ವಾಲಿರುವುದು ಈ ಫ‌ಲಿತಾಂಶ ಬರಲು ಕಾರಣ ಎನ್ನುವುದನ್ನು ವಿಶ್ಲೇಷಕರು ಹೇಳುತ್ತಾರೆ. ಈ ತಂತ್ರವನ್ನು ಕಾಂಗ್ರೆಸ್‌ ಬೇರೆ ಕಡೆ ವಿಸ್ತರಿಸಬೇಕಾದರೆ, ಐಎನ್‌ಡಿಐಎ ಒಕ್ಕೂಟದ ಪುನಶ್ಚೇತನಗೊಳ್ಳಬೇಕಾಗುತ್ತದೆ. ಉತ್ತರ ಭಾರತದ ಹಲವಡೆಯ ನಿರ್ಣಾಯಕ ಮುಸ್ಲಿಂ ಮತಗಳು ಬೇರೆ ಬೇರೆ ಪಕ್ಷಗಳಿಗೆ ಹಂಚಿಹೋಗುತ್ತಿವೆ.
6. ಮಹಿಳಾ ಶಕ್ತಿ ಪರಿಣಾಮ: ಹಾಗೆ ನೋಡಿದರೆ ಈ ಚುನಾವಣೆಯ ಮಹಿಳಾ ಮತದಾರರ ಒಲವನ್ನು ಹೆಚ್ಚು ಬಿಂಬಿಸುತ್ತದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಮಹಿಳಾ ಮೀಸಲಾತಿಗೆ ಸಂಸತ್ತಿನ ಅನುಮೋದನೆ ಪಡೆದ ಕೂಡಲೇ ಚುನಾವಣ ಕಣಕ್ಕಿಳಿದ ಪ್ರಧಾನಿ ಮೋದಿ, ಮಹಿಳಾ ಮತದಾರರನ್ನು ಸೆಳೆಯಲು ಪ್ರಯತ್ನ ಪಟ್ಟರು. ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶೇ.2ಕ್ಕೂ ಹೆಚ್ಚು ಮಹಿಳಾ ಮತದಾರರು ಹೆಚ್ಚು ಮತ ಚಲಾಯಿಸಿದ್ದಾರೆ ಎಂಬ ವರದಿಗಳು ಹಾಗೂ ಈ ಫ‌ಲಿತಾಂಶವನ್ನು ಅಕ್ಕಪಕ್ಕ ಇಟ್ಟು ಸಮೀಕರಿಸಿದರೆ ಹೊಸ ಹೊಳಹು ದೊರೆಯುತ್ತದೆ.
7. ಬುಡಕಟ್ಟು ಜನರ ಒಲವು: ಬಿಜೆಪಿಯ ಗೆಲುವಿಗೆ ಕಾರಣವಾಗುವ ಇನ್ನೊಂದು ಪ್ರಮುಖ ಅಂಶ ಎಂದರೆ, ಬುಡಕಟ್ಟು ಜನಾಂಗದ ಮತಗಳು. ಉತ್ತರದ ಮೂರು ರಾಜ್ಯಗಳಲ್ಲಿಯೂ ಬುಡಕಟ್ಟು ಸಮುದಾಯ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎನ್ನುವುದು ಸು#ಟವಾಗುತ್ತದೆ. ಛತ್ತೀಸ್‌ಗಢದಲ್ಲಿ 18 ಕ್ಷೇತ್ರಗಳು, ಮಧ್ಯಪ್ರದೇಶದಲ್ಲಿ 27 ಹಾಗೂ ರಾಜಾಸ್ಥಾನದ; 11 ಬುಡಕಟ್ಟು ಸೀಟುಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ಬಿಜೆಪಿ ಟ್ರೈಬಲ್‌ ವಿರೋಧಿ ಎಂದು ಕಾಂಗ್ರೆಸ್‌ ಪ್ರತಿಪಾದಿಸಲು ಹಲವು ಬಾರಿ ಪ್ರಯತ್ನಿಸಿದರೂ, ತಾವು ಬುಡಕಟ್ಟು ಸಮುದಾಯದ ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದೇವೆ ಎಂದು ಬಿಜೆಪಿ ಬಿಂಬಿಸಿಕೊಂಡೇ ಬರುತಿತ್ತು.
8. ಹಿಂದುತ್ವದ ಪ್ರಭಾವ: ಉತ್ತರ ಭಾಗದ ಮೂರು ರಾಜ್ಯಗಳನ್ನು ಗೆಲ್ಲಲು ಬಿಜೆಪಿ ಹಿಂದುತ್ವದ ಅಸ್ತ್ರವನ್ನು ಪರಿಣಾಮಕಾರಿಯಾಗಿ ಬಳಸಿದ್ದು ಫ‌ಲ ನೀಡಿದೆ. ಉದಯ ಸ್ಟಾಲಿನ್‌ ಅವರ ಸನಾತನ ಧರ್ಮದ ಕುರಿತ ಹೇಳಿಕೆಯನ್ನು ಸಮರ್ಥವಾಗಿ ಬಳಸಿಕೊಂಡ ಬಿಜೆಪಿ, ಅದನ್ನು ಜನರ ಮನಸ್ಸಿಗೆ ಮುಟ್ಟಿಸಲು ಯಶಸ್ವಿಯಾಯಿತು. ಹಾಗೆಯೇ ಅಯೋಧ್ಯೆ ರಾಮಮಂದಿರದ ಉದ್ಘಾಟನೆ ವಿಚಾರ ಕುರಿತು ಚುನಾವಣೆಯಲ್ಲಿ ಪರಿಣಾಮ ಬೀರಿದೆ. ಒಂದು ಹಂತದಲ್ಲಿ ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಕಾಂಗ್ರೆಸ್‌ ಸಹ ಮೃದು ಹಿಂದುತ್ವದ ಧೋರಣೆಯನ್ನು ತಳೆಯಬೇಕಾಯಿತು.
9. ಭಿನ್ನಮತ ಮತ್ತು ಒಗ್ಗಟ್ಟು: ಕಾಂಗ್ರೆಸ್‌ ಮತ್ತು ಬಿಜೆಪಿ ಈ ಎರಡೂ ಪಕ್ಷಗಳಲ್ಲೂ ಭಿನ್ನಮತ, ಅಸಮಾಧಾನ ನಾಯಕರ ಒಳಜಗಳ ಇದ್ದುದು ಸುಳ್ಳೇನಲ್ಲ. ಆದರೆ ಅದೆಲ್ಲವನ್ನೂ ಮೀರಿ ಸರಿಪಡಿಸಿಕೊಂಡವರು ಗೆದ್ದಿದ್ದಾರೆ. ರಾಜಸ್ಥಾನದಲ್ಲಿ ಚುನಾವಣೆ ಸಮೀಪಿ ಸುತ್ತಿರುವಾಗ ಅಶೋಕ್‌ ಗೆಹೊÉàಟ್‌ ಮತ್ತು ಸಚಿನ್‌ ಪೈಲಟ್‌ ನಡುವಿನ ತಿಕ್ಕಾಟವನ್ನು ಮುಚ್ಚಿ ಹಾಕಲು ಕಾಂಗ್ರೆಸ್‌ ಪ್ರಯತ್ನಿಸಿತಾದರೂ, ಆ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿದೆ ಎಂದು ಹೇಳಲಾಗದು.
10. ಸ್ಥಳೀಯ ನಾಯಕತ್ವದ ವರ್ಚಸ್ಸು: ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದು ದುಬಾರಿಯಾದ ನಿದರ್ಶನದ ಬೆನ್ನಲ್ಲೇ ಬಿಜೆಪಿ ಉಳಿದ ರಾಜ್ಯಗಳಲ್ಲಿ ಈ ಬಗ್ಗೆ ಎಚ್ಚರಿಕೆ ವಹಿಸಿತ್ತು. ಮಧ್ಯಪ್ರದೇಶದಲ್ಲಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಹಾಗೂ ರಾಜಸ್ಥಾನದಲ್ಲಿ ವಸುಂಧರಾ ರಾಜೇ ಅವರನ್ನು ಆರಂಭದಲ್ಲಿ ಬಿಜೆಪಿ ಕಡೆಗಣಿಸಿತಾದರೂ, ಇದೂ ದುಬಾರಿಯಾಗಬಹುದು ಎಂದ ಆತಂಕದಲ್ಲಿ ಅವರಿಬ್ಬರನ್ನು ಮುನ್ನೆಲೆಗೆ ತಂದಿದ್ದು ಫ‌ಲ ನೀಡಿತು. ಸ್ಥಳೀಯ ನಾಯಕತ್ವದ ನಿರ್ವಹಣೆ ಎಲ್ಲ ಪಕ್ಷಗಳಿಗೂ ಇದೊಂದು ಪಾಠವಾಗಿ ಪರಿಣಮಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next