ಭೋಪಾಲ್ : ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಅವಮಾನಿಸಿ ಅವರನ್ನು ಸರಿದಾರಿಗೆ ತರುವ ಪ್ರಯತ್ನದ ಅಂಗವಾಗಿ ಭೋಪಾಲ್ ಪೊಲೀಸರು. ಇಪ್ಪತ್ತರ ಹರೆಯದ ಹುಡುಗಿಯ ಮೇಲೆ ಗ್ಯಾಂಗ್ ರೇಪ್ ನಡೆಸಿದ ನಾಲ್ವರು ಅತ್ಯಾಚಾರಿಗಳನ್ನು ನಿನ್ನೆ ಭಾನುವಾರ ನಗರದ ಜನದಟ್ಟನೆಯ ಬೀದಿಗಳಲ್ಲಿ ಮೆರವಣಿಗೆ ಮಾಡಿಸಿದರು. ಅತ್ಯಾಚಾರಿಗಳನ್ನು ಕಾಣುತ್ತಲೇ ಕ್ರೋಧಿತರಾದ ಕೆಲವು ಮಹಿಳೆಯರು ಒಡನೆಯೇ ತನ್ನ ಕಾಲಲ್ಲಿದ್ದ ಚಪ್ಪಲಿಯನ್ನು ಕೈಗೆತ್ತಿಕೊಂಡು ಮನಸೋ ಇಚ್ಛೆ ಬಾರಿಸಿ ತೃಪ್ತಿ ಪಟ್ಟರು.
ಗ್ಯಾಂಗ್ ರೇಪ್ ಗೆ ಗುರಿಯಾಗಿದ್ದ 20ರ ಹರೆಯದ ಕಾಲೇಜು ವಿದ್ಯಾರ್ಥಿನಿ ನಿನ್ನೆ ಭಾನುವಾರ ಬೆಳಗ್ಗೆ ಮಹಾರಾಣಾ ಪ್ರತಾಪ್ (ಎಂಪಿ) ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ಆರೋಪಿಗಳಲ್ಲಿ ಒಬ್ಬನಾದ ಹಾಗೂ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಯಾಗಿರುವ 21ರ ಹರೆಯದ ಶೈಲೇಂದ್ರ ಡಾಂಗಿ ಎಂಬಾತನು ವಿದ್ಯಾರ್ಥಿನಿಯನ್ನು ಎಂಪಿ ನಗರ ಪ್ರದೇಶದಲ್ಲಿನ ರೆಸ್ಟೋರೆಂಟ್‌ಗೆ ಬರುವಂತೆ ಶನಿವಾರ ಹೇಳಿದ್ದ.
ಆ ಪ್ರಕಾರ ಅಲ್ಲಿಗೆ ಬಂದ ವಿದ್ಯಾರ್ಥಿನಿಯ ಜತೆಗೆ ಜಗಳ ತೆಗೆದ ಶೈಲೇಂದ್ರ, ಆಕೆಯ ಮೊಬೈಲ್ ಕಸಿದುಕೊಂಡ. ಬಳಿಕೆ ಆತ ಆಕೆಯನ್ನು ತನ್ನ ಸ್ನೇಹಿತ ಸೋನು ಡಾಂಗಿ (21) ಎಂಬಾತನ, ಅಪ್ಸರಾ ಸಿನೇಮಾಗೆ ಸಮೀಪದ, ಕೋಣೆಗೆ ಕರೆದೊಯದ್ದ. ಕೋಣೆಯಲ್ಲಿ ಅದಾಗಲೇ ಸೋನುವಿನ ಇನ್ನಿಬ್ಬರು ಸ್ನೇಹಿತರಾದ ಧೀರಜ್ ರಜಪೂತ್ (26) ಮತ್ತು ಚಿಮನ್ ರಜಪೂತ್ (25) ಇದ್ದರು.
ಆಗ ಶೈಲೇಂದ್ರ ಮತ್ತು ಧೀರಜ್ ವಿದ್ಯಾರ್ಥಿನಿಯ ಮೇಲೆ ರೇಪ್ ನಡೆಸಿದರು. ಸೋನು ಮತ್ತು ಚಿಮನ್ ಆ ಕೃತ್ಯಕ್ಕೆ ನೆರವಾದರು. ಬಳಿಕ ವಿದ್ಯಾರ್ಥಿನಿಯನ್ನು ಹೋಗಲು ಬಿಟ್ಟ ಅವರು, “ಈ ವಿಷಯವನ್ನು ಯಾರಲ್ಲಾದರೂ ಬಾಯಿ ಬಿಟ್ಟರೆ ಜೋಕೆ; ನಿನ್ನ ಮತ್ತು ನಿನ್ನ ಮನೆಯವರನ್ನು ಕೊಂದು ಬಿಡುತ್ತೇವೆ’ ಎಂದು ಬೆದರಿಕೆ ಹಾಕಿದರು.
ಆದರೂ ಹುಡುಗಿ ಧೈರ್ಯದಿಂದ ನಿನ್ನೆ ಭಾನುವಾರ ಪೊಲೀಸರಿಗೆ ದೂರು ನೀಡಿದಳು. ಪೊಲೀಸರು ಎಲ್ಲ ನಾಲ್ಕು ಆರೋಪಿಗಳನ್ನು ಬಂಧಿಸಿ ಪ್ರಶ್ನಿಸಿದಾಗ ಅವರು ತಮ್ಮ ಕೃತ್ಯವನ್ನು ಒಪ್ಪಿಕೊಂಡರು.
ರೇಪಿಸ್ಟ್‌ಗಳನ್ನು ಯಾಕೆ ಸಾರ್ವಜನಿಕವಾಗಿ ಮೆರವಣಿಗೆ ಮಾಡುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಭೋಪಾಲ್ ಐಜಿಪಿ ಜೈದೀಪ್ ಕುಮಾರ್ ಅವರು, “ಹೀಗೆ ಮಾಡುವ ಮೂಲಕ ಮಹಿಳೆಯರಲ್ಲಿ ದೈರ್ಯ ತುಂಬಲು ಸಾಧ್ಯವಾಗುತ್ತದೆ. ಇಂತಹ ಪ್ರಕರಣಗಳ ಬಗ್ಗೆ ಅವರು ಧೈರ್ಯದಿಂದ ಮುಂದೆ ಬಂದು ಪೊಲೀಸರಿಗೆ ದೂರು ಕೊಡಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.