Advertisement

ನಿಜವಾಯಿತು ಯಡಿಯೂರಪ್ಪರ ನಾಲ್ಕು ಭವಿಷ್ಯವಾಣಿ!

11:59 PM Jul 26, 2019 | Sriram |

ಬೆಂಗಳೂರು: ‘ರಾಜ್ಯದಲ್ಲಿ ಬಿಜೆಪಿ 22ಕ್ಕೂ ಹೆಚ್ಚು ಲೋಕಸಭಾ ಸ್ಥಾನ ಗೆಲ್ಲಲಿದೆ. ಲೋಕಸಭಾ ಚುನಾವಣೆ ಫ‌ಲಿತಾಂಶದ ಬಳಿಕ ಮೈತ್ರಿ ಸರಕಾರ ಪತನವಾಗಲಿದೆ. ವಿಧಾನಮಂಡಲ ಅಧಿವೇಶನ ನಡೆಯುವುದೇ? ಎಂದು ಕಾದು ನೋಡೋಣ. ಬಿಜೆಪಿ ಸರಕಾರ ರಚನೆಯಾಗಲಿದೆ…’

Advertisement

ಕಳೆದ ನಾಲ್ಕು ತಿಂಗಳುಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ನುಡಿದ ನಾಲ್ಕು ಭವಿಷ್ಯವಾಣಿಗಳು ನಿಜವಾಗಿದ್ದು, ಅಂದುಕೊಂಡಂತೆಯೇ ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ವಿಶೇಷ.

ವಿಧಾನಸಭೆಯಲ್ಲಿ 104 ಶಾಸಕ ಬಲವಿದ್ದರೂ ಬಿಜೆಪಿಗೆ ವಿಶ್ವಾಸ ಮತ ಸಾಬೀತುಪಡಿಸಿ ಸರಕಾರ ರಚಿಸಲು ಸಾಧ್ಯವಾಗಿರಲಿಲ್ಲ. ಹಾಗಿದ್ದರೂ ಬದಲಾದ ಸನ್ನಿವೇಶದಲ್ಲಿ ಸರಕಾರ ರಚನೆ ಅವಕಾಶ ಸಿಕ್ಕರೆ ಬಳಸಿಕೊಳ್ಳುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಲೇ ಬಂದಿತ್ತು. ಮೈತ್ರಿ ಸರಕಾರ ಅಸ್ಥಿರಗೊಳಿಸಲು ಆರು ಬಾರಿ ನಡೆಸಿದ ಪ್ರಯತ್ನ ಕೈಗೂಡದಿದ್ದರೂ ಏಳನೇ ಪ್ರಯತ್ನ ಫ‌ಲ ನೀಡಿದಂತಿದ್ದು, ಮುಖ್ಯಮಂತ್ರಿಯಾಗುವ ಯಡಿಯೂರಪ್ಪ ಅವರ ಕನಸು ನನಸಾಗಿದೆ.

ಲೋಕಸಭೆಯಲ್ಲಿ 22ಕ್ಕೂ ಹೆಚ್ಚು ಸ್ಥಾನ
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರಚಾರ ಭಾಷಣ, ಸಭೆಗಳಲ್ಲಿ ಯಡಿಯೂರಪ್ಪ ಅವರು ರಾಜ್ಯದಲ್ಲಿ ಬಿಜೆಪಿ 22ಕ್ಕೂ ಹೆಚ್ಚು ಸ್ಥಾನ ಗಳಿಸುವುದಾಗಿ ಭವಿಷ್ಯ ನುಡಿದಿದ್ದರು. ಕಾಂಗ್ರೆಸ್‌ನ ಘಟನಾನುಘಟಿ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಎಂ.ವೀರಪ್ಪ ಮೊಲಿ, ಕೆ.ಎಚ್.ಮುನಿಯಪ್ಪ ಸೋಲು ಅನುಭವಿಸಲಿದ್ದಾರೆ ಎಂದು ಹೇಳಿದ್ದರು. ಆದರೆ ಇದು ಕಾಂಗ್ರೆಸ್‌, ಜೆಡಿಎಸ್‌ ನಾಯಕರಿರಲಿ, ಸ್ವತಃ ಬಿಜೆಪಿ ನಾಯಕರಿಗೇ ಈ ಗುರಿ, ನಿರೀಕ್ಷೆ ವಾಸ್ತವಕ್ಕೆ ದೂರ ಎಂಬಂತಿತ್ತು. ಬಿಜೆಪಿ ನಡೆಸಿದ ಚುನಾವಣ ಪೂರ್ವ ಆಂತರಿಕ ಸಮೀಕ್ಷೆಯಲ್ಲೂ ಗೆಲ್ಲುವ ಲೋಕಸಭಾ ಕ್ಷೇತ್ರಗಳ ಸಂಖ್ಯೆ 18 ದಾಟಿರಲಿಲ್ಲ. ಇದರಿಂದ ಸಹಜವಾಗಿಯೇ ಬಿಜೆಪಿ ನಾಯಕರು ಫ‌ಲಿತಾಂಶ ಬಂದಾಗ ಮುಜುಗರಕ್ಕೀಡಾಗುವ ಆತಂಕದಲ್ಲಿದ್ದರು.

ಆದರೆ ಚುನಾವಣ ಫ‌ಲಿತಾಂಶ ಪ್ರಕಟವಾದಾಗ ರಾಜ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಬಿಜೆಪಿ ದಾಖಲೆ ಅತಿ ಹೆಚ್ಚು 25 ಸ್ಥಾನಗಳಲ್ಲಿ ಜಯ ಗಳಿಸಿತ್ತು. ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಕೂಡ ಜಯ ಗಳಿಸಿದ್ದು, ಒಟ್ಟು ಬಿಜೆಪಿ 26 ಸ್ಥಾನವನ್ನು ಗೆದ್ದಂತಾಗಿತ್ತು. ಬಿಜೆಪಿ ಗೆಲ್ಲುವ ಸ್ಥಾನಗಳನ್ನು ಒಂದಂಕಿಗೆ ಇಳಿಸುವುದಾಗಿ ಹೇಳಿದ್ದ ಕಾಂಗ್ರೆಸ್‌, ಜೆಡಿಎಸ್‌ ತಲಾ ಒಂದು ಸ್ಥಾನವನ್ನಷ್ಟೇ ಗೆಲ್ಲುವ ಮೂಲಕ ತೀವ್ರ ಮುಖಭಂಗ ಅನುಭವಿಸಿದವು. ಯಡಿಯೂರಪ್ಪ ಅವರು ಹೇಳಿದ್ದ ಮೊದಲ ಭವಿಷ್ಯ ನುಡಿ ನಿರೀಕ್ಷೆ ಮೀರಿ ನಿಜವಾಗಿತ್ತು.

Advertisement

ಅಧಿವೇಶನ ನಡೆಯುವುದೇ ನೋಡೋಣ
ಮೈತ್ರಿ ಸರಕಾರ ಮಳೆಗಾಲದ ಅಧಿವೇಶನವನ್ನು ಜು.12ರಿಂದ 26ರವರೆಗೆ ನಡೆಸುವುದಾಗಿ ಪ್ರಕಟಿಸುತ್ತಿದ್ದಂತೆ ಮೂರು ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿತ್ತು. ಈ ನಡುವೆ ಯಡಿಯೂರಪ್ಪ ಅವರು ಅಧಿವೇಶನ ನಡೆಯುವುದೇ ಎಂದು ಕಾದು ನೋಡೋಣ ಎಂದು ಹೇಳಿದ್ದರು. ಕಾಂಗ್ರೆಸ್‌, ಜೆಡಿಎಸ್‌ ಶಾಸಕರ ರಾಜೀನಾಮೆ, ಮುಂಬಯಿ ಹೊಟೇಲ್ನಲ್ಲಿ ವಾಸ್ತವ್ಯ ಮತ್ತಿತರ ಬೆಳವಣಿಗೆಯಿಂದ ಸಂತಾಪ ಸೂಚನೆ ಮೇಲಿನ ಚರ್ಚೆ ಹೊರತುಪಡಿಸಿದರೆ ಉಳಿದ ಯಾವುದೇ ಚರ್ಚೆ ನಡೆಯಲಿಲ್ಲ. ಕುಮಾರಸ್ವಾಮಿಯವರು ಮಂಡಿಸಿದ ವಿಶ್ವಾಸ ಮತ ಯಾಚನೆ ಪ್ರಸ್ತಾವದ ಮೇಲಿನ ಚರ್ಚೆಗೆ ಸೀಮಿತಗೊಂಡು ಮೈತ್ರಿ ಸರಕಾರದ ಪತನದೊಂದಿಗೆ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಯಿತು.

ಮೈತ್ರಿ ಸರಕಾರ ಪತನ ಖಚಿತ

ಲೋಕಸಭಾ ಚುನಾವಣೆ ಫ‌ಲಿತಾಂಶದ ಬಳಿಕ ಮೈತ್ರಿ ಸರಕಾರ ಪತನವಾಗಲಿದೆ ಎಂದು ಯಡಿಯೂರಪ್ಪ ಚುನಾವಣ ಪ್ರಚಾರ ಸಂದರ್ಭದಲ್ಲಿ ಹೇಳಿದ್ದು ಸಹ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಮೈತ್ರಿ ಪಕ್ಷಗಳ ಸಂಖ್ಯಾಬಲ ಸರಳ ಬಹುಮತದ 113 ಸದಸ್ಯರನ್ನೂ ಮೀರಿ 118 ಸದಸ್ಯರನ್ನು ಹೊಂದಿದ್ದ ಕಾರಣ ಸರಕಾರ ಪತನ ಸಾಧ್ಯತೆ ಬಗ್ಗೆಯೂ ಅನುಮಾನ ಮೂಡಿತ್ತು. ಆದರೆ ಸಾಕಷ್ಟು ರಾಜಕೀಯ ಮೇಲಾಟಗಳ ನಡುವೆಯೂ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತು ಪಡಿಸಲಾಗದೆ ಕಳೆದ ಜುಲೈ 23ರಂದು ಮೈತ್ರಿ ಸರಕಾರ ಪತನವಾಯಿತು. ಆ ಮೂಲಕ ಯಡಿಯೂರಪ್ಪನವರ ಮತ್ತೂಂದು ಭವಿಷ್ಯವೂ ಸತ್ಯವಾಗಿತ್ತು.

ಬಿಜೆಪಿ ಸರಕಾರ ರಚನೆಯಾಗಲಿದೆ

ಕೇಂದ್ರದಲ್ಲಿ ಬಿಜೆಪಿ ಸರಕಾರ ರಚನೆಯಾಗಿ ಪ್ರಧಾನಿಯಾಗಿ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲಿ ಪಾಲ್ಗೊಂಡು ಬೆಂಗಳೂರಿಗೆ ಹಿಂದಿರುಗಿದ ಯಡಿಯೂರಪ್ಪ ಅವರು ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಕೈಹಾಕುವುದಿಲ್ಲ ಎಂದು ಹೇಳಿದ್ದರು. ಆದರೆ ಆಡಳಿತ ಪಕ್ಷಗಳ ಶಾಸಕರ ರಾಜೀನಾಮೆ ಬಳಿಕ ಮೈತ್ರಿ ಸರಕಾರ ಪತನವಾಗಲಿದೆ ಎನ್ನುತ್ತಿದ್ದ ಯಡಿಯೂರಪ್ಪ ಅವರು ಬಿಜೆಪಿ ಸರಕಾರ ರಚನೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದರು. ಮೈತ್ರಿ ಸರಕಾರ ಪತನವಾಗಿ ಮೂರು ದಿನ ಕಳೆದ ಬಳಿಕ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಬಿಜೆಪಿ ಸರಕಾರ ರಚನೆಯಾಗಿದೆ.

-ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next