Advertisement

ಕೈ ಪಾಳಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ: ಕಾಂಗ್ರೆಸ್ ಮುಂದಿದೆ ನಾಲ್ಕು ದಾರಿಗಳು

12:23 PM Aug 24, 2020 | keerthan |

ಹೊಸದಿಲ್ಲಿ: ರಾಷ್ಟ್ರ ಕಾಂಗ್ರೆಸ್ ನಲ್ಲಿ ಈಗ ನಾಯಕತ್ವದ ಕುರಿತು ಚರ್ಚೆ ಆರಂಭವಾಗಿದೆ. ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿರುವ ಪಕ್ಷದ ಹಿರಿಯ ನಾಯಕರು ಬದಲಾವಣೆಯ ಕೂಗೆಬ್ಬಿಸಿದ್ದಾರೆ. ರಾಹುಲ್ ಗಾಂಧಿಯೇ ಅಧ್ಯಕ್ಷರಾಗಬೇಕೆ ಅಥವಾ ಗಾಂಧಿಯೇತರ ನಾಯಕರು ಅಗ್ರ ಸ್ಥಾನ ಅಲಂಕರಿಸಬೇಕೆ ಎನ್ನುವುದರ ಚರ್ಚೆ ಆರಂಭವಾಗಿದೆ.

Advertisement

ಈ ಕುರಿತು ಇಂದು ಹೊಸದಿಲ್ಲಿಯಲ್ಲಿ ಕಾರ್ಯಕಾರಣಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪಕ್ಷದ ಮುಂದಿನ ನಾಯಕತ್ವದ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ ಎನ್ನಲಾಗಿದೆ.

ಕಾಂಗ್ರೆಸ್ ಮುಂದಿದೆ ನಾಲ್ಕು ದಾರಿಗಳು

1 ಸದ್ಯ ಹಂಗಾಮಿ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿಯವರೇ ಮುಂದಿನ ಅವಧಿಗೆ ಅಧ್ಯಕ್ಷರಾಗಬಹುದು. ಸಭೆಯಲ್ಲಿ ಪಕ್ಷದ ಹಿರಿಯ ನಾಯಕರು ಸೋನಿಯಾ ಗಾಂಧಿಯವರನ್ನೇ ಮನವೊಲಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವಂತೆ ಮಾಡಬಹುದು.

2 ಒಂದು ವೇಳೆ ಸೋನಿಯಾ ಗಾಂಧಿ ನಿರಾಕರಿಸಿದರೆ?
ಇಂತಹ ಪರಿಸ್ಥಿತಿ ಎದುರಾದರೆ ಹಿರಿಯ ನಾಯಕರು ರಾಹುಲ್ ಗಾಂಧಿಯವರಿಗೆ ಮತ್ತೆ ಪಟ್ಟ ಕಟ್ಟಲು ಪ್ರಯತ್ನ ನಡೆಸಬಹುದು. ಯುವರಾಜನನ್ನು ಮತ್ತೆ ಮಹಾರಾಜನನ್ನಾಗಿ ಮಾಡಬಹುದು. ಹಲವು ರಾಜ್ಯಗಳ ನಾಯಕರು ರಾಹುಲ್ ಪರವೇ ಒಲವು ಹೊಂದಿದ್ದಾರೆ. ಸೋನಿಯಾ ಗಾಂಧಿ ಕೂಡಾ ಇದಕ್ಕೆ ಒಪ್ಪಬಹುದು ಎನ್ನಲಾಗಿದೆ.

Advertisement

ಇದನ್ನೂ ಓದಿ: ದೇಶದ ಹಿತದೃಷ್ಟಿಯಿಂದ ರಾಹುಲ್ ಗಾಂಧಿಯೇ ಕಾಂಗ್ರೆಸ್ ಅಧ್ಯಕ್ಷರಾಗಬೇಕು: ಸಿದ್ದರಾಮಯ್ಯ

3 ರಾಹುಲ್ ಗಾಂಧಿ ಒಪ್ಪದಿದ್ದರೆ?

ಮೂಲಗಳ ಪ್ರಕಾರ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ಒಪ್ಪುವುದು ಕಷ್ಟ. ಕಳೆದ ಲೋಕಸಭಾ ಚುನಾವಣೆಯ ಸೋಲಿನ ನಂತರ ರಾಜೀನಾಮೆ ನೀಡಿದ್ದ ರಾಹುಲ್ ಮತ್ತೆ ಅಧ್ಯಕ್ಷ ಸ್ಥಾನ ಬೇಡವೇ ಬೇಡ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ ಎನ್ನುತ್ತಿವೆ ವರದಿಗಳು.

ಕಾಂಗ್ರೆಸ್ ಪಕ್ಷ ಎಲ್ಲಾ ರಾಜ್ಯಗಳ ಪ್ರತಿನಿಧಿಗಳ ತಂಡ ಕಟ್ಟಿದೆ. ಹರ್ಯಾಣ ಮತ್ತು ಕೆಲವು ಪ್ರತ್ಯೇಕ ರಾಜ್ಯಗಳ ಎಐಸಿಸಿ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಬಾಕಿ ಉಳಿದಿದೆ. ಮುಂದಿನ ದಿನಗಳಲ್ಲಿ ಇದು ನಡೆದರೆ ಸುಮಾರು ಹತ್ತು ಸಾವಿರ ಪ್ರತಿನಿಧಿಗಳಿಂದ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಂತರಿಕ ಚುನಾವಣೆ ನಡೆಸಬಹುದು. ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷೆಯಾದಾಗ ಈ ರೀತಿ ಚುನಾವಣೆ ಮಾಡುವ ಬಗ್ಗೆ ಹೇಳಿದ್ದರೂ ಕೋವಿಡ್ ಕಾರಣದಿಂದ ಸಾಧ್ಯವಾಗಿರಲಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಹಾಗಾದರೆ ಮುಂದಿನ ಆಂತರಿಕ ಚುನಾವಣೆ ನಡೆಯುವವರಿಗೆ ಸೋನಿಯಾ ಗಾಂಧಿಯೇ ಮಧ್ಯಂತರ ಅಧ್ಯಕ್ಷೆಯಾಗಿ ಮುಂದುವರಿಯಬಹುದು.

ಇದನ್ನೂ ಓದಿ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಖರ್ಗೆ ಹೆಸರು?

4 ಸೋನಿಯಾ ಗಾಂಧಿಯೇ ಮಧ್ಯಂತರ ಅಧ್ಯಕ್ಷೆಯಾಗಿ ಮುಂದುವರಿಯಲು ಒಪ್ಪದೇ ಇದ್ದರೆ?

ವರದಿಗಳ ಪ್ರಕಾರ ಸೋನಿಯಾ ಗಾಂಧಿ ಅವರ ಆರೋಗ್ಯದ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ಹೀಗಾಗಿ ಅವರು ಮಧ್ಯಂತರ ಅಧ್ಯಕ್ಷೆಯಾಗಿ ಮುಂದುವರಿಯಲು ಒಪ್ಪುವುದು ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ಗಾಂಧಿಯೇತರ ನಾಯಕರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ಮಾಡಬಹುದು. ಮಾಜಿ ಪ್ರಧಾನಿ ಮನಮೋಹನ ಸಿಂಗ್, ಮಾಜಿ ಸಚಿವ ಎ.ಕೆ ಆ್ಯಂಟನಿ, ಮಲ್ಲಿಕಾರ್ಜುನ್ ಖರ್ಗೆ ಅಥವಾ ಸುಶೀಲ್ ಕುಮಾರ್ ಶಿಂಧೆ ಅವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ಮಾಡಬಹುದು. ಇವರಲ್ಲೇ ಅಥವಾ ಹೊಸ ನಾಯಕರನ್ನು ಯಾರಿಗಾದರೂ ಪೂರ್ಣಾವಧಿ ಅಧ್ಯಕ್ಷರನ್ನಾಗಿಯೂ ಮಾಡಬಹುದು. ಎಲ್ಲದಕ್ಕೂ ಕಾಲವೇ ತೀರ್ಮಾನಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next