Advertisement
25 ಲಕ್ಷ ರೂ. ಪಡೆದಿದ್ದ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಹಣ ವಾಪಸ್ ಬರಲ್ಲ ಎಂದು ಆತಂಕಗೊಂಡ ಗೃಹಿಣಿ, ತನ್ನ ಮೂರು ವರ್ಷದ ಮಗಳು ಹಾಗೂ ತಂದೆ ತಾಯಿಗೆ ವಿಷಪೂರಿತ ಮಾತ್ರೆ ನುಂಗಿಸಿ ಕೊಲೆಗೈದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಧಾರಾಣಿ (29) ಸೋನಿಕಾ (3) ಜನಾರ್ದನ್ (55) ಅವರ ಪತ್ನಿ ಸುಮಿತ್ರಾ (45) ಮೃತರು.
Related Articles
Advertisement
ಕಳೆದ ಎರಡು ದಿನಗಳಿಂದ ಮನೆಯ ಬಾಗಿಲು ತೆಗೆದಿರಲಿಲ್ಲ. ಸೋಮವಾರ ಮಧ್ಯಾಹ್ನ 2.30ರ ಸುಮಾರಿಗೆ ಮನೆಯಿಂದ ಕೆಟ್ಟ ವಾಸನೆ ಬರಲಾರಂಭಿಸಿದೆ. ಇದನ್ನು ಗಮನಿಸಿದ ಮನೆಯ ಮಾಲೀಕರು ಮನೆಯ ಬಾಗಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಅನುಮಾನಗೊಂಡು ಸುಧಾರಾಣಿ ಪತಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಅವರು ಬಂದು ನೋಡಿದಾಗ ಪತ್ನಿ, ಮಗಳು, ಅತ್ತೆ, ಮಾವ ಮೃತಪಟ್ಟಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಡೆತ್‌ನೋಟ್’ನಲ್ಲಿದೆಯೇ ಸಾವಿನ ರಹಸ್ಯ?: ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿ ಮನೆಯನ್ನು ಪರಿಶೀಲಿಸಿದ್ದಾರೆ. ಜನಾರ್ದನ ಹಾಗೂ ಪತ್ನಿ ತಮ್ಮ ಕೊಠಡಿಯಲ್ಲಿ ತಮ್ಮ ಬೆಡ್‌ಮೇಲೆಯೇ ಅಸುನೀಗಿದ್ದರು. ಇತ್ತ ಸುಧಾರಾಣಿ ಹಾಗೂ ಸೋನಿಕಾ ಕೂಡ ಜೊತೆಯಲ್ಲಿಯೇ ಕೊನೆಯುಸಿರೆಳೆದಿದ್ದು, ಅಲ್ಲಿ ಡೆತ್ ನೋಟ್ ಲಭ್ಯವಾಗಿದೆ.
ಡೆತ್‌ನೋಟ್‌ನಲ್ಲಿರುವ ಮಾಹಿತಿಯನ್ನು ಗಮನಿಸಿದರೆ ಸುಧಾರಾಣಿ ಮೊದಲು ತಂದೆ, ತಾಯಿ ಮಗಳನ್ನು ಕೊಲೆ ಮಾಡಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ. ಆದರೆ. ಡೆತ್ ನೋಟ್ ನಿಜವಾಗಿಯೂ ಬರೆದಿರುವುದು ಯಾರು ಎಂಬುದು ಖಚಿತವಾಗಬೇಕಿದೆ. ಹೀಗಾಗಿ, ಆಕೆಯ ಬರವಣಿಗೆ ಶೈಲಿಯನ್ನು ಪರಿಶೀಲಿಸಬೇಕಿದೆ. ಮೃತರ ಮರಣೋತ್ತರ ಪರೀಕ್ಷಾ ವರದಿಯೂ ಕೈ ಸೇರಬೇಕಿದೆ. ಜತೆಗೆ, 25 ಲಕ್ಷ ರೂ. ಹಣ ಪಡೆದಿದ್ದವರು ಯಾರು ಎಂಬುದು ತನಿಖೆಯಲ್ಲಿ ಗೊತ್ತಾಗಬೇಕಿದೆ.
ಜತೆಗೆ, ಸುಧಾರಾಣಿ ಹಾಗೂ ಆಕೆಯ ಪೋಷಕರು ಬಳಸುತ್ತಿದ್ದ ಮೊಬೈಲ್ ಫೋನ್‌ಗಳ ದೂರವಾಣಿ ಕರೆಗಳು, ಮೆಸೇಜ್‌ಗಳನ್ನು ಪರಿಶೀಲಿಸಲಾಗುತ್ತಿದ್ದು, ಕೊಲೆಯೇ? ಆತ್ಮಹತ್ಯೆಯೇ ಎಂಬುದು ತನಿಖೆ ಪೂರ್ಣಗೊಂಡ ಬಳಿಕ ಸತ್ಯಾಸತ್ಯತೆ ಹೊರಬರಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ನಾಲ್ವರು ಸಾವಿನ ಪ್ರಕರಣದ ತನಿಖೆಯನ್ನು ಹಲವು ದೃಷ್ಟಿಕೋನಗಳಲ್ಲಿ ನಡೆಸಲಾಗುತ್ತಿದೆ. ಘಟನಾ ಸ್ಥಳದಲ್ಲಿ ದೊರೆತಿರುವ ಡೆತ್‌ನೋಟ್‌ನಲ್ಲಿ ಹಲವು ಮಾಹಿತಿಯಿದ್ದು, ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಮೃತರ ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಸಾವು ಸಂಭವಿಸಿರುವುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಲಿದೆ.-ಕಲಾ ಕೃಷ್ಣಮೂರ್ತಿ, ಡಿಸಿಪಿ, ಈಶಾನ್ಯ ವಿಭಾಗ