Advertisement

ಜೀತಾಮಿತ್ರಾ ಅಪಹರಿಸಿದ ಸ್ನೇಹಿತ ಸೇರಿ ನಾಲ್ವರ ಬಂಧನ

12:34 PM Jun 03, 2018 | Team Udayavani |

ಬೆಂಗಳೂರು: ಉದ್ಯಮಿ ಜೀತಾಮಿತ್ರ ಅಪಹರಣ ಪ್ರಕರಣವನ್ನು ಭೇದಿಸಿರುವ ಹೆಬ್ಟಾಳ ಠಾಣೆ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಜೀತಾಮಿತ್ರ ಅವರ ಮಿತ್ರನೇ ಅಪಹರಣ ಪ್ರಕರಣದ ಸೂತ್ರಧಾರ ಎಂಬುದು ತನಿಖೆಯಲ್ಲಿ ಬಯಲಾಗಿದೆ.

Advertisement

ವಿಲಾಸಿ ಜೀವನಕ್ಕಾಗಿ ಹಣ ಹೊಂದಿಸಲು ಸ್ನೇಹಿತನನ್ನೇ ಅಪಹರಿಸಿದ್ದ ಆರೋಪದ ಮೇಲೆ ಎಚ್‌ಬಿಸಿಎಸ್‌ ಲೇಔಟ್‌ನ ಮಹಮದ್‌ ವಸೀಂ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಜತೆಗೆ ಈ ಕೃತ್ಯಕ್ಕೆ ನೇರವಾದ ಹಾಸನ ಮೂಲದ ಸಲ್ಮಾನ್‌ ಅಲಿಯಾಸ್‌ ವಾಯಿಜ್‌ (24), ಚನ್ನರಾಯಪಟ್ಟಣದ ಸುನೀಲ್‌ ಅಲಿಯಾಸ್‌ ಯುವರಾಜ (32), ಸುಂಕದಕಟ್ಟೆಯ ನಿವಾಸಿ ಪ್ರದೀಪ್‌ ಅಲಿಯಾಸ್‌ ಸಾಗರ್‌ (24)ನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಈ ಹಿಂದೆ ಓಲಾ, ಉಬರ್‌ ಕಾರು ಚಾಲಕರಾಗಿದ್ದು, ಪರಸ್ಪರ ಪರಿಚಯವಿತ್ತು. ವಿಲಾಸಿ ಜೀವನ ನಡೆಸಲು ಹಣ ಗಳಿಸಲು ತಮ್ಮ ಕ್ಯಾಬ್‌ಗಳಲ್ಲಿ ಪ್ರಯಾಣಿಸುವ ಶ್ರೀಮಂತರನ್ನು ಗುರಿಯಾಗಿಕೊಂಡು ಅಪಹರಿಸುವ ಯೋಜನೆ ರೂಪಿಸಿದ್ದರು. ಅದರಂತೆ ವಸೀಂ ತನಗೆ ಪರಿಚಯವಿದ್ದ ಜೀತಾ ಮಿತ್ರಾ ಅವರ ಅಪಹರಣಕ್ಕೆ ರೂಪುರೇಷೆ ಸಿದ್ಧಪಡಿಸಿದ್ದ.

ಅದರಂತೆ ಮೇ 3ರಂದು ವಸೀಂ ಜೀತಾಮಿತ್ರರನ್ನು ಹಿಂಬಾಲಿಸಿದ್ದ. ಮಲ್ಲೇಶ್ವರದ ತನ್ನ ಕಂಪನಿಯಲ್ಲಿ ಕೆಲಸ ಮುಗಿಸಿ ರಾತ್ರಿ 7 ಗಂಟೆ ಸುಮಾರಿಗೆ ಜೀತಮಿತ್ರಾ ಎಂಎಸ್‌ಎಚ್‌ ಲೇಔಟ್‌ನಲ್ಲಿನ ನಿವಾಸಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ಉಳಿದ ಮೂವರು ಆರೋಪಿಗಳು, ಕಾರಿನಲ್ಲಿ ಹಿಂಬಾಲಿಸಿ ಹಿಂದಿನಿಂದ ಮಿತ್ರಾ ಕಾರಿಗೆ ಡಿಕ್ಕಿ ಹೊಡೆದಿದ್ದರು. ಆಗ ಕಾರಿನಿಂದ ಹೊರ ಬಂದ ಜೀತಾಮಿತ್ರ ಅವರೊಂದಿಗೆ ಜಗಳ ತೆಗೆದ ಆರೋಪಿಗಳು,

ಜಖಂಗೊಂಡ ಭಾಗದ ರಿಪೇರಿಗೆ 1000 ರೂ. ನೀಡುವಂತೆ ಒತ್ತಾಯಿಸಿದರು. ಆದರೆ ಹಣ ಕೊಡಲು ನಿರಾಕರಿಸಿದಾಗ ಏಕಾಏಕಿ ಜೀತಮಿತ್ರಾರನ್ನು ಕಾರಿನೊಳಗೆ ಎಳೆದುಕೊಂಡು, ಅಪಹರಿಸಿ 50 ಲಕ್ಷ ರೂ. ನೀಡಿದರೆ ಬಿಡುಗಡೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು. ಇದರಿಂದ ಆತಂಕಗೊಂಡ ಜೀತಾಮಿತ್ರಾ, ಹಣ ಹೊಂದಿಸುವಂತೆ ತಮ್ಮ ಪರಿಚಯಸ್ಥರಿಗೆ ಸೂಚಿಸಲು ಮೊಬೈಲ್‌ ಕರೆಗೆ ಅವಕಾಶ ನೀಡುವಂತೆ ಕೋರಿದರು.

Advertisement

ಇದಕ್ಕೆ ಅಪಹರಣಕಾರರು ಅವಕಾಶ ನೀಡಲಿಲ್ಲ. ಬದಲಿಗೆ ನಿನಗೆ ಪರಿಚಯವಿರುವವರ ಹೆಸರು ತಿಳಿಸುವಂತೆ ಸೂಚಿಸಿದ್ದಾರೆ. ಆಗ ಜೀತಾಮಿತ್ರಾ, ಪರಿಚಿತರಾದ ಮಹಮದ್‌ ವಸೀಂ ಹೆಸರು ಹೇಳಿದ್ದಾರೆ. ಕೂಡಲೇ ಆರೋಪಿಗಳು ವಸೀಂಗೆ ಕರೆ ಮಾಡಿ ಹಣ ತರುವಂತೆ ಹೇಳು ಎಂದು ಒತ್ತಾಯಿಸಿದ್ದಾರೆ. ಹೀಗಾಗಿ ವಸೀಂಗೆ ಕರೆ ಮಾಡಿದ್ದ ಜೀತಾಮಿತ್ರ,

ತಾನು ಕಿಡ್ನಾಪ್‌ ಆಗಿರುವ ವಿಚಾರ ಹೇಳುತ್ತಿದ್ದಂತೆ ಹಣ ತಂದುಕೊಡುವುದಾಗಿ ಒಪ್ಪಿಕೊಳ್ಳುವ ನಾಟಕವಾಡಿದ್ದ. ಮೊದಲೇ ಹೆಣೆದ ಸೂತ್ರದಂತೆ ವಸೀಂ, ಪದೇ ಪದೆ ಕರೆ ಮಾಡಿ ಹಣ ಹೊಂದಿಸುತ್ತಿರುವುದಾಗಿ ಹೇಳುತ್ತಿದ್ದ. ಅಲ್ಲದೆ ರಾತ್ರಿ 11.30ರ ಸುಮಾರಿಗೆ ಮೇಖೀ ವೃತ್ತದ ಬಳಿ 8.50 ಲಕ್ಷ ರೂ. ತಂದಿರುವುದಾಗಿ ಹೇಳಿದ್ದ. ಅದರಂತೆ ಇಬ್ಬರು ಆರೋಪಿಗಳು ಹೋಗಿ ಹಣ ಪಡೆದುಕೊಂಡು ಬಂದಿರುವುದಾಗಿ ತಿಳಿಸಿದ್ದರು.

ಮಧ್ಯರಾತ್ರಿ 1 ಗಂಟೆವರೆಗೂ ಕಾರಿನಲ್ಲೇ ಸುತ್ತಾಡಿಸಿ ವಸೀಂನಿಂದ 17.50 ಲಕ್ಷ ರೂ. ಪಡೆದ ಆರೋಪಿಗಳು, ಖಾಲಿ ಚೆಕ್‌ಗಳ ಉಹಾಗೂ ವಾಹನ ವರ್ಗಾವಣೆಗೆ ಸಂಬಂಧಿಸಿದ ಅರ್ಜಿಗಳಿಗೆ ಸಹಿ ಮಾಡಿಸಿಕೊಂಡಿದ್ದರು. ಪೊಲೀಸರಿಗೆ ದೂರು ನೀಡದಿದ್ದರೆ ಒಂದು ವಾರದ ನಂತರ ಕಾರು ಹಿಂದಿರುಗಿಸುವುದಾಗಿ ಹೇಳಿ ಕಳಿಸಿದ್ದರು. ಇತ್ತ ವಸೀಂ ಕೂಡ, ತಾನು ಸಾಲ ಮಾಡಿ ಹಣ ನೀಡಿದ್ದು, ತನಗೆ ಹಿಂತಿರುಗಿಸುವಂತೆ ಒತ್ತಾಯಿಸಿದ್ದ.

ಮಾರನೇ ದಿನ ಪೊಲೀಸರಿಗೆ ದೂರು ನೀಡಿದ ಜೀತಮಿತ್ರಾ, ವಸೀಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ವಸೀಂನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಣದಾಸೆಗೆ ತಾನೇ ಅಪಹರಣ ಮಾಡಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಆತ ನೀಡಿದ ಮಾಹಿತಿ ಮೇರೆಗೆ ಉಳಿದ ಆರೋಪಿಗಳನ್ನು ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು  ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next