ಕಲಬುರಗಿ: ನಗರದ ಡಾ| ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ರವಿವಾರ ಕಲಬುರಗಿ ವಿಭಾಗ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಂಘ, ಶ್ರೀನಿಧಿ-ಸುಪ್ರೀತ ಪ್ರಕಾಶನದ ಸಹಯೋಗದಲ್ಲಿ ನಡೆದ ಲೇಖಕ ವಿಠ್ಠಲ್ ವಗ್ಗನ್ ಅವರ ನಾಲ್ಕು ಕೃತಿಗಳನ್ನು ಮೈಸೂರಿನ ಹಿರಿಯ ಲೇಖಕ ಪ್ರೊ| ಕೆ.ಎಸ್.ಭಗವಾನ್ ಲೋಕಾರ್ಪಣೆ ಮಾಡಿದರು.
ಶ್ರೀಗುರು ವಿದ್ಯಾಪೀಠದ ಪ್ರಧಾನ ಕಾರ್ಯದರ್ಶಿ ಶಿವರಾಜಡಿಗ್ಗಾವಿ ಸಮಾರಂಭ ಉದ್ಘಾಟಿಸಿ, ವಿಠ್ಠಲ್ ವಗ್ಗನ
ಉತ್ತಮ ಪುಸ್ತಕಗಳನ್ನು ಸಮಾಜಕ್ಕೆ ನೀಡುತ್ತಿದ್ದಾರೆ. ಅಲ್ಲದೆ, ಕೆಲವು ಸತ್ಯಗಳನ್ನು ಬೆಳಕಿಗೆ ತರುವ ಪ್ರಯತ್ನ ಮಾಡಿದ್ದಾರೆ. ಇಂತಹ ಪುಸ್ತಕಗಳನ್ನು ಜನರು ಕೊಂಡು ಓದಬೇಕು ಎಂದರು.
ವಿಠ್ಠಲ್ ವಗ್ಗನ್‌ರ ನಾಲ್ಕು ಕೃತಿಗಳನ್ನು ಡಾ| ಬಿ.ಆರ್.ಅಂಬೇಡ್ಕರ್ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ| ಐ.ಎಸ್. ವಿದ್ಯಾಸಾಗರ ಪರಿಚಯಿಸಿದರು. ಅಂಬೇಡ್ಕರ್ ಮತ್ತು ಬೌದ್ಧಧರ್ಮ್ಮ ಕುರಿತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಡಾ| ಎನ್. ಚಿನ್ನಸ್ವಾಮಿ ಸೋಸಲೆ ಮತ್ತು ಮೀಸಲಾತಿ ಮತ್ತು ಬಡ್ತಿ ಮೀಸಲಾತಿ ಒಂದು ಮೌಲಿಕ ಚರ್ಚೆ ಕುರಿತು ಮೈಸೂರಿನ ಸಮಾಜ ವಿಜ್ಞಾನಿ ನಾಗಸಿದ್ಧಾರ್ಥ ಹೊಲೆಯಾರ್ ವಿಶೇಷ ಉಪನ್ಯಾಸ ನೀಡಿದರು.
ವಿಶ್ರಾಂತ ಮುಖ್ಯ ಅಭಿಯಂತರ ಬಿ.ಬಿ.ರಾಂಪುರೆ ಅತಿಥಿಯಾಗಿದ್ದರು. ಹಿರಿಯ ಮುಖಂಡ ಡಾ| ವಿಠ್ಠಲ್ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಲೇಖಕ ವಿಠ್ಠಲ್ ವಗ್ಗನ್ ಮಾತನಾಡಿದರು. ಜಿಲ್ಲಾ ಕಸಾಪ ನಿಕಟಪೂರ್ವ ಗೌರವ ಕಾರ್ಯದರ್ಶಿ ಸುರೇಶ ಬಡಿಗೇರ ನಿರೂಪಿಸಿದರು. ಮುಖಂಡರಾದ ಚಂದ್ರಕಾಂತ ಅಷ್ಟಗಿ, ಉದಯಕುಮಾರ ಗಾಯಕವಾಡ, ರಾಹುಲ್ ಧನ್ನಾ, ಶಶಿಕಾಂತ ಹೋಳ್ಕರ್, ರವಿಕಾಂತ ಚಿಂಚೋಳಿ, ರಾಜಕುಮಾರ ಸಾಗರ್, ನಾಗನಾಥ, ರವಿ ಮುದ್ದನ್, ಚಂದ್ರಕಾಂತ ಡಾಂಗೆ, ಗಾಯಕರಾದ ಶಂಕರ ಹೂಗಾರ, ವೀರೇಶ ಹೂಗಾರ , ಸುಧಾ ಸಜ್ಜನ್, ಗೌರಮ್ಮ ಶೃಂಗೇರಿ ಇತರರಿದ್ದರು. ಕೃತಿಗಳನ್ನು ಸುಂದರವಾಗಿ ಹೊರತರುವಲ್ಲಿ ಸಹಕರಿಸಿದ ಸುರೇಶ ಸಿಂಧೆ ಅವರನ್ನು ಸತ್ಕರಿಸಲಾಯಿತು. ವಿದ್ಯಾಸಾಗರ ಇದ್ದರು.