ಬೆಂಗಳೂರು: ತೋಟಗಾರಿಕೆ ಇಲಾಖೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅಕ್ಟೋಬರ್‌ವರೆಗೆ ಶೇ.10ಕ್ಕಿಂತ ಕಡಿಮೆ ಅನುದಾನ ಬಳಸಿ ಕಳಪೆ ಕಾರ್ಯಸಾಧನೆ ತೋರಿದ 4 ತಾಲೂಕುಗಳ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು (ಎಸ್‌ಎಡಿಎಚ್)
ಸರ್ಕಾರ ಅಮಾನತುಪಡಿಸಿದೆ.
ಪಿರಿಯಾಪಟ್ಟಣದ ಎಚ್.ಸಿ.ಸುದರ್ಶನ್, ಸೇಡಂನ ಸಂತೋಷ್ ಶೇಷಲು, ಗುಡಿಬಂಡೆಯ ಎ.ಗಾಯಿತ್ರಿ, ಹಳಿಯಾಳದ ಅಬ್ದುಲ್ ರೆಹ್ಮಾನ್ ಅಮಾನತುಗೊಂಡವರು. ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ಅತಿ ಕಳಪೆ ಸಾಧನೆ ತೋರಿದ 4 ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಅಮಾನತುಪಡಿಸುವಂತೆ ತೋಟಗಾರಿಕೆ ಇಲಾಖೆ ಆಯುಕ್ತ ಪ್ರಭಾಷ್‌ಚಂದ್ರ
ರೇ ಶಿಫಾರಸು ಮಾಡಿದ್ದರು.
ಆಡಳಿತದಲ್ಲಿ ಶಿಸ್ತು ಮೂಡಿಸಲು ಹಾಗೂ ರೈತರಿಗೆ ಸಕಾಲದಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ತಲುಪಿಸುವ ಕಾರ್ಯಕ್ಕೆ ಆದ್ಯತೆ ನೀಡುವ ಸಲುವಾಗಿ ಆಯುಕ್ತರು ಕೆಲ ಬಿಗಿ ಕ್ರಮ ಕೈಗೊಂಡಿದ್ದರು. ಅಕ್ಟೋಬರ್‌ವರೆಗೆ ಶೇ.25ಕ್ಕಿಂತ ಕಡಿಮೆ ಅನುದಾನ ಬಳಸಿದ 12 ಉಪ ನಿರ್ದೇಶಕರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದರು.