Advertisement

ಅನ್ನದೊಂದಿಗೆ ಸಯನೈಡ್‌ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

03:45 AM Jul 14, 2017 | Team Udayavani |

ಶಿರ್ವ: ಒಂದೇ ಕುಟುಂಬದ ನಾಲ್ವರು ಅನ್ನದೊಂದಿಗೆ ಸಯನೈಡ್‌ ಸೇವಿಸಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿ ಕೊಂಡ ಘಟನೆ ಶಿರ್ವ ಸಮೀಪದ ಪಡುಬೆಳ್ಳೆ- ಪಾಂಬೂರು ಬಳಿ ಗುರುವಾರ ಮುಂಜಾನೆ ಸಂಭವಿಸಿದೆ. ಪಡುಬೆಳ್ಳೆಯ ಶ್ರೀಯಾ ಜುವೆಲರಿ ಮಾಲಕ ಶಂಕರ ಆಚಾರ್ಯ (51), ಪತ್ನಿ ನಿರ್ಮಲಾ ಆಚಾರ್ಯ (45) ಪುತ್ರಿಯರಾದ ಶ್ರುತಿ (25) ಮತ್ತು ಶ್ರೀಯಾ (22) ಮೃತಪಟ್ಟವರು.


ಪತ್ನಿ, ಮಕ್ಕಳಿಗೆ ವಿಷವಿಕ್ಕಿ
ತಾನೂ ಆತ್ಮಹತ್ಯೆಗೈದರೇ?

ಮನೆಯಲ್ಲಿ ಬೆಳಗ್ಗೆ ಊಟ ಮಾಡುವ ಅಭ್ಯಾಸವಿದ್ದು ಪತ್ನಿ, ಮಕ್ಕಳ ಊಟಕ್ಕೆ ಸೈನೈಡ್‌ಬೆರೆಸಿದ ಶಂಕರ ಆಚಾರ್ಯ, ಅವರು ಮೃತ ಪಟ್ಟ ಬಳಿಕ ತಾನು ನೇರವಾಗಿ ಸಯನೈಡ್‌ ಸೇವಿಸಿ ಆತ್ಮಹತ್ಯೆ ಗೈದಿರಬಹುದೆಂದು ಶಂಕಿಸ ಲಾಗಿದೆ. ಶಂಕೆಗೆ ಪೂರಕವೆಂಬಂತೆ ಒಂದು ಬಟ್ಟಲಿನಲ್ಲಿ ಅನ್ನ- ಸಾಂಬಾರು ಹಾಗೆಯೇ ಉಳಿದಿತ್ತು. ಶಂಕರ ಮೃತದೇಹದ ಬಳಿ ವಿಷ ಪದಾರ್ಥವೊಂದರ ಕಟ್ಟು ಲಭ್ಯವಾಗಿದೆ. ಆಭರಣಗಳ ಕೆಲಸ ಮಾಡುವವ ರಾದ್ದರಿಂದ ಅವರಿಗೆ ಸಯನೈಡ್‌ ಸುಲಭವಾಗಿ ಲಭಿಸಿರಬಹುದು ಎನ್ನಲಾಗುತ್ತಿದೆ.

Advertisement

ಸಾಲಬಾಧೆ ಕಾರಣವೇ?
ಶಂಕರ ಆಚಾರ್ಯರು ದೊಡ್ಡ ಮೊತ್ತದ ಸಾಲ ಬಾಧೆಯಿಂದ ಬಳಲುತ್ತಿದ್ದರು ಎಂಬ ಮಾತುಗಳು ಸ್ಥಳೀಯರಲ್ಲಿ ಕೇಳಿಬರುತ್ತಿವೆ. ಸಾಲಭಾದೆ ತಾಳಲಾಗದೆ ಅಥವಾ ಸಾಲ ನೀಡಿದವರಿಂದ ಅವಮಾನ ತಪ್ಪಿಸಲು ಕುಟುಂಬ ಸಮೇತ ಆತ್ಮಹತ್ಯೆಗೈದರೇ ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಮೇಲ್ನೋಟಕ್ಕೆ ಕುಟುಂಬಕ್ಕೆ ಯಾವುದೇ ಆರ್ಥಿಕ ಮುಗ್ಗಟ್ಟು
ಇರಲಿಲ್ಲ. ಇಡೀ ಕುಟುಂಬವೇ ಆತ್ಮಹತ್ಯೆಮಾಡಿ ಕೊಳ್ಳುವಂತಹ ಪರಿಸ್ಥಿತಿ ಇರಲಿಲ್ಲ ಎಂದು ಪರಿಚಿತರು ತಿಳಿಸಿದ್ದಾರೆ. ಇದರಿಂದ ಘಟನೆಯ ನಿಗೂಢತೆ ಮತ್ತಷ್ಟು ಹೆಚ್ಚಿದೆ.

ತಾಯಿ ಹೂ ನೀಡಲು
ಬಂದಾಗ ಘಟನೆ ಬೆಳಕಿಗೆ

ಬೆಳಗ್ಗೆ ಸುಮಾರು 8.30ರ ವೇಳೆಗೆ ಎದುರು ಮನೆಯಲ್ಲಿರುವ ಶಂಕರ ಆಚಾರ್ಯ ಅವರ ತಾಯಿ ಹೂ ನೀಡಲು ಬಂದಾಗ ಮನೆಯ ಬಾಗಿಲು ತೆರೆದಿತ್ತು. ಒಳಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ನೆರೆಕರೆ ಯವರ ಸಹ ಕಾರದೊಂದಿಗೆ ದೇಹಗಳನ್ನು ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

ಪೂರ್ವಯೋಜಿತವೇ?
ಶಂಕರ ಆಚಾರ್ಯ ಅಂಗಡಿಯ ಕೆಲಸದ ಹುಡುಗನನ್ನು ಮೂರ್‍ನಾಲ್ಕು ದಿನದ ಹಿಂದೆ ರಜೆ ನೀಡಿ ಊರಿಗೆ ಕಳುಹಿಸಿದ್ದು ಮರಳಲು ತಾನೇ ಕರೆ ಮಾಡುತ್ತೇನೆ ಎಂದು ಹೇಳಿದ್ದರು ಎನ್ನಲಾಗಿದೆ. ತನ್ನ ಜುವೆಲರಿ ಅಂಗಡಿಯನ್ನು ಕೂಡ ಬುಧವಾರ ರಾತ್ರಿ ಸ್ವತ್ಛಗೊಳಿಸಿದ್ದರು ಎಂದು ನೆರೆಯ ಅಂಗಡಿ ಯಾತ ತಿಳಿಸಿದ್ದಾರೆ. ಶಂಕರ ಆಚಾರ್ಯ ಪಡುಬೆಳ್ಳೆ ಪರಿಸರದಲ್ಲಿ ಜನಾನುರಾಗಿಯಾಗಿದ್ದರು. ಘಟನೆ ಸುದ್ದಿಯಾಗುತ್ತಿದ್ದಂತೆ ಸಾವಿರಾರು ಮಂದಿ ಮೃತರ ಮನೆ ಎದುರು ನೆರೆದಿದ್ದರು. ಘಟನೆ ಆಘಾತ ದಿಂದ ಊರಿಗೆ ಊರೇ ಸ್ತಬ್ಧವಾಗಿತ್ತು.

ಶಿರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಣಿಪಾಲದಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು. ಮೃತ ದೇಹಗಳ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯಲ್ಲಿ ನೆರವೇರಿಸಲಾಯಿತು. ಮಣಿಪಾಲ ಆಸ್ಪತ್ರೆಗೆ ಕಾಪು ಶಾಸಕ ವಿನಯ ಕುಮಾರ್‌ ಸೊರಕೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ ಯಡಿಯೂರಪ್ಪ ಭೇಟಿ ನೀಡಿದರು. 

Advertisement

ಪ್ರಮೋದ್‌, ಬಿಎಸ್‌ವೈ ಸಂತಾಪ
ಘಟನೆಗೆ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಸಂತಾಪ ಸೂಚಿಸಿದ್ದಾರೆ. ಬಿಜೆಪಿ ರಾಜ್ಯಾ  ಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸುನಿಲ್‌ ಕುಮಾರ್‌, ಮಾಜಿ ಶಾಸಕರಾದ ಕೆ. ರಘುಪತಿ ಭಟ್‌, ಲಾಲಾಜಿ ಆರ್‌. ಮೆಂಡನ್‌, ನಾಯಕರಾದ ಮಟ್ಟಾರು ರತ್ನಾಕರ ಹೆಗ್ಡೆ, ಯಶಪಾಲ್‌ ಸುವರ್ಣ, ಗುರ್ಮೆ ಸುರೇಶ ಶೆಟ್ಟಿ, ಗೀತಾಂಜಲಿ ಸುವರ್ಣ, ರವಿ ಅಮೀನ್‌, ಕಪ್ಪೆಟ್ಟು ಪ್ರವೀಣ್‌ ಮೊದ ಲಾದ ವರು ಮಣಿಪಾಲ ಆಸ್ಪತ್ರೆ ಶವಾಗಾರಕ್ಕೆ ಭೇಟಿ ನೀಡಿ ಸಂತಾಪ ಸೂಚಿಸಿದರು.

ಹಿರಿಯ ಮಗಳಿಗೆ ಮದುವೆ ನಿಶ್ಚಯವಾಗಿತ್ತು 
ಶಂಕರ ಆಚಾರ್ಯ ಪಡುಬೆಳ್ಳೆಯಲ್ಲಿ ಸುಮಾರು ವರ್ಷಗಳಿಂದ ಜುವೆಲರಿ ಅಂಗಡಿ ನಡೆಸುತ್ತಿದ್ದರು. ಪುತ್ರಿಯರಿಬ್ಬರೂ ಪ್ರತಿಭಾವಂತರಾಗಿದ್ದು ಅವರ ಹಿರಿಯ ಪುತ್ರಿ ಶ್ರುತಿ ಮೂಡಬಿದಿರೆಯ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮುಗಿಸಿದ್ದರು, ಉದ್ಯೋಗವೂ ದೊರೆತಿತ್ತು. ಈಕೆಗೆ ಚೆನ್ನೈಯಲ್ಲಿ ಉದ್ಯೋಗದಲ್ಲಿರುವ ಯುವಕನೊಂದಿಗೆ ಸೆ. 3ಕ್ಕೆ ಮದುವೆ ನಿಗದಿಯಾಗಿತ್ತು. ಕಿರಿಯ ಪುತ್ರಿ ಶ್ರೀಯಾ ಮಣಿಪಾಲದ ಕಾಲೇಜಿನಲ್ಲಿ ಎಂಸಿಎ ಕಲಿಯಲು ಶುಲ್ಕವನ್ನೂ ಕಟ್ಟಿದ್ದರು ಎಂದು ತಿಳಿದು ಬಂದಿದೆ.

ಚಿನ್ನಾಭರಣ ಮರಳಿಸಿದ್ದ  ಪ್ರಾಮಾಣಿಕ 
ಬದುಕಿನ ಪಯಣ ಮುಗಿಸುವ ಯೋಜನೆ ಇದ್ದಾಗ್ಯೂ ಶಂಕರ ಆಚಾರ್ಯ ಅವರು ಬುಧವಾರದಷ್ಟಕ್ಕೆ ಎಲ್ಲ ಆಭರಣಗಳ ಕೆಲಸ ಪೂರ್ಣಗೊಳಿಸಿ ಅವುಗಳನ್ನು ಸಂಬಂಧಪಟ್ಟ ಗ್ರಾಹಕರಿಗೆ ಮರಳಿಸಿದ್ದರು ಎನ್ನಲಾಗಿದೆ. ಸಾಯುವ ನಿರ್ಧಾರ ತೆಗೆದುಕೊಂಡಿದ್ದರೂ ತನ್ನಿಂದ ಇನ್ನೊಬ್ಬರಿಗೆ ತೊಂದರೆಯಾಗಬಾರದು ಎಂಬ ಕಾಳಜಿ, ಪ್ರಾಮಾಣಿಕತೆ ಅವರಲ್ಲಿ ಇತ್ತು ಎಂದು ಸ್ಥಳೀಯರು ಮಾತಾಡಿಕೊಳ್ಳುತ್ತಿದ್ದಾರೆ.

ಸಾವಿನ ಅರಿವಿಲ್ಲದೇ ಇಹಲೋಕ ತ್ಯಜಿಸಿದರು
ಶಂಕರ ಆಚಾರ್ಯ ಅವರ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳು ಉಣ್ಣುವ ಅನ್ನ ದಲ್ಲೇ ಸಾವು ಇರುವುದನ್ನು ತಿಳಿಯದೇ ಹೋಗಿದ್ದಾರೆ. ಊಟ ಮಾಡುತ್ತಿದ್ದಂತೆ ಅವರ ಪ್ರಾಣಪಕ್ಷಿ ಹಾರಿಹೋಗಿದೆ. ಮನೆಯಲ್ಲಿ ದೋಸೆಗೆಂದು ನೆನೆಸಿಟ್ಟ ಅಕ್ಕಿ ಹಾಗೆಯೇ ಇರುವುದು ಆತ್ಮಹತ್ಯೆಯ ಯೋಜನೆ ಶಂಕರ ಆಚಾರ್ಯ ಅವರದ್ದೇ ಆಗಿರಬಹುದು ಎಂಬುದಕ್ಕೆ ಪುಷ್ಟಿ ನೀಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next