Advertisement

ನಾಲ್ಕು ಗಂಟೆ : ಇದು ರಸ್ತೆಗಳ ಪ್ರೈಮ್‌ ಟೈಮ್‌

11:27 PM Jul 18, 2019 | Team Udayavani |

ಜಯಹೇ… ಜಯಹೇ… ಜಯಹೇ… ಜಯ ಜಯ ಜಯ ಜಯಹೇ… ಎಂದು ದೇಶಭಕ್ತಿ ಗೀತೆ ಮುಗಿಯುವ ವರೆಗೆ ಇರುವೆಲ್ಲ ತಾಳ್ಮೆಯನು ಬಿಗಿ ಹಿಡಿದು ಸೀದಾ ಸಾದಾ ನೇರವಾಗಿ ನಿಂತಿದ್ದವರು ಮುಂದಿನ ‘ಟ್ರೀಂ…’ ಎಂಬ ವಿದ್ಯುತ್‌ಚಾಲಿತ ಗಂಟೆ ಎಂಬ ಸುನಾದ ಸಂಗೀತಕ್ಕೂ ಕಿವಿಗೊಡದೆ, ದಿನಪೂರ್ತಿ ಅದೇ ಕೂಡು-ಕಳೆ-ನಿಯಮ- ಇತಿಹಾಸಗಳನ್ನು ಕೇಳಿ ಬೇಸತ್ತಿದ್ದ ಮಕ್ಕಳು ಮನೆಯೆಡೆಗೆ ಓಟ ಕೀಳುವುದು ಸಹಜ.

Advertisement

ಅದೇ ಸಮಯಕ್ಕೆ ಸರಿಯಾಗಿ ಪಾಲಕರಿಂದ ಆದೇಶವನ್ನು ಪಡೆದಂತಹ ರಿಕ್ಷಾ ಚಾಲಕರು ಮಕ್ಕಳ ಪ್ರೀತಿಯ ರಿಕ್ಷಾ ಮಾಮಂದಿರು ಶಾಲೆಯೆದುರು ತಮ್ಮ ಒಲವಿನ ಪುಟ್ಟ ಪ್ರಯಾಣಿಕರಿಗಾಗಿ ಕಾಯುತ್ತಿರುತ್ತಾರೆ. ಅವರೆಷ್ಟೇ ತಲೆಹರಟೆ ಮಾಡಿದರೂ ಮನಸಿಗೊಂದು ನೆಮ್ಮದಿ, ದೇಹಕ್ಕೆ ಚೈತನ್ಯ ಒದಗಿಸುವ ಸಮಯವದು. ಇಂದಿನ ಈ ಬ್ಯುಸಿ ಜೀವನದಲ್ಲಿ ತಮಗೋಸ್ಕರ ಸಮಯ ಕೊಡುವ ಒಂದು ಜೀವ, ತಮ್ಮವರು ಎನಿಸಿಕೊಳ್ಳುವಷ್ಟು ಸಲಿಗೆಯಿಂದ ವರ್ತಿಸುವ ವ್ಯಕ್ತಿ ಇವರಾಗಿರುತ್ತಾರೆ ಮಕ್ಕಳ ಪಾಲಿಗೆ. ಕೆಲವರು ಇವರೊಂದಿಗೆ ಹರಟಲೆಂದೇ ಬೇಗ ಓಡಿ ಬಂದರೆ, ಇನ್ನು ಕೆಲವರದು ಮನೆ ತಲುಪುವ ಧಾವಂತ, ಮತ್ತೆ ಕೆಲವರದು ಹೊಟ್ಟೆಯ ತಾಳಕ್ಕೆ ತಕ್ಕಂಥ ಓಟವಾಗಿರುತ್ತದೆ. ಇದು ರಿಕ್ಷಾ ಸಂಚಾರಿಗಳ ಕತೆಯಾದರೆ ಬಸ್ಸು ಸವಾರರದು ಬೇರೆಯದೇ ಕಥೆ.

ರಸ್ತೆ ತುಂಬಾ ವಾಹನ. ಅದರೆಡೆಗೆ ಚಿಕ್ಕ ಮಕ್ಕಳು ಅವರಿಗಿಂತಲೂ ಭಾರವಾದ ಬ್ಯಾಗನ್ನು ಹೊತ್ತು ರಸ್ತೆ ದಾಟುತ್ತಾ, ಶಾಲೆ ಬಿಟ್ಟು ಮನೆ ಸೇರುವ ತವಕದಿಂದ ಬಸ್ಸನ್ನು ಹಿಡಿಯಲು ಧಾವಿಸುವುದು, ಬೆಳಗ್ಗೆ ಲೇಟಾಗುತ್ತದೆ ಎಂದು ಅವಸರವಸರದಲ್ಲಿ ಬಸ್ಸು ಹಿಡಿಯಲು ಓಡುವಂಥ ಮಕ್ಕಳನ್ನು ತುಂಬಿಕೊಂಡು ಹೋಗುವುದೇ ಒಂದು ಸಾಹಸ. ‘ದೇವಾ, ‘ಇವತ್ತು ಬಸ್ಸು ಸ್ವಲ್ಪ ತಡವಾಗಿ ಬರಲಪ್ಪ’, ‘ಕ್ಷೇಮವಾಗಿ ಮನೆ ಸೇರುವ ಹಾಗೆ ಮಾಡಪ್ಪ’- ಎಂದು ಮಕ್ಕಳು ಬೇಡಿಕೊಂಡರೆ ಬಸ್ಸು ನಿರ್ವಾಹಕರು ‘ಹಿಂದೆ ಇನ್ನೊಂದು ಬಸ್ಸುಂಟು ಅದ್ರಲ್ಲಿ ಬನ್ನಿ’- ಅಂತ ಕೂಗುತ್ತಾರೆ. ಇದಕ್ಕೆ ಅವರ ಅಸಹಾಯಕತೆಯೇ ಕಾರಣ. ಏನೆಂದರೆ, ಚಿಲ್ಲರೆ ಹಣಕೊಟ್ಟು ಸಂಚರಿಸುವ ಒಂದು ಮಗುವಿಗೆ ಬೇಕಾಗುವ ಜಾಗ ಇಬ್ಬರು ಪೂರ್ತಿ ಟಿಕೇಟು ಖರೀದಿಸಿ ಹೋಗುವವರಿಗೆ ಸಾಕಾಗುವಷ್ಟು. ಹಾಗಿರುವಾಗ ಪೂರ್ತಿ ಮಕ್ಕಳನ್ನೇ ಹತ್ತಿಸಿಕೊಂಡರೆ ಇನ್ನುಳಿದವರನ್ನು ಎಲ್ಲಿ ಹತ್ತಿಸುವುದು? ಎಂಬುದು ನಿರ್ವಾಹಕರ ವಾದ.

ಈ ನಡುವೆ ವಿದ್ಯಾರ್ಥಿಗಳ ನಿರ್ವಹಣೆಗೆ, ನಡೆಯುವ ಅಪಘಾತ ನಿಯಂತ್ರಣಕ್ಕಾಗಿ ಕೆಲವು ವಿದ್ಯಾಮಂದಿರಗಳ ಎದುರು ಆರಕ್ಷಕಾಧಿಕಾರಿಗಳನ್ನು ನಿಗದಿತ ಸಮಯಕ್ಕೆ ನೇಮಿಸಿದರೂ ಅಲ್ಲಿ ಇಲ್ಲಿ ಒಂದೊಂದು ಅಪಘಾತಗಳ ಸುದ್ದಿ ಆಗಾಗ ಕೇಳಿಬರುವುದು ಇನ್ನೂ ನಿಂತಿಲ್ಲ. ವಿದ್ಯಾಲಯಗಳಲ್ಲೇ ಇದೀಗ ರೋಡ್‌ ಸೇಫ್ಟೀ ಕ್ಲಬ್‌ಗಳೂ ಕಾರ್ಯಾಚರಿಸುತ್ತಿದ್ದರೂ ಪೂರ್ಣಪ್ರಮಾಣದಲ್ಲಿ ಅಪಘಾತಗಳು ನಿಯಂತ್ರಣಕ್ಕೆ ಬಂದಿಲ್ಲ. ಎಲ್ಲಾ ವಿದ್ಯಾರ್ಥಿಗಳಲ್ಲೂ ರಸ್ತೆ ಸುರಕ್ಷಾ ನಿಯಮಗಳ ಬಗ್ಗೆ ತಿಳುವಳಿಕೆ ಮೂಡಿಸುವುದರೊಂದಿಗೆ ಪ್ರತೀ ಶಾಲೆಗಳಿಂದಲೂ ಶಾಲಾ ವಾಹನದ ವ್ಯವಸ್ಥೆ ಕಲ್ಪಿಸುವುದರಿಂದ ತಕ್ಕ ಮಟ್ಟಿಗೆ ಹೆಚ್ಚಿನ ಅಪಘಾತ ನಿಯಂತ್ರಣ ಸಾಧ್ಯ.

– ಸೌಮ್ಯಶ್ರೀ ಕಾಸರಗೋಡು
ದ್ವಿತೀಯ ಬಿ. ಎ. ಎಸ್‌ಡಿಎಂ ಕಾಲೇಜು, ಉಜಿರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next