ನವದೆಹಲಿ: ಕರ್ನಾಟಕದ ಎ.ಎಸ್. ಬೋಪಣ್ಣ ಸೇರಿದಂತೆ ನಾಲ್ವರು ಶುಕ್ರವಾರ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್‌ರಿಂದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದರಿಂದ ಸುಪ್ರೀಂಕೋರ್ಟ್ ಸಂಪೂರ್ಣ ಸಾಮರ್ಥ್ಯದಲ್ಲಿ ಕೆಲಸ ಮಾಡುವಂತಾಗಿದ್ದು, ಈಗ ಒಟ್ಟು 31 ನ್ಯಾಯಾಧೀಶರು ಕೆಲಸ ಮಾಡುತ್ತಿದ್ದಾರೆ. ಶುಕ್ರವಾರ ನ್ಯಾಯಮೂರ್ತಿ ಬಿ.ಆರ್.ಗವಾಯಿ, ಸೂರ್ಯಕಾಂತ್, ಅನಿರುದ್ಧ ಬೋಸ್ ಮತ್ತು ಎ.ಎಸ್.ಬೋಪಣ್ಣ ಅವರು ಪ್ರಮಾಣ ವಚನ ಸ್ವೀಕರಿಸಿದ್ದು, ಈ ವೇಳೆ ಸುಪ್ರೀಂಕೋರ್ಟ್‌ನ ಇತರ ನ್ಯಾಯಧೀಶರೂ ಹಾಜರಿದ್ದರು.
ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿರುವ ಬೋಪಣ್ಣ, ಹಿರಿತನದ ಆಧಾರದಲ್ಲಿ 2025 ರಲ್ಲಿ ಕೇವಲ ಆರು ತಿಂಗಳವರೆಗೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಲಿದ್ದಾರೆ. ಅಷ್ಟೇ ಅಲ್ಲ, ಕೆ.ಜಿ.ಬಾಲಕೃಷ್ಣನ್ ನಂತರದಲ್ಲಿ ಎರಡನೇ ಬಾರಿಗೆ ಪರಿಶಿಷ್ಟ ಜಾತಿಯ ಸಿಜೆಐ ಆಗಲಿದ್ದಾರೆ.
Advertisement
2008 ರಲ್ಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸಿದ ನಂತರ ಇದೇ ಮೊದಲ ಬಾರಿಗೆ ಸುಪ್ರೀಂಕೋರ್ಟ್‌ನಲ್ಲಿ ಎಲ್ಲ ಹುದ್ದೆಗಳನ್ನೂ ಭರ್ತಿ ಮಾಡಿದಂತಾಗಿದೆ. 2008 ರಲ್ಲಿ ನ್ಯಾಯಮೂರ್ತಿಗಳ ಸಂಖ್ಯೆಯನ‌್ನು 26 ರಿಂದ 31ಕ್ಕೆ ಹೆಚ್ಚಿಸಲಾಗಿತ್ತು. ಈ ಹಿಂದೆ ಬೋಪಣ್ಣ ಹಾಗೂ ಬೋಸ್ ಅವರನ್ನು ಕೊಲಿಜಿಯಂ ಶಿಫಾರಸು ಮಾಡಿದ್ದನ್ನು ಕೇಂದ್ರ ಸರ್ಕಾರ ಪ್ರಶ್ನಿಸಿ ವಾಪಸ್ ಕಳುಹಿಸಿತ್ತಾದರೂ ಕೊಲಿಜಿಯಂ ಇದಕ್ಕೆ ಸ್ಪಷ್ಟನೆ ನೀಡಿದ್ದರಿಂದ ಅನುಮೋದನೆ ನೀಡಿದೆ.