ದೊಡ್ಡಬಳ್ಳಾಪುರ: ಕೋಳಿಫಾರಂ ಒಂದರಲ್ಲಿ ಕೆಲಸ ಮಾಡುತ್ತಿದ್ದ ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಹೊಲೆಯರಹಳ್ಳಿ ಬಳಿ ಸಂಭವಿಸಿದೆ.
ನೇಪಾಲ ಮೂಲದ ಕಾಲೇ ಸರೇರಾ (60), ಲಕ್ಷ್ಮೀ ಸರೇರಾ (50), ಉಷಾ ಸರೇರಾ (40) ಹಾಗೂ ಪೂಲ್ಸರೇರಾ (16 ) ಮೃತರು.
ಗ್ರಾಮದ ಕೋಳಿ ಫಾರಂಗೆ 8 ದಿನಗಳ ಹಿಂದೆಯಷ್ಟೇ ಈ ಕುಟುಂಬ ಬಂದಿದ್ದು, ರಾತ್ರಿ ಶೆಡ್ ಬಾಗಿಲು ಹಾಕಿಕೊಂಡು ಮಲಗಿದ್ದರು. ರವಿವಾರ ಬೆಳಗ್ಗೆ ಫಾರಂ ಮಾಲಕ ಕರೆ ಮಾಡಿದಾಗ ಕರೆ ಸ್ವೀಕರಿದೆ ಇದ್ದು, ಅನುಮಾನಗೊಂಡ ಅವರು ಸಮೀಪದಲ್ಲಿದ್ದವರಿಗೆ ವಿಷಯ ತಿಳಿಸಿದರು. ಅವರು ಬಂದು ನೋಡಿದಾಗ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಉಸಿರುಗಟ್ಟಿ ಸಾವು ಶಂಕೆ
ಈ ಕುಟುಂಬವು ಕೋಳಿಫಾರಂನಲ್ಲಿ ಸೊಳ್ಳೆ ನಿಯಂತ್ರಣಕ್ಕೆಂದು ಇದ್ದಿಲಿನಿಂದ ಹೊಗೆ ಹಾಕಿ ಕಿಟಕಿ ಬಾಗಿಲು ಮುಚ್ಚಿಕೊಂಡು ಮಲಗಿತ್ತು. ಕೋಣೆ ತುಂಬಾ ಹೊಗೆ ತುಂಬಿ ಆಮ್ಲಜನಕದ ಕೊರತೆಯಿಂದ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.