Advertisement

Rameshwaram Cafe Case: ಮತ್ತೆ ನಾಲ್ಕು ಫೋಟೋ ಬಿಡುಗಡೆ: ಬೆನ್ನು ಬಿದ್ದ ಎನ್‌ಐಎ

12:25 AM Mar 10, 2024 | Team Udayavani |

ಬೆಂಗಳೂರು: ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಅಧಿಕಾರಿಗಳು ಶಂಕಿತ ವ್ಯಕ್ತಿಯ ಮತ್ತಷ್ಟು ಫೋಟೋ ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಸಾರ್ವಜನಿಕರ ಸಹಕಾರ ಕೋರಿದ್ದಾರೆ.

Advertisement

ಶಂಕಿತ ಓಡಾಡಿರುವ ಸ್ಥಳದ ಬಗ್ಗೆ ಮಾಹಿತಿ ಸಂಗ್ರಹಿಸಿ ಅಲ್ಲಿನ ಸಿಸಿ ಕೆಮರಾಗಳಲ್ಲಿ ಸೆರೆಯಾದ ದೃಶ್ಯಗಳನ್ನು ಆಧರಿಸಿ ವಿವಿಧ ಭಂಗಿಯ ನಾಲ್ಕು ಫೋಟೋಗಳನ್ನು ಎನ್‌ಐಎ ತನ್ನ ಎಕ್ಸ್‌ ಖಾತೆಯಲ್ಲಿ ಬಿಡುಗಡೆ ಮಾಡಿದೆ. ಈ ಫೋಟೋಗಳಲ್ಲಿ ಶಂಕಿತ ವ್ಯಕ್ತಿಯ ಮುಖಚಹರೆ ಸ್ಪಷ್ಟವಾಗಿ ಕಾಣುತ್ತಿದೆ. ಈ ಕುರಿತು ಸಾರ್ವಜನಿಕ ಪ್ರಕಟನೆ ಹೊರಡಿಸಿರುವ ಎನ್‌ಐಎ, ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದೆ. ಶಂಕಿತನ ಸುಳಿವು ಲಭಿಸಿದ ಕೂಡಲೇ 080- 29510900, 8904241100 ಹಾಗೂ ಇಮೇಲ್‌ ವಿಳಾಸ  info.blr.nia@gov.in ಗೆ ಮಾಹಿತಿ ನೀಡಬಹುದು ಎಂದು ಅಧಿಕಾರಿ ಗಳು ತಿಳಿಸಿದ್ದಾರೆ.

ಶಂಕಿತ ಆರೋಪಿ ಮಾ.1ರಂದು ಮಧ್ಯಾಹ್ನ ಬಿಎಂಟಿಸಿ ಬಸ್‌ನಲ್ಲಿ ಓಡಾಟ ಮತ್ತು ಅದೇ ದಿನ ರಾತ್ರಿ 9 ಗಂಟೆಗೆ ಬಳ್ಳಾರಿಯ ಬಸ್‌ ನಿಲ್ದಾಣದಲ್ಲಿ ಓಡಾಡಿರುವ ಎರಡು ವೀಡಿಯೋಗಳನ್ನು ಶುಕ್ರವಾರ ಎನ್‌ಐಎ ಬಿಡುಗಡೆ ಮಾಡಿತ್ತು. ಬಳಿಕ ಶಂಕಿತ ಬಳ್ಳಾರಿಯಲ್ಲೇ ವಿವಿಧೆಡೆ ಸಂಚರಿಸಿರುವ ದೃಶ್ಯಗಳನ್ನು ಎನ್‌ಐಎ ವೈರಲ್‌ ಮಾಡಿದೆ.

ಕರಾವಳಿಯಲ್ಲೂ ಹುಡುಕಾಟ
ಮತ್ತೂಂದೆಡೆ ಶಂಕಿತ ವ್ಯಕ್ತಿ ಬಳ್ಳಾರಿಯಿಂದ ಭಟ್ಕಳ ಮತ್ತು ಬಂಟ್ವಾಳ ಮಾರ್ಗವಾಗಿ ಕಡಲ ತೀರದ ಪ್ರದೇಶಗಳಿಗೆ ತೆರಳಿ ರುವ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆ ಯಲ್ಲಿ ಶಂಕಿತನಿಗಾಗಿ ಎನ್‌ಐಎ ಅಧಿಕಾರಿಗಳು ರಾಜ್ಯದ ಕಡಲ ತೀರದಲ್ಲಿ ತೀವ್ರ ಶೋಧ ನಡೆಸು ತ್ತಿದ್ದಾರೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಮಂಗಳೂರು ಪೊಲೀಸರು ಎನ್‌ಐಎ ಅಧಿಕಾರಿಗಳ ಜತೆ ಹುಡುಕಾಟ ನಡೆಸುತ್ತಿದ್ದಾರೆ. ಸ್ಫೋಟದ ಬಳಿಕ ಅಧಿಕಾರಿಗಳು ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕದ ಬಳ್ಳಾರಿಯಲ್ಲಿ ಕೆಲವು ಶಂಕಿತರನ್ನು ವಿಚಾರಣೆಗೆ ಒಳಪಡಿಸಿ ದರೂ ಶಂಕಿತನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ತನಿಖೆ ಮತ್ತು ಕೆಲವರ ವಿಚಾರಣೆ ಸಂದರ್ಭದಲ್ಲಿ ಶಂಕಿತ ಸಮುದ್ರದ ಮೂಲಕ ಪರಾರಿಯಾಗಿರಬಹುದು ಎಂಬ ಶಂಕೆಯಲ್ಲಿ ಕರಾವಳಿ ರಕ್ಷಣ ಪಡೆಗಳಿಗೆ ಮಾಹಿತಿ ನೀಡಲಾಗಿದೆ. ಶಂಕಿತರು ಅಥವಾ ಹೊಸದಾಗಿ ಬರುವ ವ್ಯಕ್ತಿಗಳಬಗ್ಗೆ ನಿಗಾ ವಹಿಸುವಂತೆ ಎನ್‌ಐಎ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next