Advertisement

ದಲಿತ ಮಕ್ಕಳಿಗೆ ನಾಲ್ಕು ಸೈನಿಕ ಶಾಲೆ: ಗೋವಿಂದ ಕಾರಜೋಳ

09:51 PM Feb 03, 2021 | Team Udayavani |

ಬೆಂಗಳೂರು: ಎಸ್ಸಿ, ಎಸ್ಟಿ ಸಮುದಾಯದ ಮಕ್ಕಳಿಗೆ ರಾಜ್ಯದಲ್ಲಿ ನಾಲ್ಕು ಸೈನಿಕ ವಸತಿ ಶಾಲೆಗಳನ್ನು ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ  ತಿಳಿಸಿದ್ದಾರೆ.

Advertisement

ಪ್ರಶ್ನೋತ್ತರ ವೇಳೆಯಲ್ಲಿ ಎಸ್‌ಸಿಪಿ-ಟಿಎಸ್‌ಪಿ ಯೋಜನೆಯ ಅನುದಾನಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಸದಸ್ಯ ಅರವಿಂದ ಕುಮಾರ್‌ ಅರಳಿ ಪ್ರಶ್ನೆಗೆ ಉತ್ತರಿಸಿ, ವಿಜಯಪುರ ಹಾಗೂ ಮಡಿಕೇರಿಯಲ್ಲಿರುವ ಸೈನಿಕ ಶಾಲೆಗಳ ಮಾದರಿಯಲ್ಲಿ ಎಸ್ಸಿ, ಎಸ್ಟಿ ಸಮುದಾಯದ ಮಕ್ಕಳಿಗೆ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ತಲಾ ಒಂದೊಂದು ಸೈನಿಕ ವಸತಿ ಶಾಲೆ ಸ್ಥಾಪಿಸುವ ಚಿಂತನೆಯಿದೆ ಎಂದರು.

ಅನುದಾನ ಮತ್ತು ಭೂಮಿ ರಾಜ್ಯ ಸರ್ಕಾರದ್ದು. ಶೇ.50ರಷ್ಟು ಕರ್ನಾಟಕದ ಎಸ್ಸಿ, ಎಸ್ಟಿ ಮಕ್ಕಳಿಗೆ ಪ್ರವೇಶ ನೀಡಬೇಕು. ಉಳಿದಂತೆ ಅವರ ನಿಯಮಗಳ ಪ್ರಕಾರ ಪ್ರವೇಶಾವಕಾಶಗಳನ್ನು ಕೊಡಬಹುದು. ಈ ಬಗ್ಗೆ ಮಿಲಿಟರಿಯರವನ್ನು ಸಂಪರ್ಕ ಮಾಡುತ್ತೇವೆ ಎಂದರು.

ಇದನ್ನೂ ಓದಿ:ತಲಕಾವೇರಿಯಲ್ಲಿ ಪ್ರವಾಸಿಗರ ಉಪಟಳ ತಡೆಗೆ ಕ್ರಮ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ

ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮೀಸಲಿಟ್ಟ ಶೇ.24ರಷ್ಟು ಎಸ್‌ಸಿಪಿ, ಟಿಎಸ್‌ಪಿ ಅನುದಾನ ದುರ್ಬಳಕೆ ಆಗಬಾರದು. ಅಂದಾಜು 29 ಸಾವಿರ ಕೋಟಿ ರೂ. ಹಣ ಇದೆ. ಈ ಅನುದಾನವನ್ನು ಹೆಚ್ಚಾಗಿ ಚರಂಡಿ, ರಸ್ತೆಗಳಿಗೆ ಬಳಕೆಯಾಗುತ್ತಿದೆ. ಇದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ನಾನು ಬಂದ ಮೇಲೆ ಈ ಹಣದಲ್ಲಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದೇನೆ. ತಲಾ 20-25 ಕೋಟಿ ರೂ. ವೆಚ್ಚದಲ್ಲಿ 173 ವಸತಿ ಶಾಲೆಗಳ ಸಂಕೀರ್ಣ ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ಈಗಾಗಲೇ 68 ಸಂಕೀರ್ಣ ಗಳು ಸ್ವಾಧೀನಾನುಭವಕ್ಕೆ ಸಿದ್ಧಗೊಂಡಿವೆ ಎಂದು ಹೇಳಿದರು.

Advertisement

ಬಿಜೆಪಿ ಸದಸ್ಯ ಎಚ್‌. ವಿಶ್ವನಾಥ್‌, 2014ರಲ್ಲಿ ಕಾಯ್ದೆ ತಂದು ಸಿದ್ದರಾಮಯ್ಯನವರು ಹಣ ಕೊಟ್ಟರು. ಆದರೆ, ಯೋಜನೆಗಳನ್ನು ನೀಡಿಲ್ಲ. ಈಗಿನ ಸಚಿವರು ಯೋಜನೆಗಳನ್ನು ಹೇಳುತ್ತಿದ್ದಾರೆ. ಕಾಯ್ದೆ ಬಹಳ ಸ್ಪಷ್ಟವಾಗಿದೆ. ಆದರೆ, ಕಾರ್ಯಕ್ರಮಗಳೇ ಇಲ್ಲವೆಂದರೆ ಕಾಯ್ದೆ ಇದ್ದರೇನು? ಹಣ ಕೊಟ್ಟರೇನು? ಈವರೆಗೆ 1 ಲಕ್ಷ ಕೋಟಿ ರೂ. ಹಣ ಹರಿದು ಹೋಗಿದೆ. ದಲಿತ ಸಮುದಾಯದ ಶಾಸಕರಿಗೆ ಇದೆಲ್ಲ ಗೊತ್ತಾಗುವುದಿಲ್ಲವೇ? ಅವರಿಗೆ ತಿಳಿವಳಿಕೆ ಇಲ್ಲವೇ? ಅವರನ್ನು ಕರೆದು ಸಭೆಗಳನ್ನು ನಡೆಸಬಹುದಿತ್ತಲ್ಲ ಎಂದರು. ದಲಿತ ಮಕ್ಕಳಿಗೆ ಸೈನಿಕ ಶಾಲೆ ಸ್ಥಾಪಿಸುವ ಉಪಮುಖ್ಯಮಂತ್ರಿಗಳ ಚಿಂತನೆಗೆ ಪ್ರತಿಪಕ್ಷ ನಾಯಕ ಎಸ್‌.ಆರ್‌. ಪಾಟೀಲ್‌ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next