ಬೆಂಗಳೂರು: ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ಯಾಲೆಸ್ ಗುಟ್ಟಹಳ್ಳಿಯ ಸಾಮ್ರಾಟ್ ಜ್ಯುವೆಲ್ಲರಿ ಶಾಪ್‌ಗೆ ಬುಧವಾರದಂದು ಗ್ರಾಹಕರ ಸೋಗಿನಲ್ಲಿ ನುಗ್ಗಿ ಪಿಸ್ತೂಲ್ನಿಂದ ಗುಂಡು ಹಾರಿಸಿ ದರೋಡೆಗೆ ಯತ್ನಿಸಿದ್ದ ನಾಲ್ವರು ದರೋಡೆಕೋರರು ನಗರದ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಮಹಾರಾಷ್ಟ್ರದ ಸೊಲ್ಲಾಪುರದ ಬಾಲಾಜಿ ರಮೇಶ್ ಗಾಯಕ್‌ವಾಡ್ (25), ರಾಜಸ್ಥಾನದ ಶ್ರೀರಾಮ ಬಿಶ್ನೋಯಿ (23), ಓಂಪ್ರಕಾಶ್ (27) ಮತ್ತು ಹರಿಯಾಣದ ಬಲವಾನ್ ಸಿಂಗ್ (24) ಬಂಧಿತರು. ಘಟನೆ ನಡೆದ 24 ಗಂಟೆಗಳ ಒಳಗೇ ದರೋಡೆಕೋರರನ್ನು ಬಂಧಿಸಿರುವ ಪೊಲೀಸರು, ಬಂಧಿತರಿಂದ ಎರಡು ನಾಡ ಪಿಸ್ತೂಲ್, ಎರಡು ಜೀವಂತ ಗುಂಡು ಹಾಗೂ ಮೂರು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ಇದುವರೆಗೂ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಜತೆಗೆ ನಾಡ ಪಿಸ್ತೂಲ್ಗಳನ್ನು ಎಲ್ಲಿಂದ ಖರೀದಿಸಲಾಗಿದೆ ಎಂಬುದು ತಿಳಿದಿಲ್ಲ. ಹೀಗಾಗಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ.
ದರೋಡೆಗೆ ಯತ್ನಿಸಿ ಪರಾರಿಯಾದ ಆರೋಪಿಗಳು ಬಿಟ್ಟು ಹೋಗಿದ್ದ ಕೆಲ ಸಾಕ್ಷ್ಯಗಳ ಜಾಡು ಹಿಡಿದು ಸಿಸಿಬಿ ಪೊಲೀಸರು, ವೈಯಾಲಿಕಾವಲ್, ಸದಾಶಿವನಗರ, ಶೇಷಾದ್ರಿಪುರ ಠಾಣಾಧಿಕಾರಿಗಳ ನೇತೃತ್ವದ ವಿಶೇಷ ತಂಡ ಕೆ.ಆರ್.ಪುರದ ಡಿವಿಜಿ ಬಡಾವಣೆಯ ವಿನಾಯಕನಗರದಲ್ಲಿ ದರೋಡೆಕೋರರನ್ನು ಬಂಧಿಸಿದೆ. ಆರೋಪಿಗಳ ಪೈಕಿ ಬಾಲಾಜಿ ಚಿನ್ನಾಭರಣ ಕೆಲಸ ಮಾಡುತ್ತಿದ್ದು, ಶ್ರೀರಾಮ ಬಿಶ್ನೋಯಿ ಮತ್ತು ಓಂಪ್ರಕಾಶ್ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದಾರೆ. ಬಲವಾನ್ ಸಿಂಗ್ ನಿರುದ್ಯೋಗಿಯಾಗಿ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೊಬೈಲ್ನಿಂದ ಸಿಕ್ಕ ಸುಳಿವು: ಒಂದು ವರ್ಷದಿಂದ ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದ ಆರೋಪಿಗಳು, ದರೋಡೆ ಮಾಡಲು ಕೆಲ ತಿಂಗಳ ಹಿಂದೆಯೇ ಸಂಚು ರೂಪಿಸಿದ್ದರು. ಅದಕ್ಕಾಗಿ ಎರಡು ಬೈಕ್‌ಗಳನ್ನು ಕಳವು ಮಾಡಿದ್ದರು. ಅಲ್ಲದೆ, ಹದಿನೈದು ದಿನಗಳ ಹಿಂದೆ ವೈಯಾಲಿಕಾವಲ್ನ ಕೆಲ ಪ್ರದೇಶಗಳಲ್ಲಿ ಸುತ್ತಾಡಿ ಚಿನ್ನಾಭರಣ ಅಂಗಡಿಗಳ ಸಿಬ್ಬಂದಿಯ ಚಲನವಲನಗಳ ಮಾಹಿತಿ ಪಡೆದುಕೊಂಡಿದ್ದರು. ಸಾಮ್ರಾಟ್ ಚಿನ್ನಾಭರಣ ಮಳಿಗೆಯಲ್ಲಿ ದಂಪತಿ ಮಾತ್ರ ಇರುತ್ತಿದ್ದುದನ್ನು ಗಮನಿಸಿದ್ದ ಆರೋಪಿಗಳು, ಮಳಿಗೆ ದರೋಡೆಗೆ ಸಂಚು ರೂಪಿಸಿದ್ದರು. ಮಂಗಳವಾರವೂ ಸ್ಥಳಕ್ಕೆ ಬಂದು ಪರಿಶೀಲಿಸಿದ್ದರು. ಬುಧವಾರ ಬೆಳಗ್ಗೆಯೇ ಅಂಗಡಿ ಬಳಿ ಬಂದ ಆರೋಪಿಗಳು ದಂಪತಿಯ ಕಾರ್ಯಾಚಟುವಟಿಕೆಗಳ ಮೇಲೆ ನಿಗಾವಹಿಸಿ, ಮಧ್ಯಾಹ್ನ 2.40ರ ಸುಮಾರಿಗೆ ಗ್ರಾಹಕರ ಸೋಗಿನಲ್ಲಿ ಏಕಾಏಕಿ ಅಂಗಡಿಗೆ ನುಗ್ಗಿ ದರೋಡೆಗೆ ಯತ್ನಿಸಿದ್ದರು. ಆದರೆ, ದಂಪತಿ ಪ್ರತಿರೋಧ ತೋರಿದ್ದರಿಂದ ಪರಾರಿಯಾಗಿದ್ದರು.
ಗಾಬರಿಯಿಂದ ಓಡುವಾಗ ಮೊಬೈಲ್, ಬೈಕ್ ಮತ್ತು ಹೆಲ್ಮೆಟ್‌ಗಳನ್ನು ಬಿಟ್ಟು ಹೋಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಮೊಬೈಲ್ ವಶಕ್ಕೆ ಪಡೆದು, ಕರೆಗಳ ಮಾಹಿತಿ, ಜ್ಯುವೆಲ್ಲರಿ ಮಳಿಗೆಯಲ್ಲಿದ್ದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಗಳ ಮುಖಚಹರೆ ಪತ್ತೆಯಾಗಿತ್ತು. ತಾಂತ್ರಿಕ ತನಿಖೆ ಮೂಲಕ ಆರೋಪಿಗಳು ಕೆ.ಆರ್.ಪುರದ ಶೆಡ್ ಒಂದರಲ್ಲಿ ಅವಿತು ಕುಳಿತಿರುವುದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಸಿಸಿಬಿ ಹಾಗೂ ಸ್ಥಳೀಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಆಯುಕ್ತರು ಹೇಳಿದರು.
ರೈಲಿನಲ್ಲಿ ಪರಾರಿಯಾಗುತ್ತಿದ್ದರು: ದರೋಡೆ ಯತ್ನ ಸುದ್ದಿ ಎಲ್ಲೆಡೆ ಹರಡುತ್ತಿದ್ದಂತೆ ಆರೋಪಿಗಳು ಬುಧವಾರ ತಡರಾತ್ರಿವರೆಗೂ ಕೆ.ಆರ್.ಪುರದಲ್ಲಿ ಕಾಲ ಕಳೆದು ನಂತರ ರೈಲು ಮೂಲಕ ಮಹಾರಾಷ್ಟ್ರ ಅಥವಾ ರಾಜಸ್ಥಾನಕ್ಕೆ ಪರಾರಿಯಾಗಲು ಸಿದ್ಧತೆ ನಡೆಸಿದರು. ಅಷ್ಟರಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ನಾಡ ಪಿಸ್ತೂಲ್ ಹೇಗೆ ಬಂತು?: ಆರೋಪಿಗಳು ಕೃತ್ಯ ಎಸಗಲೆಂದೆ ರಾಜಸ್ಥಾನ, ಹರಿಯಾಣ ಅಥವಾ ಮಹಾರಾಷ್ಟ್ರದಿಂದ ನಾಡ ಪಿಸ್ತೂಲ್ ಖರೀದಿ ಮಾಡಿರುವ ಸಾಧ್ಯತೆಯಿದೆ. ಆದರೆ, ಎಲ್ಲಿಂದ, ಯಾರಿಂದ ಖರೀದಿ ಮಾಡಲಾಗಿದೆ ಎಂಬ ಬಗ್ಗೆ ಬಂಧಿತರು ಬಾಯಿ ಬಿಡುತ್ತಿಲ್ಲ. ಹೀಗಾಗಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಹೇಳಿದರು.