Advertisement

ಮೇಜರ್‌, ಮೂವರು ಯೋಧರು ಹುತಾತ್ಮ

04:45 AM Aug 08, 2018 | Team Udayavani |

ಶ್ರೀನಗರ: ಕಳೆದ ಒಂದು ವಾರದಿಂದ ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳ ನಿರಂತರವಾಗಿ ನಡೆಯುತ್ತಿದ್ದು, ಮಂಗಳವಾರ ನುಸುಳುಕೋರ ಉಗ್ರರ ಗುಂಡಿಗೆ ಸೇನೆಯ ಮೇಜರ್‌ ಮತ್ತು ಮೂವರು ಯೋಧರು ಹುತಾತ್ಮರಾಗಿದ್ದಾರೆ. ಗುರೇಜ್‌ ವಲಯದಲ್ಲಿ ನಡೆದ ಕಾರ್ಯಾಚರಣೆ ವೇಳೆ ಈ ಘಟನೆ ನಡೆದಿದ್ದು, ಇಬ್ಬರು ಉಗ್ರವಾದಿಗಳನ್ನು ಹೊಡೆದುರುಳಿಸುವಲ್ಲಿ ಸೇನೆ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಬಂಡಿಪೋರಾ ಜಿಲ್ಲೆಯ ಗೋವಿಂದ ನಲ್ಹಾ ಎಂಬಲ್ಲಿ ಉಗ್ರರು ನುಸುಳಿಬರುತ್ತಿರುವ ಬಗ್ಗೆ ಮಾಹಿತಿ ಸಿಕ್ಕದ ಬೆನ್ನಲ್ಲೇ ಯೋಧರು ಕಾರ್ಯಾಚರಣೆಗೆ ಇಳಿದಿದ್ದರು. ಈ ವೇಳೆ ಎರಡೂ ಕಡೆ ಗುಂಡಿನ ಚಕಮಕಿ ನಡೆದಿದ್ದು, ಮೇಜರ್‌ ಕೆ. ಪ್ರಕಾಶ್‌ ಕುಮಾರ್‌ ರಾಣೆ (29), ಹಮೀರ್‌ ಸಿಂಗ್‌ (28) ಮತ್ತು ವಿಕ್ರಂಜೀತ್‌ ಸಿಂಗ್‌ (25), ರೈಫ‌ಲ್‌ವುನ್‌ ಮನ್‌ದೀಪ್‌ ಸಿಂಗ್‌ (26) ಅಸುನೀಗಿದ್ದಾರೆ. ಉಗ್ರರು ಎತ್ತರದ ಪ್ರದೇಶದಲ್ಲಿದ್ದು, ಸೈನಿಕರು ಅತ್ತ ಹೋಗುತ್ತಿದ್ದಾಗ ಕತ್ತಲಿನಲ್ಲಿ ಅಡಗಿ ಕುಳಿತು ಗುಂಡಿನ ದಾಳಿ ನಡೆಸಿದ್ದರು ಎಂದು ಸೇನಾ ಮೂಲಗಳು ತಿಳಿಸಿವೆ.


ಎಂಟು ಮಂದಿ ತಂಡ

ಪ್ರಾಥಮಿಕ ಮಾಹಿತಿಯಂತೆ ಎಂಟು ಮಂದಿ ಉಗ್ರರ ತಂಡ ಒಳನುಸುಳುವ ಪ್ರಯತ್ನ ನಡೆಸಿತ್ತು. ಆದರೆ ಅವರಲ್ಲಿ ನಾಲ್ಕು ಮಂದಿ ವಾಪಸ್‌ ಆಗಿದ್ದು, ಇಬ್ಬರನ್ನು ಹೊಡೆದುರುಳಿಸಲಾಗಿದೆ. ಇನ್ನಿಬ್ಬರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಲ ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ವಿಕ್ರಂಜೀತ್‌
ವಿಕ್ರಂಜೀತ್‌ ಸಿಂಗ್‌ ಅವರಿಗೆ ಕೆಲವೇ ತಿಂಗಳ ಹಿಂದಷ್ಟೇ ಮದುವೆಯಾಗಿತ್ತು. ವಿಕ್ರಂಜೀತ್‌ ಅವರು ಹರ್ಯಾಣದ ಅಂಬಲಾದ ತೆಪ್ಲಾ ಗ್ರಾಮದವರು. ಅವರ ಅಣ್ಣ ಕೂಡ ಸೇನೆ ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮನ್‌ದೀಪ್‌ ಸಿಂಗ್‌ ರಾವತ್‌ ಮತ್ತು ಹಮೀರ್‌ ಸಿಂಗ್‌ ಉತ್ತರಾಖಂಡದವರಾಗಿದ್ದಾರೆ. 29ರ ಹರೆಯದ ಮೇಜರ್‌ ರಾಣೆ ಅವರು ಮಹಾರಾಷ್ಟ್ರದ ಥಾಣೆಯ ಭಾಯಂದರ್‌ನ ಶೀತಲ್‌ ನಗರದವರು. ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಇಡೀ ತಂಡವನ್ನು ಮುನ್ನಡೆಸಿದ್ದರು. ರಾಣೆ ಅವರು ತಂದೆ-ತಾಯಿ, ಪತ್ನಿ ಮತ್ತು ಎರಡೂವರೆ ವರ್ಷದ ಮಗುವನ್ನು ಅಗಲಿದ್ದಾರೆ.   

ವರ್ಷದಲ್ಲಿ ನುಸುಳಿದ್ದು 69 ಉಗ್ರರು
ಜೂನ್‌ ತಿಂಗಳವರೆಗಿನ ಮಾಹಿತಿಯಂತೆ ಒಟ್ಟು 69 ಉಗ್ರರು ಜಮ್ಮು – ಕಾಶ್ಮೀರದ ಗಡಿಯಲ್ಲಿ ನುಸುಳಿದ್ದಾರೆ ಎಂದು ಸರಕಾರ ಮಂಗಳವಾರ ಲೋಕಸಭೆಗೆ ತಿಳಿಸಿದೆ. ಈ ವರ್ಷಾವಧಿಯಲ್ಲಿ 133 ಬಾರಿ ಉಗ್ರರು ದೇಶದೊಳಕ್ಕೆ ನುಸುಳುವ ಯತ್ನ ನಡೆಸಿದ್ದಾರೆ. ಅವರಲ್ಲಿ 50 ಮಂದಿ ವಾಪಸ್‌ ಆಗಿದ್ದು, 14 ಮಂದಿಯನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿಸಿದ್ದಾರೆ. 69 ಉಗ್ರರು ನುಸುಳಿರುವ ಬಗ್ಗೆ ಮಾಹಿತಿ ಇದೆ ಎಂದು ಗೃಹ ಖಾತೆ ಸಹಾಯಕ ಸಚಿವ ಹಂಸರಾಜ್‌ ಅಹಿರ್‌ ಅವರು ತಿಳಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next