ಬೆಂಗಳೂರು: ಬಿಬಿಎಂಪಿ ಮೇಯರ್, ಉಪಮೇಯರ್ ಆಯ್ಕೆಗೆ ಬಿಜೆಪಿ ನಾಯಕರು ಸೋಮವಾರ ರಾತ್ರಿ ಸುಮಾರು ನಾಲ್ಕು ಗಂಟೆ ಕಾಲ ಕಸರತ್ತು ನಡೆಸಿ ಅಭ್ಯರ್ಥಿಗಳನ್ನು ಅಂತಿಮ ಗೊಳಿಸಿದರೂ ಮಂಗಳವಾರ ಬೆಳಗ್ಗೆ ಕೊನೆ ಕ್ಷಣದಲ್ಲಿ ಉಪಮೇಯರ್ ಅಭ್ಯರ್ಥಿ ಬದಲಾಗಿದ್ದರು. ಮೇಯರ್, ಉಪಮೇಯರ್ ಆಯ್ಕೆ ಸಂಬಂಧ ಸೋಮವಾರ ರಾತ್ರಿ 9.30ಕ್ಕೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಭೆ ಆರಂಭವಾಯಿತು.
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಸಚಿವ ಆರ್.ಅಶೋಕ್, ನಗರದ ಬಿಜೆಪಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ನಗರ ಬಿಜೆಪಿ ಅಧ್ಯಕ್ಷ ಪಿ.ಎನ್.ಸದಾಶಿವ, ನಗರ ಜಿಲ್ಲೆ ಬಿಜೆಪಿ ಅಧ್ಯಕ್ಷ ಮುನಿರಾಜು ಪಾಲ್ಗೊಂಡಿದ್ದರು. ಮೇಯರ್ ಸ್ಥಾನಕ್ಕೆ ಪದ್ಮನಾಭರೆಡ್ಡಿ, ಎಲ್. ಶ್ರೀನಿವಾಸ್, ಮುನೀಂದ್ರ ಕುಮಾರ್, ಉಮೇಶ್ ಶೆಟ್ಟಿ, ಗೌತಮ್ ಕುಮಾರ್, ಮಂಜುನಾಥರಾಜು ಆಕಾಂಕ್ಷಿಗಳಾಗಿದ್ದರು. ಸಭೆಯಲ್ಲಿ ಮೊದಲಿಗೆ ಸಚಿವರಿರುವ ಕ್ಷೇತ್ರಗಳಿಗೆ ಮೇಯರ್ ಸ್ಥಾನ ಬೇಡಎಂಬ ವಿಚಾರ ಚರ್ಚೆಯಾಯಿತು. ಅದರಂತೆ ಎಲ್.ಶ್ರೀನಿವಾಸ್, ಮಂಜುನಾಥರಾಜು ಅವರಿಗೆ ಅವಕಾಶವಿಲ್ಲದಾಯಿತು. ಮುನೀಂದ್ರ ಕುಮಾರ್ ಹೆಸರು ಪ್ರಸ್ತಾಪವಾದರೂ ಆಯ್ಕೆಯಾಗಲಿಲ್ಲ ಎಂದು ಸಭೆಯಲ್ಲಿದ್ದವರೊಬ್ಬರು ತಿಳಿಸಿದರು.
ಆಗ ಪದ್ಮನಾಭರೆಡ್ಡಿ, ಗೌತಮ್ ಕುಮಾರ್ ನಡುವೆ ಸ್ಪರ್ಧೆ ಏರ್ಪಟ್ಟಿತ್ತು.ಬಳಿಕ ನಡೆದ ಚರ್ಚೆಯಲ್ಲಿ ಗೌತಮ್ ಕುಮಾರ್ ಹೆಸರನ್ನು ಮೇಯರ್ ಸ್ಥಾನಕ್ಕೆ ಸೂಚಿಸಲಾಯಿತು. ಕಳೆದ ನಾಲ್ಕು ವರ್ಷ ಸತತವಾಗಿ ಪ್ರತಿಪಕ್ಷ ನಾಯಕರಾಗಿದ್ದರು ಎಂಬ ಕಾರಣಕ್ಕೆ ಪದ್ಮನಾಭರೆಡ್ಡಿ ಅವರನ್ನು ಮತ್ತೆ ಮೇಯರ್ ಸ್ಥಾನಕ್ಕೆ ಪರಿಗಣಿಸಿದಂತಿಲ್ಲ ಎಂದು ಮೂಲಗಳು ಹೇಳಿವೆ.
ಬೆಳಗ್ಗೆ ಉಪಮೇಯರ್ ಬದಲು: ರೆಡ್ಡಿ ಸಮುದಾಯಕ್ಕೆ ಮೇಯರ್ ಸ್ಥಾನ ಸಿಗದ ಕಾರಣ ಉಪಮೇಯರ್ ಸ್ಥಾನವನ್ನಾದರೂ ನೀಡಬೇಕು ಎಂದು ಕೆಲ ಶಾಸಕರು ಒತ್ತಾಯಿಸಿದರು. ಅದರಂತೆ ಗುರುಮೂರ್ತಿರೆಡ್ಡಿ ಹೆಸರು ಉಪ ಮೇಯರ್ ಸ್ಥಾನಕ್ಕೆ ಅಂತಿಮಗೊಂಡಿತ್ತು. ಮೇಯರ್, ಉಪಮೇಯರ್ ಅಭ್ಯರ್ಥಿ ಆಯ್ಕೆ ಮಾಹಿತಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಂಗಳವಾರ ಮುಂಜಾನೆ ನೀಡಲಾಗಿತ್ತು. ಆದರೆ ಮಂಗಳವಾರ ಬೆಳಗ್ಗೆ ಕೆಲ ಶಾಸಕರು ಮತ್ತೆ ರಾಮ ಮೋಹನರಾಜು ಪರ ವಕಾಲತ್ತು ವಹಿಸಿ ನಳಿನ್ ಕುಮಾರ್ ಕಟೀಲ್ ಅವರ ಸಮ್ಮತಿಯನ್ನೂ ಪಡೆದು ಅಂತಿಮ ಗೊಳಿಸಿದರು ಎಂದು ಮೂಲಗಳು ತಿಳಿಸಿವೆ.
ಮೇಯರ್ ಆಯ್ಕೆ ವಿಚಾರ ಗೊಂದಲ: ಸೆ. 23ರಂದು ಮುಖ್ಯಮಂತ್ರಿಗಳ ಗೃಹ ಕಚೇರಿ “ಕೃಷ್ಣಾ’ದಲ್ಲಿ ಯಡಿಯೂರಪ್ಪ ಅವರು ನಗರದಸಚಿವರು, ಸಂಸದರು, ಶಾಸಕರ ಸಭೆ ಕರೆದು ಚರ್ಚಿಸಿದರು. ಬಳಿಕ ಮೇಯರ್, ಉಪ ಮೇಯರ್ ಅಭ್ಯರ್ಥಿ ಆಯ್ಕೆ ಸಂಬಂಧ ಶಾಸಕ ಎಸ್.ರಘು ನೇತೃತ್ವದಲ್ಲಿ ಸಮಿತಿ ರಚಿನೆಗೆ ನಿರ್ಧರಿಸಲಾಗಿತ್ತು. ವಾಸ್ತವದಲ್ಲಿ ಸಿಎಂ ಬಿಎಸ್‌ವೈ ಸಭೆ ಕರೆದಿರಲಿಲ್ಲ ಎಂದು ಮೂಲಗಳು ಹೇಳಿವೆ.