ಕಲಕೇರಿ: ಖಾನಾಪುರ ಗ್ರಾಮದ ಮೂವರು ದರೋಡೆಕೋರರನ್ನು ಬಂಧಿಸಿ 14 ಬೈಕ್, 1 ಇಂಜಿನ್ ಮತ್ತು 20 ಗ್ರಾಂ ಮೌಲ್ಯದ ಎರಡು ಬಂಗಾರದ ಉಂಗುರಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಕಲಕೇರಿ ಗ್ರಾಮದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಿಎಸ್‌ಐ ಎಂ.ಎನ್. ಸಿಂಧೂರ ನೇತೃತ್ವದ ತಂಡ ಮಾ.30 ರಂದು ಬೆಳಿಗ್ಗೆ 4.30ರ ಸುಮಾರಿಗೆ ಕಲಕೇರಿ ಪೊಲೀಸ್
ಠಾಣಾ ವ್ಯಾಪ್ತಿಯ ಗೋಲಗೇರಿ ಗ್ರಾಮದ ಶಹಾಪುರ-ಸಿಂದಗಿ ರಸ್ತೆ ಮಾರ್ಗದ ನಾಕಾದಲ್ಲಿ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಶಹಾಪುರ ಕಡೆಯಿಂದ ಬಂದ 2 ಬೈಕ್ ಗಳನ್ನು ನಿಲ್ಲಿಸಿ ನಾಲ್ಕು ಜನರು ಸವಾರರನ್ನು ವಿಚಾರಿಸಿದಾಗ ಅವರು ಸಮರ್ಪಕ ಉತ್ತರ ನೀಡಲಿಲ್ಲ. ಈ ಕುರಿತು ಸಂದೇಹ ಬಂದು ಬೈಕ್ ನಂಬರ ತಪಾಸಣೆ ಮಾಡಿದಾಗ ಒಂದು ಬೈಕ್ ಕಲಕೇರಿ ಠಾಣಾ ವ್ಯಾಪ್ತಿಯಲ್ಲಿ ಕಳುವಾಗಿದ್ದ ಬೈಕ್ ಎಂದು ತಿಳಿದು ಬಂದಿದೆ.ಆ ಕೂಡಲೇ ಪಿಎಸ್‌ಐ ಎಂ.ಎನ್.ಸಿಂಧೂರ ಹಾಗೂ ಸಿಂದಗಿ ಸಿಪಿಐ ಮಹಾಂತೇಶ ದ್ಯಾಮಣ್ಣವರ ಅವರ ಮಾರ್ಗದರ್ಶನದಲ್ಲಿ ವಾಹನ ಸಮೇತ ಠಾಣೆಗೆ ತಂದು ವಿಚಾರಣೆ ನಡೆಸಲಾಯಿತು.
ವಿಚಾರಣೆ ವೇಳೆ ಕಳೆದ ಒಂದು ವರ್ಷದ ಅವಧಿಯಲ್ಲಿ ಕಲಕೇರಿ, ಖಾನಾಪೂರ, ಸಿಂದಗಿ, ತಾಳಿಕೋಟಿ, ಕೆಂಭಾವಿ ಸೇರಿದಂತೆ ಇತರೆಡೆ ಅವರು ಮಾಡಿರುವ ಕಳ್ಳತನ ಬಯಲಿಗೆ ಬಂದಿದೆ. ಒಟ್ಟು 6 ಜನರ ತಂಡ ಈ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಅವರಲ್ಲಿ 4 ಜನರನ್ನು ಬಂಧಿಸಲಾಗಿದೆ. ಉಳಿದವರ ಬಂಧನಕ್ಕೆ ಬಲೆ ಬೀಸಲಾಗಿದೆ. ಬಂಧಿತರಿಂದ ಸುಮಾರು 47 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಕಲಕೇರಿ ಪಿಎಸ್‌ಐ ಎಂ.ಎನ್.ಸಿಂಧೂರ, ಎಎಸ್‌ಐ ಆರ್.ಎಸ್.ಬಸರಕೋಡ, ಸಿಬ್ಬಂದಿಗಳಾದ ಬಿ.ಎ.ಕುಡಚಿ,ಎಸ್.ವೈ.ತಿಗಡಿ, ಎ.ಚಾಂದ, ಎಸ್.ಬಿ. ಗದ್ಯಾಳ, ಎನ್.ಎ. ನಾಡಗೌಡರ, ಎಸ್.ಎಸ್. ಹಾಳಗೋಡಿ, ಎಂ.ಎಸ್ .ಬಿರಾದಾರ, ಎಂ.ಎಚ್.ಗೌಂಡಿ, ಎಸ್.ಎಂ. ಪಾಟೀಲ, ಕೆ.ವೈ.ಬಿರಾದಾರ ಪಾಲ್ಗೊಂಡಿದ್ದರು. ಪ್ರಕರಣ ಪತ್ತೆಗೆ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಶ್ಲಾಘಿಸಿದ್ದಾರೆ.
ಸಾರ್ವಜನಿಕರ ಮೆಚ್ಚುಗೆ: ಕಲಕೇರಿ ಠಾಣೆಗೆ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಬೈಕ್ ದರೋಡೆ ಕೋರ ವ್ಯಾಪಕ ಜಾಲವನ್ನು ಸೆರೆ ಹಿಡಿಯುವ ಮೂಲಕ ಉತ್ತಮ ಕಾರ್ಯ ಮಾಡಿದ್ದು, ಇದು ಅಪರಾಧಿಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಗ್ರಾಮಸ್ಥರು ಪಿಎಸ್‌ಐ ಸಿಂಧೂರ ಹಾಗೂ ಠಾಣಾ ಸಿಬ್ಬಂದಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.