ಕಾಳಗಿ: ಪ್ರತ್ಯೇಕ ಘಟನೆಗಳಲ್ಲಿ ಭಾರೀ ಗಾಳಿಮಳೆಗೆ ರಾಜ್ಯದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಮಂಗಲಗಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಗುಡುಗು, ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಮನೆಯೊಂದರ ಮೇಲ್ಛಾವಣಿ ಕುಸಿದು ಮೂವರು ಮೃತಪಟ್ಟಿದ್ದಾರೆ. ನಾಲ್ವರಿಗೆ ಗಾಯಗಳಾಗಿವೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನಲ್ಲಿ ಗಾಳಿಗೆ ಮರ ಉರುಳಿ ಓರ್ವ ವೃದ್ಧರು ಸಾವನ್ನಪ್ಪಿದ್ದಾರೆ.
ಮೂರ್ನಾಲ್ಕು ದಿನಗಳಲ್ಲಿ ಕೇರಳಕ್ಕೆ ಮುಂಗಾರು
ಇದೇವೇಳೆ ಮುಂಗಾರು ಮಾರುತಗಳ ಮುನ್ನಡೆ ನಿಧಾನವಾಗಿ ಬಲಗೊಳ್ಳುತ್ತಿದೆ. ಬಂಗಾಲ ಕೊಲ್ಲಿ ಸಮುದ್ರದ ನೈಋತ್ಯ, ಆಗ್ನೇಯ, ಪೂರ್ವ ಮತ್ತು ಕೇಂದ್ರ ಭಾಗಗಳನ್ನು ಈಗಾಗಲೇ ಆವರಿಸಿದ್ದು, ಅಂಡಮಾನ್ ಸಮುದ್ರ ಮತ್ತು ಅಂಡಮಾನ್ – ನಿಕೋಬಾರ್ ದ್ವೀಪಗಳನ್ನೂ ನಿಧಾನವಾಗಿ ತಲುಪುತ್ತಿವೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಕೇರಳ ಕರಾವಳಿ ತಲುಪಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಕೇರಳ ಕರಾವಳಿಗೆ ಜೂನ್ 6ರಂದು ಆಗಮಿಸಲಿವೆ ಎಂದು ಅದು ತಿಳಿಸಿದೆ.
ಈ ನಡುವೆ ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆಯಾದ ಸ್ಕೈಮೆಟ್ ಕೂಡ ಪ್ರಕಟನೆಯೊಂದನ್ನು ಹೊರಡಿಸಿದ್ದು, ಮುಂಗಾರು ಮಾರುತಗಳು ಜೂ. 7ರಂದು ಕೇರಳ ಕರಾವಳಿಗೆ ಅಪ್ಪಳಿಸಲಿವೆ ಎಂದಿದೆ.