ಬಾಗಲಕೋಟೆ: ಕೋವಿಡ್ 19 ಸೋಂಕಿನಿಂದ ಶುಕ್ರವಾರ ಸಹೋದರರು ಸೇರಿ ಮತ್ತೆ ನಾಲ್ವರು ಬಲಿಯಾಗಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.
ಬಾಗಲಕೋಟೆ ತಾಲೂಕಿನ ಕೇಸನೂರ ಗ್ರಾಮದ 60 ವರ್ಷದ ಮಹಿಳೆ ತೀವ್ರ ಉಸಿರಾಟ ತೊಂದರೆ, ಜ್ವರ, ಭೇದಿಯಿಂದ ಜಿಲ್ಲಾ ಜು.15ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ರ್‍ಯಾಪಿಡ್ ಕಿಟ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದು, ಟ್ರುನೆಟ್ ಕೋವಿಡ್19 ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಉಸಿರಾಟದ ತೀವ್ರ ತೊಂದರೆಯಾದಾಗ, ವೆಂಟಿಲೇಟರ್ ಅಳವಡಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.
ಬಾಗಲಕೋಟೆ ಹಳಪೇಡ ಮಡುವಿನ 62 ವರ್ಷದ ವ್ಯಕ್ತಿ ಎಚ್‌ಎಸ್‌ಕೆ ಖಾಸಗಿ ಆಸ್ಪತ್ರೆಯಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಬಂದಿದ್ದರು. ವೆಂಟಿಲೇಟರ್ ಮೇಲೆಯೇ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಿದ ವೇಳೆ ಉಸಿರಾಟದ ತೊಂದರೆಯಿಂದ ಉಳಲುತ್ತಿದ್ದರು. ಸ್ಥಳೀಯ ಲ್ಯಾಬ್‌ನಲ್ಲಿ ಅವರಿಗೆ ಕೋವಿಡ್ ಪಾಜಿಟಿವ್ ಬಂದಿದ್ದು, ಬೆಂಗಳೂರಿನ ವರದಿ ಬರಬೇಕಿದೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ನಸುಕಿನ 1.30ಕ್ಕೆ ಮೃತಪಟ್ಟಿದ್ದಾರೆ.
ಸಹೋದರರು ಬಲಿ: ಬಾಗಲಕೋಟೆ ನಗರದ ಇಬ್ಬರು ಸಹೋದರರು ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಕಳೆದ ಮೂರು ದಿನಗಳಿಂದ ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಯಿಮದ ಬಳುತ್ತಿದ್ದ 42 ವರ್ಷದ ಪುರುಷನಿಗೆ ಕೋವಿಡ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ಬೆಳಗ್ಗೆ 9ಕ್ಕೆ ಮೃತಪಟ್ಟಿದ್ದಾರೆ. ಇವರಿಗೆ ರ್‍ಯಾಪಿಟ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದು, ಬೆಂಗಳೂರಿನ ಆರ್‌ಟಿಪಿಸಿಆರ್ ಪರೀಕ್ಷೆಯ ವರದಿ ಬರಬೇಕಿದೆ. ಮುಂಜಾಗೃತವಾಗಿ ಅವರ ಅಂತ್ಯಕ್ರಿಯೆಯನ್ನು ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ.
ಇನ್ನು 42 ವರ್ಷದ ಮೃತ ವ್ಯಕ್ತಿಯ ಸಹೋದರ 39 ವರ್ಷದ ಪುರುಷ ಕೂಡ ಗುರುವಾರ ಬೆಳಗ್ಗೆ 11ಕ್ಕೆ ಬಲಿಯಾಗಿದ್ದಾರೆ. ಇವರಿಗೂ ಕೆಮ್ಮು, ಜ್ವರ ಹಾಗೂ ಉಸಿರಾಟದ ತೊಂದರೆ ಇತ್ತು. ಜುಲೈ 13ರಂದು ಜಿಲ್ಲಾ ಆಸ್ಪತ್ರೆಗೆ ಅತ್ಯಂತ ಗಂಭೀರ ಆರೋಗ್ಯ ಸ್ಥಿತಿಯಲ್ಲಿ ದಾಖಲಾಗಿದ್ದರು. ವೆಂಟಿಲೇಟರ್ ಸಹಿತ ಚಿಕಿತ್ಸೆ ಕಲ್ಪಿಸಿದರೂ, ಸ್ಪಂದಿಸದೇ ಮೃತಪಟ್ಟಿದ್ದಾರೆ. ಬೆಂಗಳೂರಿಗೆ ಕಳುಹಿಸಿದ ಇವರ ವರದಿಯೂ ಬರಬೇಕಿದೆ.
ಕಳೆದ 24 ಗಂಟೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ನಾಲ್ವರು ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಕೋವಿಡ್ ಸೋಂಕಿನಿಂದ 29 ಜನರು ಸಾವನ್ನಪ್ಪಿದ್ದಾರೆ.