ಕಾಸರಗೋಡು: ಕೊಲ್ಲಂ ಜಿಲ್ಲೆಯ ಓಯೂರ್‌ನಲ್ಲಿ ಆರು ವರ್ಷದ ವಿದ್ಯಾರ್ಥಿನಿಯನ್ನು ಅಪಹರಿಸಿದ ಘಟನೆಯ ಬೆನ್ನಲ್ಲೇ ಕಾಸರಗೋಡು ಠಾಣೆ ವ್ಯಾಪ್ತಿಯ ಮೂವರು ವಿದ್ಯಾರ್ಥಿಗಳ ಸಹಿತ ನಾಲ್ವರು ಅಪ್ರಾಪ್ತ ವಯಸ್ಸಿನ ಬಾಲಕರು ನಾಪತ್ತೆಯಾಗಿದ್ದು, ಆತಂಕ ಸೃಷ್ಟಿಸಿದೆ.
ಈ ನಾಲ್ವರು ಬಾಲಕರ ಪೈಕಿ ಮೂವರು ವಿದ್ಯಾರ್ಥಿಗಳು ನ. 27ರಂದು ಸಂಜೆ ಶಾಲೆಯಿಂದ ಮನೆಗೆ ಬಂದಿದ್ದರು. ಆ ಬಳಿಕ ಆಟ ಆಡಲೆಂದು ಮನೆಯಿಂದ ಹೊರಗೆ ಹೋಗಿದ್ದರು. ಮೂವರು ವಿದ್ಯಾರ್ಥಿಗಳು ಹಾಗೂ ಇದೇ ಪರಿಸರದ ಇನ್ನೊರ್ವ ಸಹಿತ ನಾಲ್ವರು ತಡವಾದರೂ ಮನೆಗೆ ಬಂದಿರಲಿಲ್ಲ. ಎಲ್ಲರೂ 15ಕ್ಕಿಂತ ಕೆಳಗಿನ ವಯಸ್ಸಿನವರಾಗಿದ್ದಾರೆ. ಮಕ್ಕಳು ಮನೆಗೆ ವಾಪಸಾಗದಿದ್ದುದರಿಂದ ಮನೆಯವರು ಕಾಸರಗೋಡು ಪೊಲೀಸರಿಗೆ ದೂರು ನೀಡಿದರು.
ತತ್‌ಕ್ಷಣ ಎಚ್ಚೆತ್ತ ಪೊಲೀಸರು ಮಂಗಳೂರು ಸಹಿತ ಕರ್ನಾಟಕದ ವಿವಿಧ ಠಾಣೆಗಳಿಗೆ ಮಾಹಿತಿ ನೀಡಿದರು. ನಾಪತ್ತೆಯಾದ ಮಕ್ಕಳ ಪೈಕಿ ಓರ್ವನ ಕೈಯಲ್ಲಿ ಮೊಬೈಲ್ ಫೋನ್ ಇತ್ತು. ಅದರ ಟವರ್ ಲೊಕೇಶನ್‌ನ ಜಾಡು ಹಿಡಿದು ಪೊಲೀಸರು ಶೋಧ ಕಾರ್ಯ ನಡೆಸಿದಾಗ ಉಡುಪಿಯಲ್ಲಿರುವ ಮಾಹಿತಿ ಲಭಿಸಿತು.
ತತ್‌ಕ್ಷಣ ಈ ಬಗ್ಗೆ ಉಡುಪಿ ಪೊಲೀಸರಿಗೆ ಮಾಹಿತಿ ನೀಡಿ, ಅವರ ಸಹಾಯದಿಂದ ನಾಲ್ವರು ಮಕ್ಕಳನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಕಾಸರಗೋಡಿನಿಂದ ಹೆತ್ತವರ ಸಹಿತ ಪೊಲೀಸರು ಸೋಮವಾರ ರಾತ್ರಿಯೇ ಉಡುಪಿಗೆ ತೆರಳಿ ಅವರನ್ನು ಕಾಸರ ಗೋಡು ಠಾಣೆಗೆ ಕರೆತರಲಾಯಿತು.
ಈ ಬಾಲಕರಿಗೆ ಕೌನ್ಸೆಲಿಂಗ್ ನಡೆಸಿ ಹೆತ್ತವರಿಗೆ ಹಸ್ತಾಂತರಿಸಲಾಯಿತು. ತಾವು ಗೋವಾಕ್ಕೆ ಪ್ರವಾಸ ಹೋಗಲು ಯೋಜನೆ ಹಾಕಿದ್ದಾಗಿ ಮಕ್ಕಳು ಹೇಳಿಕೆ ನೀಡಿದ್ದಾರೆ. ಮಕ್ಕಳ ಪತ್ತೆಯೊಂದಿಗೆ ಆತಂಕ ನಿವಾರಣೆಯಾಯಿತು.