ಅಂಕೋಲಾ: ಆ್ಯಪ್ ಮೂಲಕ ಸಾಲ ಪಡೆದವರ ನಂಬರ್ ಹ್ಯಾಕ್ ಮಾಡಿ ವೈಯಕ್ತಿಕ ಮಾಹಿತಿ ಸಂಗ್ರಹಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಅಂಕೋಲಾ ಮೂಲದ ನಾಲ್ವರು ಯುವಕರನ್ನು ಮುಂಬೈ ಸೈಬರ್ ಕ್ರೈಂ ಪೊಲೀಸರು ವಶಕ್ಕೆ ಪಡೆದು ಮುಂಬೈಗೆ ಕರೆದೊಯ್ದಿದ್ದಾರೆ.
ಆರೋಪಿತರ ಜಾಡು ಹಿಡಿದು ಅಂಕೋಲಾಕ್ಕೆ ಬಂದ ಮುಂಬೈ ಪೊಲೀಸರು ತಾಲೂಕಿನ ಸುಹೈಲ್ ಸಯ್ಯದ್ (24), ಸಯ್ಯದ್ ಮಹ್ಮದ ಅತ್ತಾರ್ (24), ಮಹ್ಮದ ಕೈಫ್ ಖಾದ್ರಿ (22) ಮತ್ತು ಮುಫ್ತಿಯಾಜ್ ಫಿರಜಾದೆ ಎನ್ನುವವರನ್ನು ವಶಕ್ಕೆ ಪಡೆದಿದ್ದಾಗಿ ತಿಳಿದು ಬಂದಿದೆ.
ಬಂಧಿತರ ವಿಚಾರಣೆ ನಡೆಸಿ ಜಾಲದ ಪ್ರಮುಖ ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ. ಬಂಧಿತ ಯುವಕರು ಲೋನ್ ಆ್ಯಪ್‌ನ ಸಾಲ ಪಡೆದವರ ಮೊಬೈಲ್ ಹ್ಯಾಕ್ ಮಾಡಿ ವೈಯಕ್ತಿಕ ಮಾಹಿತಿ ಸಂಗ್ರಹಿಸಿ ಕರೆ ಮಾಡಿ ಹಣಕ್ಕಾಗಿ ಮಾನಸಿಕ ಕಿರುಕುಳ ನೀಡುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಬಂಧಿತರಲ್ಲಿ ಸುಹೈಲ್ ಸಯ್ಯದ್ ಎಂಬಾತ ಎಂಬಿಎ ಪದವೀಧರನಾಗಿದ್ದು ಜಾಲದ ಸುಪರ್ ವೈಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಸೈಯದ್ ಅತ್ತಾರ್ ಐಟಿ ಕೋರ್ಸ್, ಮಹ್ಮದ ಖಾದ್ರಿ ಪಿಯುಸಿ ಮತ್ತು ಫಿರಜಾದೆ ಬಿಕಾಂ ಪದವೀಧರನಾಗಿದ್ದು ಲೋನ್ ಆ್ಯಪ್ ವಂಚನೆಗೆ ಸಿಲುಕಿದವರ ಮೊಬೈಲ್‌ನಲ್ಲಿ ಇರುವ ಫೋಟೋಗಳನ್ನು ಅಶ್ಲೀಲವಾಗಿ ಆ್ಯಡಿಟ್ ಮಾಡಿ ಅವರಿಗೆ ಕಳಿಸಿ ಹಣಕ್ಕಾಗಿ ಮಾನಸಿಕ ಹಿಂಸೆ ನೀಡುವ ಆರೋಪದಡಿ ಬಂಧಿಸಲಾಗಿದೆ.
ಲೋನ್ ಆ್ಯಪ್ ವಂಚನೆ ಪ್ರಕರಣಗಳನ್ನು ಮಹಾರಾಷ್ಟ್ರ ಗೃಹ ಸಚಿವರು ಗಂಭೀರವಾಗಿ ಪರಿಗಣಿಸಿ 15 ದಿನಗಳ ಹಿಂದೆ ಸೈಬರ್ ಪೊಲೀಸ್ ಅಧಿಕಾರಿಗಳ ಸಭೆ ಕರೆದು ಕಠಿಣ ಕ್ರಮಕ್ಕೆ ಸೂಚಿಸಿದ್ದರು.
ಮಹಾರಾಷ್ಟ್ರದ ಸೈಬರ್ ಪೊಲೀಸರು ಪ್ರಕರಣವೊಂದರ ಜಾಡು ಹಿಡಿದು ಧಾರವಾಡದಲ್ಲಿ ಅಹ್ಮದ್ ಹುಸೇನ್ ಎಂಬಾತನನ್ನು ಬಂಧಿಸಿ ಆತನ ವಿಚಾರಣೆ ಸಂದರ್ಭದಲ್ಲಿ ಇನ್ನುಳಿದ ಅಂಕೋಲಾದ ಆರೋಪಿತರ ಕುರಿತು ಮಾಹಿತಿ ಪಡೆದ ಬಳಿಕ ಬಂಧಿಸಿದ್ದಾರೆ.