ಉಡುಪಿ: ಅಂತರಾಜ್ಯ ದರೋಡೆಕೋರರಾದ ಇರಾನಿ ಗ್ಯಾಂಗ್ ನ ನಾಲ್ವರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ದೆಹಲಿ, ಮಹಾರಾಷ್ಟ್ರ, ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ತಾವು ಪೊಲೀಸರೆಂದು ಹೇಳಿ, ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ನಾಲ್ವರನ್ನು ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು, ಮಹಾರಾಷ್ಟ್ರದ ಜಾಕೀರ್ ಹುಸೇನ್ (26), ಕಂಬರ್ ರಹೀಂ ಮಿರ್ಜಾ(32), ಅಕ್ಷಯ್ ಸಂಜಯ್ ಗೋಸಾವಿ(22), ಶಾಹರುಖ್ ಬಂದೆನವಾಜ್ ಶೇಖ್ (24) ಎಂದು ಗುರುತಿಸಲಾಗಿದೆ.
ಆರೋಪಿಗಳು ದೆಹಲಿ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಚಿನ್ನಾಭರಣ ದೋಚುತ್ತಿದ್ದು, ಒಂಟಿಯಾಗಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರು ಮತ್ತು ಪುರುಷರೇ ಇವರ ಗುರಿಯಾಗಿದ್ದರು. ನಾವು ಪೊಲೀಸರು, ಮುಂದೆ ಗಲಾಟೆ ಆಗಿದೆ, ಚಿನ್ನಾಭರಣ ಬ್ಯಾಗಿನಲ್ಲಿ ಹಾಕಿಕೊಂಡು ಹೋಗಿ ಎಂದು ಹೇಳಿ, ಅವರಲ್ಲಿದ್ದ ಚಿನ್ನಾಭರಣಗಳನ್ನು ತೆಗೆದು ಬ್ಯಾಗಿನಲ್ಲಿ ಹಾಕಿ ಕೊಡುವುದಾಗಿ ನಂಬಿಸಿ, ಅದನ್ನು ದೋಚುತ್ತಿದ್ದರು ಎಂದು ತಿಳಿದುಬಂದಿದೆ.
ದಿನಾಂಕ 14-10-2020ರಂದು ಉಡುಪಿ ಡಿಸಿಐಬಿ ಪೊಲೀಸ್ ಇನ್ಸ್ ಪೆಕ್ಟರ್ ಮಂಜಪ್ಪ ಡಿ,ಆರ್ ರವರು ಖಚಿತ ಮಾಹಿತಿ ಮೇರೆಗೆ ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಸ್ಥಳದ ಬಳಿ ಈ ಅಂತರಾಜ್ಯ ವಂಚನೆಗಾರರನ್ನು ಬಂಧಿಸಿದ್ದಾರೆ. ಮಾತ್ರವಲ್ಲದೆ ಆರೋಪಿಗಳಿಂದ ಕೃತ್ಯಕ್ಕೆ ಬಳಸುತ್ತಿದ್ದ ಚಾವರ್ ಲೇಟ್ ಬೀಟ್ ಕಾರು, ಹೊಂಡಾ ಶೈನ್ ಬೈಕ್, 12 ಗ್ರಾಂ ತೂಕದ ಚಿನ್ನದ ಸರ, 5,100 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಅದರ ಜೊತೆಗೆ ಆರೋಪಿಗಳು ಮಾರಾಟ ಮಾಡಿದ್ದ 65 ಗ್ರಾಂ ಚಿನ್ನವನ್ನು ಮಹಾರಾಷ್ಟ್ರದ ಶ್ರೀರಾಮ್ ಪುರದ ಚಿನ್ನದಂಗಡಿಯಿಂದ ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ ಸುಮಾರು 7 ಲಕ್ಷ ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ್ ಎನ್. ಐಪಿಎಸ್ ಅವರ ನಿರ್ದೇಶನದಲ್ಲಿ, ಪೊಲೀಸ್ ಅಧೀಕ್ಷಕರಾದ ಕುಮಾರ್ ಚಂದ್ರ ಕೆ.ಎಸ್.ಪಿ.ಎಸ್ ಹಾಗೂ ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಟಿ. ಆರ್ ಜೈಶಂಕರ್ ಅವರ ಮಾರ್ಗದರ್ಶನದಲ್ಲಿ, ಉಡುಪಿ ನಗರ ವೃತ್ತದ ಸಿ.ಪಿ.ಐ ಮಂಜುನಾಥ, ಡಿಸಿಐಬಿ ಪೊಲೀಸ್ ನಿರೀಕ್ಷಕರಾದ ಮಂಜುನಾಥ್ ಡಿ.ಆರ್ ಮತ್ತು ಸಿಬ್ಬಂದಿ ಹಾಗೂ ಉಡುಪಿ ನಗರ ಠಾಣೆಯ ಪಿಎಸ್ ಐ ಶಕ್ತಿವೇಲು ಮತ್ತು ಕುಂದಾಪುರ ಠಾಣಾ ಪಿಎಸ್ ಐ ಸದಾಶಿವ ಗವರೋಜಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.