Advertisement

Arrested: ಚಿನ್ನಾಭರಣ ದರೋಡೆಗೆ ಯತ್ನಿಸಿದ್ದ ನಾಲ್ವರ ಬಂಧನ 

10:22 AM Mar 18, 2024 | Team Udayavani |

ಬೆಂಗಳೂರು: ಕೊಡಿಗೇಹಳ್ಳಿಯ ದೇವಿ ನಗರದ ಲಕ್ಷ್ಮೀ ಬ್ಯಾಂಕರ್ಸ್‌ ಆ್ಯಂಡ್‌ ಜ್ಯುವೆಲರ್ಸ್‌ ಅಂಗಡಿಗೆ ನುಗ್ಗಿ ಮಾಲೀಕನ ಮೇಲೆ ಗುಂಡಿನ ದಾಳಿ ನಡೆಸಿ ಚಿನ್ನಾಭರಣ ದೋಚಲು ಯತ್ನಿಸಿದ್ದ ನಾಲ್ವರು ಆರೋಪಿಗಳನ್ನು ಕೊಡಿಗೇಹಳ್ಳಿ ಪೊಲೀಸರು ಮಧ್ಯ ಪ್ರದೇಶದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಮಧ್ಯಪ್ರದೇಶದ ಖಾನಾ ಪಂಡಿತ್‌, ಮೋಸೆ ಅಲಿಯಾಸ್‌ ಬಂಟಿ, ಆಶು ಪಂಡಿತ್‌ ಹಾಗೂ ಸೂರಜ್‌ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಮಾ.14ರಂದು ಬೆಳಗ್ಗೆ 11 ಗಂಟೆಗೆ ಮಳಿಗೆಗೆ ನುಗ್ಗಿದ್ದ ಆರೋಪಿಗಳು, ಮಾಲೀಕ ಹಾಪುರಾಮ್‌ (38) ಹಾಗೂ ಅನಂತ ರಾಮ್‌ (21) ಎಂಬುವರ ಮೇಲೆ ಎರಡು ಸುತ್ತು ಗುಂಡು ಹಾರಿಸಿ, ಚಿನ್ನಾಭರಣ ದೋಚಲು ಯತ್ನಿಸಿದ್ದರು. ಆದರೆ, ಸಾರ್ವಜನಿಕರು ಜಮಾವಣೆ ಗೊಂಡಿದ್ದರಿಂದ ಆರೋಪಿಗಳು ಸ್ಥಳದಲ್ಲೇ ಪಿಸ್ತೂಲ್‌ ಬಿಟ್ಟು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

ಪ್ರಕರಣ ದಾಖಲಾದ ಬಳಿಕ ಆರೋಪಿ ಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಗಳು ಯಾವುದೇ ಚಿನ್ನಾಭರಣ ದೋಚಿಕೊಂಡು ಹೋಗಿರಲಿಲ್ಲ. ಜತೆಗೆ ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳು ಇದ್ದವು. ಹೀಗಾಗಿ ಕೆಲ ಸಾಂದರ್ಭಿಕ ಪುರಾವೆಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಿದ್ದ ವಿಶೇಷ ತಂಡ ಮಧ್ಯ ಪ್ರದೇಶಕ್ಕೆ ಹೋಗಿತ್ತು. ಅಲ್ಲಿಯೇ ನಾಲ್ವರು ಆರೋಪಿಗಳನ್ನು ಸ್ಥಳೀಯ ಪೊಲೀಸರ ಸಹಾಯದಿಂದ ವಶಕ್ಕೆ ಪಡೆದದ್ದಾರೆ. ಸದ್ಯದಲ್ಲೇ ನಗರಕ್ಕೆ ಕರೆತರಲಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ವಶಕ್ಕೆ ಪಡೆದುಕೊಂಡಿರುವ ಆರೋಪಿಗಳು ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲೂ ದರೋಡೆ ಮಾಡಿರುವ ಮಾಹಿತಿ ಇದೆ. ಬೆಂಗಳೂರಿನಲ್ಲಿ ನಡೆದ ದರೋಡೆಯಲ್ಲೂ ಸ್ಥಳೀಯ ವ್ಯಕ್ತಿ  ಸಹಾಯ ಮಾಡಿದ್ದು, ಆತನ ಮಾಹಿತಿ ಕಲೆಹಾಕಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next