ಬಾಗಲಕೋಟೆ: ಜಿಲ್ಲೆಯಲ್ಲಿ ಮತ್ತೆ ಇಬ್ಬರಿಗೆ ಕೋವಿಡ್ ಸೋಂಕು ಶನಿವಾರ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 163ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 113 ಜನ ಕೋವಿಡ್‌ನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ.ರಾಜೇಂದ್ರ ತಿಳಿಸಿದ್ದಾರೆ.
ಉಸಿರಾಟದ ತೊಂದರೆಗೊಳಗಾದ ಗುಳೇದಗುಡ್ಡ ಪಟ್ಟಣದ 60 ವರ್ಷದ ಪುರುಷ (ಬಿಜಿಕೆ-162), ಕೋವಿಡ್ ಸೋಂಕು ದೃಢಪಟ್ಟ ಪಿ-10638 ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ. ಬಾದಾಮಿ ತಾಲೂಕಿನ ಮಣಿನಾಗರ ಗ್ರಾಮದ 26 ವರ್ಷದ ಯುವಕ (ಬಿಜಿಕೆ-163) ಕೋವಿಡ್ ದೃಢಪಟ್ಟಿದೆ. ಹೊಸದಾಗಿ ದೃಢಪಟ್ಟವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 892 ಸ್ಯಾಂಪಲ್‌ಗಳ ವರದಿ ನಿರೀಕ್ಷಿಸಲಾಗುತ್ತಿದೆ. ಪ್ರತ್ಯೇಕವಾಗಿ 688 ಜನರು ಮೇಲೆ ನಿಗಾದಲ್ಲಿದ್ದಾರೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 12047 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 10919 ನೆಗಟಿವ್, 163 ಪಾಸಿಟಿವ್ ಪತ್ತೆಯಾಗಿವೆ.
ಕೋವಿಡ್-19ದಿಂದ ಒಟ್ಟು 117 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು 48 ಮಾತ್ರ ಸಕ್ರಿಯ ಪ್ರಕರಣಗಳು ಇವೆ. ಇಲ್ಲಿವರೆಗೆ ಒಟ್ಟು 21 ಸ್ಯಾಂಪಲ್‌ಗಳು ಮಾತ್ರ ರಿಜೆಕ್ಟ್ ಆಗಿರುತ್ತವೆ. ಕಂಟೇನ್ಮೆಂಟ್ ಝೋನ್ 10 ಇದ್ದು, ಇನ್‌ಸ್ಟಿಟ್ಯೂಶನ್ ಕ್ವಾರಂಟೈನ್‌ನಲ್ಲಿದ್ದ 3502 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಲ್ವರು ಗುಣಮುಖ: ಕೋವಿಡ್ ದಿಂದ ಮತ್ತೆ ನಾಲ್ವರು ಗುಣಮುಖರಾಗಿದ್ದು, ಶನಿವಾರ ಸಂಜೆ ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟಾರೆಯಾಗಿ ಕೊರೊನಾದಿಂದ 117 ಜನ ಗುಣಮುಖರಾಗಿದ್ದಾರೆ. ಮುಧೋಳ ತಾಲೂಕಿನ ತಿಮ್ಮಾಪುರ ಗ್ರಾಮದ 33 ವರ್ಷದ ಪುರುಷ ಪಿ-3412, ಜಮಖಂಡಿ ತಾಲೂಕಿನ ಗೋಠೆ ಗ್ರಾಮದ 23 ವರ್ಷದ ಯುವಕ ಪಿ-7029, ಬಾಗಲಕೋಟೆಯ ಲವಳೇಶ್ವರ ತಾಂಡಾದ 30 ವರ್ಷದ ಪುರುಷ ಪಿ-7823, ಇಲಕಲ್ಲಿನ 38 ವರ್ಷದ ಮಹಿಳೆ ಪಿ-5830 ಕೋವಿಡ್‌ನಿಂದ ಗುಣಮುಖರಾಗಿದ್ದು, ಶನಿವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು.