ಬೆಂಗಳೂರು: ಅಪ್ರಾಪ್ತೆಯನ್ನು ಮದುವೆಯಾಗಲು ಆಕೆಯ ಆಧಾರ್ ಕಾರ್ಡ್ ನಲ್ಲಿ ವಯಸ್ಸು ತಿದ್ದುಪಡಿ ಮಾಡಿದ ಆರೋಪಿ ಸೇರಿ ನಾಲ್ವರನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹುಲಿಯೂರು ದುರ್ಗ ಮೂಲದ ಮನು (21) ಹಾಗೂ ಆತನ ಸ್ನೇಹಿತರಾದ ವೆಂಕಟೇಶ್, ಪ್ರಭು, ಮಲ್ಲೇಶ್ ಬಂಧಿತರು.
ಹುಲಿಯೂರು ದುರ್ಗದ ನಿವಾಸಿ ಮನ ಲಗ್ಗೆರೆಯಲ್ಲಿ ವಾಸವಾಗಿದ್ದು, ಬೆಂಗಳೂರಿನಲ್ಲಿ ಚಾಲಕನಾಗಿದ್ದಾನೆ. ಅತ್ತೆ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ. ಈ ಮಧ್ಯೆ ಈತ ತನ್ನಅತ್ತೆಯ ಮಗಳಾದ 17 ವರ್ಷದ ಬಾಲಕಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆಕೆ ಒಪ್ಪದಿದ್ದಾಗ ಹತ್ಯೆ ಮಾಡುವುದಾಗಿ ಬೆದರಿಸಿದ್ದ. ಹೆದರಿದ ಬಾಲಕಿ ಮದುವೆಗೆ ಒಪ್ಪಿಕೊಂಡಿದ್ದಳು.
ಇದನ್ನೂ ಓದಿ: ಕಳಪೆ ಫಾರ್ಮ್- ಟೀಕೆಗಳಿಂದ ಬೇಸತ್ತು ಬಹುದೊಡ್ಡ ನಿರ್ಧಾರ ಕೈಗೊಂಡ ವಿರಾಟ್ ಕೊಹ್ಲಿ
ಏ.16 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಟಾಟಾ ಏಸ್‌ವಾಹನದಲ್ಲಿ ಕರೆದುಕೊಂಡು ಹೋಗಿ, ಸ್ನೇಹಿತ ವೆಂಕಟೇಶ್ ಜತೆ ಹೋಗಿ ವಿಧಾನಸೌಧ ಲೇಔಟ್ ಗಣಪತಿ ದೇವಾಲಯದಲ್ಲಿ ತಾಳಿ ಕಟ್ಟಿದ್ದಾನೆ. ಬಳಿಕ ಸ್ನೇಹಿತರಾದ ಮಲ್ಲೇಶ್, ಪ್ರಭು ಸಹಾಯದಿಂದ ಆಧಾರ್ ಕಾರ್ಡ್‌ನಲ್ಲಿ ಜನ್ಮ ದಿನಾಂಕ ತಿದ್ದುಪಡಿ ಲಗ್ಗೆರೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ವಿವಾಹ ನೋಂದಣಿ ಮಾಡಿಸಿದ್ದಾರೆ. ಅನಂತರ ಕೊಟ್ಟಿಗೆಪಾಳ್ಯದಲ್ಲಿ ಅಪ್ರಾಪ್ತೆಯ ಇಚ್ಛೆಯ ವಿರುದ್ಧವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ.
ಕೆಲ ದಿನಗಳ ನಂತರ ಬಾಲಕಿ ಈ ವಿಚಾರನ್ನು ಪೋಷಕರಿಗೆ ಹೇಳಿದ್ದಾಳೆ. ಈ ಸಂಬಂಧ ಜು.12ರಂದು ಆರೋಪಿಯ ವಿರುದ್ಧ ದೂರು ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.